ಮೋದಿಗೆ ಮತ ಹಾಕದವರು ತಾಯ್ಗಂಡರು ಎಂದ ಸಿ.ಟಿ.ರವಿ !

Update: 2019-04-14 15:10 GMT

ಚಿಕ್ಕಮಗಳೂರು, ಎ.14: ವಿವಾದಾತ್ಕ ಹೇಳಿಕೆ ನೀಡುತ್ತಾ ಆಗಾಗ್ಗೆ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿರುವ ಶಾಸಕ ಸಿ.ಟಿ.ರವಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುಣಾವಣೆ ವೇಳೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜಾತಿ, ಧರ್ಮಗಳ ಕಾರಣಕ್ಕೆ ನರೇಂದ್ರ ಮೋದಿ ಅವರನ್ನು ವಿರೋಧಿಸುತ್ತಾ ಬಿಜೆಪಿಗೆ ಮತ ಹಾಕದವರು ತಾಯ್ಗಂಡರು ಎಂದು ಹೇಳುವ ಮೂಲಕ ರವಿ, ಮೋದಿಗೆ ಮತ ಹಾಕದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಶನಿವಾರ ಸಂಜೆ ಜಿಲ್ಲೆಯ ಗ್ರಾಮವೊಂದರಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಮುಖಂಡರು ಹಾಗೂ ಭೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಸಿ.ಟಿ.ರವಿ, ಮತ್ತೆ ಮೋದಿ ಪ್ರಧಾನಿಯಾಗಬೇಕೆನ್ನುತ್ತಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಪ್ರತೀ ಭೂತ್‍ನಲ್ಲಿ ಅತೀ ಹೆಚ್ಚು ಲೀಡ್ ತಂದು ಕೊಡುವ ನಿಟ್ಟಿನಲ್ಲಿ ಕಾರ್ಯಕರ್ತರು ಮತದಾರನ್ನು ಮನವೊಲಿಸಬೇಕು. ಮೋದಿ ಅವರಿಗೆ ಪ್ರಧಾನಿಯಾಗಬೇಕೆಂಬ ಆಸೆ ಇಲ್ಲ. ಆ ಆಸೆ ಇರುವುದು ನಮಗೆ, ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯಾಗಿ 18 ಗಂಟೆಗಳ ಕಾಲ ಕೆಲಸ ಮಾಡಿ ದೇಶವನ್ನು ಆರ್ಥಿಕವಾಗಿ ಬಲಿಷ್ಟವಾಗಿರುವ ರಾಷ್ಟ್ರಗಳ ಪೈಕಿ 6ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಅವರು ಮತ್ತೆ ಪ್ರಧಾನಿಯಾದರೆ ಮೊದಲ ಮೂರರೊಳಗಿನ ಸ್ಥಾನಕ್ಕೆ ಬರಲಿದೆ. ಹಾಗಾಗಿ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕೆಂದ ಅವರು, ಈ ಚುನಾವಣೆಯಲ್ಲಿ ಎಲ್ಲ ಮತದಾರರು ಬಿಜೆಪಿ ಮತ ಹಾಕುವಂತೆ ಕಾರ್ಯಕರ್ತರು ಮತದಾರರ ಮನವೊಲಿಸಬೇಕು ಎಂದರು.  

ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರಧಾನಿ ಜಾರಿಗೆ ತಂದ ನೂರಾರು ಯೋಜನೆಗಳ ಪೈಕಿ ಒಂದಲ್ಲ ಒಂದು ಯೋಜನೆ ಪ್ರತೀ ಮತದಾರನಿಗೂ ತಲುಪಿದೆ. ಈ ಯೋಜನೆಗಳ ಲಾಭ ಎಲ್ಲರಿಗೂ ಸಿಗುತ್ತಿದೆ. ಉಜ್ವಲ ಗ್ಯಾಸ್ ಎಲ್ಲ ಧರ್ಮದವರ ಮನೆಯಲ್ಲೂ ಇದೆ. ಆಯುಷ್ಮಾನ್ ಭಾರತ್ ಯೋಜನೆ ಲಾಭ ಎಲ್ಲ ಧರ್ಮದವರೂ ಪಡೆಯುತ್ತಿದ್ದಾರೆ. ಅವರು ಜಾತಿ ಧರ್ಮದವರಿಗೆ ತಾರತಮ್ಯ ಮಾಡಿಲ್ಲ. ಈ ಕಾರಣಕ್ಕೆ ಯಾವ ಜಾತಿ ಧರ್ಮದವರೂ ಮೋದಿಯನ್ನು ವಿರೋಧಿಸಬಾರದು. ಆಕಸ್ಮಾತ್ ಜಾತಿ, ಧರ್ಮದ ಆಧಾರದ ಮೇಲೆ ಮೋದಿಗೆ ಮತ ಹಾಕಬಾರದೆಂದು ನಿರ್ಧರಿಸಿದ್ದರೆ ಅಂತವರು ಉಂಡ ಮನೆಗೆ ದ್ರೋಹ ಬಗೆಯುವವರು, ಹಳ್ಳಿ ಭಾಷೆಯಲ್ಲಿ ಹೇಳುವಂತೆ ತಾಯಿಗಂಡರಾಗಿರುತ್ತಾರೆಂದು ಎಂದು ರವಿ ಮಾತಿನ ಭರಾಟೆಯಲ್ಲಿ ನಾಲಿಗೆ ಹರಿಯಬಿಟ್ಟಿದ್ದಾರೆ.

ಶಾಸಕ ರವಿ ಮಾತನಾಡಿದ ವಿಡಿಯೋ ಇದೀಗ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ರವಿ ಆಡಿದ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾಕ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ತಮಗಿಷ್ಟ ಬಂದವರಿಗೆ ಮತ ಹಾಕುವ ಹಕ್ಕನ್ನು ಸಂವಿಧಾನ ನೀಡಿದ್ದು, ಬಿಜೆಪಿಯವರು ಇಂತವರಿಗೆ ಮತ ಹಾಕಬೇಕು, ಹಾಕದವರು ದೇಶದ್ರೋಹಿಗಳು, ತಾಯಿಗಂಡರು ಎಂದು ಹೇಳಿಕೆ ನೀಡುವ ಮೂಲಕ ಮೋದಿ ಅವರನ್ನು ಸೈದ್ಧಾಂತಿಕವಾಗಿ ವಿರೋಧಿಸುವರನ್ನು ನಿಂದಿಸಿ ಪ್ಯಾಸಿಸ್ಟ್ ಧೋರಣೆ ಅನುಸರಿಸುತ್ತಿದ್ದಾರೆ. ಚುನಾವಣಾ ಆಯೋಗ ಶಾಸಕ ರವಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News