ದೇಶ ಸೇವೆಗಾಗಿ ನಾಗರಿಕ ಸೇವಾ ಕ್ಷೇತ್ರದ ಆಯ್ಕೆ: ಯುಪಿಎಸ್ಸಿ ರ‍್ಯಾಂಕ್‌ ವಿಜೇತೆ ಇಲ್ಮಾ ಅಫ್ರೋಝ್

Update: 2019-04-14 15:47 GMT

ಬೆಂಗಳೂರು, ಎ.15: 2017ನೆ ಸಾಲಿನ ಯುಪಿಎಸ್ಸಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 217ನೆ ರ‍್ಯಾಂಕ್‌ ಪಡೆದು ಐಪಿಎಸ್ ಅಧಿಕಾರಿಯಾಗಿರುವ ಉತ್ತರ ಪ್ರದೇಶದ ಮೊರಾದಬಾದ್ ಜಿಲ್ಲೆಯ ಕುಂಡರ್ಕಿ ಪ್ರದೇಶದ ಸಾಮಾನ್ಯ ಬಡ ರೈತ ಕುಟುಂಬದ ಹಿನ್ನೆಲೆ ಹೊಂದಿರುವ ಯುವತಿ ಇಲ್ಮಾ ಅಫ್ರೋಝ್.

‘ವಾರ್ತಾಭಾರತಿ’ ಪತ್ರಿಕೆಗೆ ನೀಡಿದ ಅವರು ನೀಡಿದ ವಿಶೇಷ ಸಂದರ್ಶನದಲ್ಲಿ ತನ್ನ ಶಿಕ್ಷಣ, ಬದುಕಿನಲ್ಲಿ ಎದುರಿಸಿದ ಸವಾಲುಗಳು, ಹೆಣ್ಣು ಮಕ್ಕಳ ಶಿಕ್ಷಣದ ಆದ್ಯತೆ, ನಾಗರಿಕ ಸೇವಾ ಕ್ಷೇತ್ರದ ಮಹತ್ವದ ಕುರಿತು ಇಲ್ಮಾ ಅಫ್ರೋಝ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

2011ರ ಜನಗಣತಿ ಪ್ರಕಾರ ಕೇವಲ 29,951 ಜನಸಂಖ್ಯೆಯನ್ನು ಹೊಂದಿರುವ ಹಿಂದುಳಿದಿರುವ ಪ್ರದೇಶ ಕುಂಡರ್ಕಿ. ಇಲ್ಮಾ ಅಫ್ರೋಝ್ ಕುಂಡರ್ಕಿ ಪ್ರದೇಶದಿಂದ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದ ಮೊಟ್ಟ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಪ್ರಸ್ತುತ ಇವರು ಹಿಮಾಚಲ್ ಪ್ರದೇಶ ಕೇಡರ್ ಅಧಿಕಾರಿಯಾಗಿದ್ದಾರೆ.

ಪ್ರಶ್ನೆ: ವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ನೀವು ನಾಗರಿಕ ಸೇವಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ ?

ಇಲ್ಮಾ: ಪ್ಯಾರೀಸ್, ಆಕ್ಸ್‌ಫರ್ಡ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ ನಾನು, ನ್ಯೂಯಾರ್ಕ್‌ನಲ್ಲಿ ವಾಲ್‌ಸ್ಟ್ರೀಟ್ ಪ್ರದೇಶದಲ್ಲಿರುವ ಫೈನಾಶ್ಷಿಯಲ್ ಡಿಸ್ಟ್ರಿಕ್ಟ್‌ನಲ್ಲಿ ಕೆಲಸ ಮಾಡಿದೆ. ಆದರೆ, ನನ್ನ ದೇಶ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಬಡವರು, ಅಶಕ್ತರ ಕಣ್ಣೀರು ಒರೆಸಲು ಸಾಧ್ಯವಿರುವ ಸೇವಾ ಕ್ಷೇತ್ರವಿದು ಎಂಬ ಕಾರಣಕ್ಕೆ ನಾಗರಿಕ ಸೇವೆಯನ್ನು ಆಯ್ಕೆ ಮಾಡಿಕೊಂಡೆ, ಐಪಿಎಸ್ ಅಧಿಕಾರಿಯಾಗಿದೆ.

ಪ್ರ: ಸಾಮಾನ್ಯವಾಗಿ ಹೆಣ್ಣು ಮಕ್ಕಳು ಪೊಲೀಸ್ ಇಲಾಖೆ ಕಡೆ ಆಕರ್ಷಿತರಾಗಲ್ಲ, ಆದರೆ ನೀವು ಐಪಿಎಸ್ ಅಧಿಕಾರಿಯಾಗಿ ಹೇಗೆ ಸವಾಲುಗಳನ್ನು ಎದುರಿಸುತ್ತಿದ್ದೀರಾ ?

ಇಲ್ಮಾ: ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗಬೇಕು ಎಂಬುದರ ಜೊತೆಗೆ, ಹೆಣ್ಣು ಮಕ್ಕಳು ರಕ್ಷಣೆಯನ್ನು ನೀಡಬಲ್ಲರು ಎಂಬುದು ಈಗ ಎಲ್ಲರಿಗೂ ಗೊತ್ತಿದೆ. ಪೊಲೀಸ್ ಇಲಾಖೆಯಲ್ಲಿಯೂ ನಾವು ಬಡವರ ಪರವಾಗಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ನಮ್ಮ ವೃತ್ತಿಯನ್ನು ನಾವು ಸರಿಯಾದ ಹಾದಿಯಲ್ಲಿ ಮಾಡಬೇಕಷ್ಟೇ.

ಪ್ರ: ಬಡತನದಿಂದ ಬೆಳೆದ ನೀವು, ಇಂದು ಹಲವಾರು ಮಂದಿಗೆ ಸ್ಪೂರ್ತಿಯಾಗಿದ್ದೀರಾ. ಈ ಬಗ್ಗೆ ಏನು ಅನಿಸುತ್ತದೆ ?

ಇಲ್ಮಾ: ನಾನು 14 ವರ್ಷದವಳಿದ್ದಾಗ ನನ್ನ ತಂದೆ ನಿಧನರಾದರು. ಆನಂತರ, ನನ್ನ ತಾಯಿಯೇ ನನ್ನನ್ನು ಬೆಳೆಸಿದರು. ಜೀವನದಲ್ಲಿ ಮುಂದುವರೆಯುವುದು, ನನ್ನ ಮೇಲೆ ನಾನು ವಿಶ್ವಾಸವಿಡುವಂತೆ ಮಾಡಿದ್ದು ನನ್ನ ತಾಯಿ. ಚಿಕ್ಕವಳಿದ್ದಾಗ ಬೇರೆ ಮಕ್ಕಳಂತೆ ನಾನು ಕೂಡ ದೊಡ್ಡ ದೊಡ್ಡ ಪುಸ್ತಕಗಳನ್ನು ಹಿಡಿದುಕೊಂಡು, ಕೋಚಿಂಗ್ ಕ್ಲಾಸ್‌ಗಳಿಗೆ ಹೋಗಬೇಕು, ಡಾಕ್ಟರ್, ಇಂಜಿನಿಯರ್ ಆಗಬೇಕು ಎಂಬ ಆಸೆ ಮೂಡುತ್ತಿತ್ತು. ಆದರೆ, ಮನೆಯ ವಾತಾವರಣ ಎರಡು ಹೊತ್ತಿನ ಊಟಕ್ಕೆ ಆದರೆ ಅಷ್ಟೇ ಸಾಕು ಎಂಬಂತಿತ್ತು.

ನನ್ನ ತಾಯಿ ನನ್ನನ್ನು ಹಾಗೂ ನನ್ನ ಸಹೋದರನಿಗಾಗಿ ಪಡುತ್ತಿದ್ದ ಕಷ್ಟಗಳನ್ನು ನೋಡಿದ್ದೇನೆ. ಆದುದರಿಂದ, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಬದಲು ನೇರವಾಗಿ ದಿಲ್ಲಿಯ ಸೆಂಟ್ ಸ್ಟೀವನ್ಸ್ ಕಾಲೇಜಿನಲ್ಲಿ ಬಿ.ಎ.ಪದವಿಗೆ ಸೇರಿದೆ. ಆನಂತರ ವಿದ್ಯಾರ್ಥಿವೇತನದ ಸಹಾಯದಿಂದ, ಪ್ಯಾರೀಸ್, ಆಕ್ಸ್‌ಫಡ್ರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದೆ.

ನಾನು ರಜೆಯಲ್ಲಿ ನನ್ನ ಊರಿಗೆ ಹೋದಾಗ, ನನ್ನ ತಾಯಿ, ಸಹೋದರರು ಹಾಗೂ ಬಂಧುಗಳು ನನ್ನನ್ನು ನೋಡಿ ಸಂತೋಷ ಪಡುತ್ತಿದ್ದರು. ಅವರ ಕಣ್ಣುಗಳಲ್ಲಿ ಹಲವಾರು ಕನಸುಗಳು ಇರುತ್ತಿದ್ದವು. ನನ್ನ ಮೇಲೆ ಅವರು ಇಟ್ಟಿರುವ ನಂಬಿಕೆಯನ್ನು ನೋಡಿದ್ದೇನೆ. ಆದುದರಿಂದ, ನಾಗರಿಕ ಸೇವಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅವರಂತೆ ಹಲವಾರು ಜನರ ಕನಸುಗಳನ್ನು ಈಡೇರಿಸಲು, ಅವರ ಕಷ್ಟಗಳಿಗೆ ಸ್ಪಂದಿಸಲು ಮುಂದಾಗಿದ್ದೇನೆ.

ಪ್ರ: ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಿರೀಕ್ಷಿತ ಪ್ರೋತ್ಸಾಹ ಸಿಗುತ್ತಿಲ್ಲ. ಈ ಬಗ್ಗೆ ಏನು ಹೇಳುತ್ತೀರಾ ?

ಇಲ್ಮಾ: ಶಿಕ್ಷಣ ಪಡೆಯುವುದು ಹೆಣ್ಣಾಗಲಿ, ಗಂಡಾಗಲಿ ಎಲ್ಲ ಮಕ್ಕಳ ಹಕ್ಕು. ಅ ಹಕ್ಕಿನಿಂದ ಮಕ್ಕಳನ್ನು ವಂಚಿತರನ್ನಾಗಿಸಬಾರದು. ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಮುಂದುವರೆದರೆ, ದೇಶವು ಮುಂದುವರೆಯುತ್ತದೆ. ತಂದೆ-ತಾಯಿ, ಮನೆಯಲ್ಲಿನ ಹಿರಿಯರಲ್ಲಿ ನನ್ನ ಮನವಿ, ಹೆಣ್ಣು ಮಕ್ಕಳು ಮುಂದುವರೆಯಲು ಪ್ರೋತ್ಸಾಹ, ಬೆಂಬಲ ನೀಡಿ. ಆಗ ಮಾತ್ರ ದೇಶ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ.

ನಾನು ಶಿಕ್ಷಣ ಪಡೆಯುವಾಗ ನನ್ನ ತಾಯಿ ಬಳಿ ಹಲವಾರು ಮಂದಿ, ಹೆಣ್ಣು ಮಕ್ಕಳನ್ನು ಓದಿಸಿ ಏನು ಮಾಡುತ್ತೀಯಾ, ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಿಸಿಬಿಡು ಎನ್ನುತ್ತಿದ್ದರು. ಇವತ್ತು ಅದೇ ಜನ, ತಮ್ಮ ಹೆಣ್ಣು ಮಕ್ಕಳನ್ನು ನನ್ನ ತಾಯಿ ಬಳಿ ಕರೆದು, ನಮ್ಮ ಮಕ್ಕಳನ್ನು ಐಪಿಎಸ್ ಮಾಡಿಸಿ ಎಂದು ಕೇಳುತ್ತಾರೆ. ಈಗ ಭಾರತ ಬದಲಾಗಿದೆ, ಹೆಣ್ಣು ಮಕ್ಕಳು ಸದೃಢರಾಗುತ್ತಿದ್ದಾರೆ.

ಪ್ರ: ವಿದ್ಯಾರ್ಥಿಗಳಿಗೆ ಏನು ಮಾರ್ಗದರ್ಶನ ನೀಡಲು ಬಯಸುತ್ತೀರಾ ?

ಇಲ್ಮಾ: ನಾಗರಿಕ ಸೇವೆಯನ್ನು ಆಯ್ಕೆ ಮಾಡಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು ಮೊದಲು ತಮ್ಮ ಮೇಲೆ ವಿಶ್ವಾಸವಿಡಬೇಕು. ತಮ್ಮ ಸುತ್ತಮುತ್ತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾಹಿತಿ ಹೊಂದಿರಬೇಕು. ಕಣ್ಣು , ಕಿವಿಯನ್ನು ತೆರೆದಿಟ್ಟುಕೊಂಡಿರಬೇಕು. ಪ್ರತಿದಿನ ಪತ್ರಿಕೆಗಳನ್ನು ಓದಬೇಕು. ಸರಕಾರಿ ವೆಬ್‌ಸೈಟ್‌ಗಳನ್ನು ಪರಿಶೀಲಿಸುತ್ತಿರಬೇಕು. ಸರಕಾರಿ ಯೊಜನೆಗಳ ಮಾಹಿತಿ ಹೊಂದಿರಬೇಕು. ದೇಶದ ಸಂವಿಧಾನ ಹೇಗಿದೆ, ನಾಗರಿಕರಿಗೆ ಅದು ಯಾವ ರೀತಿಯ ಹಕ್ಕುಗಳನ್ನು, ಸೌಕರ್ಯಗಳನ್ನು ಒದಗಿಸಿದೆ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು.

ಪ್ರ: ಬೆಂಗಳೂರಿಗೆ ಈ ಹಿಂದೆ ಎಂದಾದರೂ ಭೇಟಿ ನೀಡಿದ್ದೀರಾ ?

ಇಲ್ಮಾ: ಬೆಂಗಳೂರಿನ ಬಗ್ಗೆ ಕೇಳಿದ್ದೆ. ಆದರೆ, ಯಾವತ್ತು ಭೇಟಿ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿ ಬೆಂಗಳೂರಿಗೆ ಬಂದಿದ್ದೇನೆ. ತುಂಬಾ ಸುಂದರವಾದ ನಗರ ಇದು. ಇಲ್ಲಿ ವಾತಾವರಣವು ತುಂಬಾ ಚೆನ್ನಾಗಿದೆ.

Writer - -ಅಮ್ಜದ್ ಖಾನ್ ಎಂ.

contributor

Editor - -ಅಮ್ಜದ್ ಖಾನ್ ಎಂ.

contributor

Similar News