ನಮ್ಮ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿ: ಸಚಿವ ಆರ್.ವಿ.ದೇಶಪಾಂಡೆ

Update: 2019-04-14 16:24 GMT

ಹುಬ್ಬಳ್ಳಿ, ಎ.14: ಭಾರತ ಸೇರಿದಂತೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಅಂಬೇಡ್ಕರ್ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ಅಂಬೇಡ್ಕರ್‌ರವರ ವಿಚಾರ ಧಾರೆಗಳಿಗೆ ಹೆಚ್ಚಿನ ಮಹತ್ವವಿದೆ, ಅಲ್ಲದೆ ಜಾತ್ಯತೀತದಲ್ಲಿ ನಾವೆಲ್ಲರೂ ವಿಶ್ವಾಸ ಇಡಬೇಕಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. 

ರವಿವಾರ ಹುಬ್ಬಳ್ಳಿಯಲ್ಲಿ ಅಂಬೇಡ್ಕರ್ ಅವರ 128ನೆ ಜಯಂತೋತ್ಸವದ ಅಂಗವಾಗಿ ನಗರದಲ್ಲಿ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಬಡತನ, ಅನಕ್ಷರತೆ ಹೋಗಲಾಡಿಸಬೇಕಾಗಿದೆ. ಅದಕ್ಕೆ ನಾವೆಲ್ಲರೂ ಒಟ್ಟುಗೂಡಿ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು. ಅಂಬೇಡ್ಕರ್ ನೀಡಿರುವ ಸಂವಿಧಾನ ದೇಶಕ್ಕೆ ಒಂದು ಪವಿತ್ರವಾದ ಗ್ರಂಥವಾಗಿದೆ. ನಮ್ಮ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಇಂದಿನ ದಿನಮಾನಗಳಲ್ಲಿ ಅವರ ಆದರ್ಶ, ವಿಚಾರಗಳನ್ನು ಪಾಲನೆ ದೇಶದ ಯುವ ಸಮುದಾಯದ ಮೇಲೆ ದೊಡ್ಡ ಮಟ್ಟದ ಜವಾಬ್ದಾರಿ ಇದೆ. ಜಾತ್ಯಾತೀತದಲ್ಲಿ ವಿಶ್ವಾಸವಿಟ್ಟು ಯುವಕರು ಸಾಗಬೇಕಾಗಿದೆ. ದೇಶದಲ್ಲಿ ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಎನ್‌ಡಿಎ ಸರಕಾರ ಉತ್ತರ ನೀಡಲು ಸಾಧ್ಯವಾಗಿಲ್ಲ ಎಂದರು. ಕೇಂದ್ರ ಸರಕಾರ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿತ್ತು. ಅದನ್ನು ಮಾಡುವಲ್ಲಿ ಎನ್‌ಡಿಎ ವಿಫಲವಾಗಿದೆ. ನಾವು ಉದ್ಯೋಗ ಸೃಷ್ಟಿಯ ಕಡೆ ಒತ್ತು ನೀಡಿದ್ದೇವೆ. ಅಲ್ಲದೆ, ಲೋಕಸಭಾ ಚುನಾವಣೆ ನಮ್ಮ ಪ್ರಣಾಳಿಕೆಯಲ್ಲಿ ಹೆಚ್ಚಿನ ಮಹತ್ವ ಉದ್ಯೋಗ ಸೃಷ್ಟಿಗೆ ನೀಡಲಾಗಿದೆ ಎಂದರು.

60 ವರ್ಷದಿಂದ ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಎಂಬ ಪ್ರಧಾನಿ ಮೋದಿ ಪ್ರಶ್ನೆ ಕುರಿತು ಮಾತನಾಡಿದ ಅವರು, 1885ರಲ್ಲಿ ಕಾಂಗ್ರೆಸ್ ಪಕ್ಷ ಹುಟ್ಟಿತ್ತು. ಅಂದು ನಾವು ಹುಟ್ಟಿರಲಿಲ್ಲ. ಮೋದಿಯವರು ಹುಟ್ಟಿರಲಿಲ್ಲ. ಕಾಂಗ್ರೆಸ್ ಪಕ್ಷ ಮಾಡಿದ ಅಭಿವೃದ್ಧಿಯ ಮಾಹಿತಿ ಪ್ರಧಾನಿ ನರೇಂದ್ರ ಮೋದಿಗೆ ಇಲ್ಲ. ದೇಶದಲ್ಲಿ ಹಲವು ಕ್ರಾಂತಿಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News