ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಕ್ರಮ: ಸೋಮ್ ದತ್ತಾ ಎಚ್ಚರಿಕೆ

Update: 2019-04-14 16:49 GMT
ಬ್ರಿಜೇಶ್ ಕಾಳಪ್ಪ

ಬೆಂಗಳೂರು, ಎ. 14: ‘ಮಹಿಳೆಗೆ ಗೌರವ ನೀಡದ ನಿಮಗೆ ನಾಚಿಕೆ ಆಗಬೇಕು. ನಿಮ್ಮ ವಿರುದ್ಧ ನಾನು ಕಾನೂನು ಹೋರಾಟ ಆರಂಭಿಸುತ್ತೆನೆ’ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತಾ ಟ್ವಿಟ್ಟರ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ರವಿವಾರ ತುರ್ತು ಸುದ್ಧಿಗೋಷ್ಠಿ ನಡೆಸಿದ ಬ್ರಿಜೇಶ್ ಕಾಳಪ್ಪ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಆರೋಪ ಮಾಡಿದ್ದು, ಈ ಸಂಬಂಧ ಪತ್ರಕರ್ತರೊಬ್ಬರು ಸೋಮ್ ದತ್ತಾ ಅವರೊಂದಿಗೆ ನಡೆಸಿದ ಆಡಿಯೋ ಸಂಭಾಷಣೆಯನ್ನು ಬಿಡುಗಡೆ ಮಾಡಿದ್ದರು.

ಇದಕ್ಕೆ ಟ್ವಿಟ್ಟರ್ ಸರಳ ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸೋಮ್ ದತ್ತಾ, ‘ನಿಮ್ಮ ರಾಜಕೀಯ ಆಟದಲ್ಲಿ ನನ್ನ ಬಳಸಿಕೊಳ್ಳುವುದನ್ನು ನಿಲ್ಲಿಸಿ. ಈಗಾಗಲೇ ಮಹಿಳಾ ಆಯೋಗಕ್ಕೆ ಪತ್ರ ಬರೆದ ಈ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ನನ್ನ ಇಚ್ಛೆಗೆ ವಿರುದ್ಧವಾಗಿ ಕೇಸ್ ದಾಖಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ’.

‘ಆಡಿಯೋ ಕ್ಲಿಪ್‌ನಲ್ಲಿ ಹೆಚ್ಚಿನ ಮಾಹಿತಿಗಳು ನನ್ನ ಖಾಸಗಿತನಕ್ಕೆ ಧಕ್ಕೆಯುಂಟು ಮಾಡಿವೆ. ನನ್ನ ಹೇಳಿಕೆಗಳನ್ನು ರಾಜಕೀಯಗೊಳಿಸಿ ತಿರುಚಲಾಗಿದೆ. ಈ ಹಿನ್ನೆಲೆಯಲ್ಲಿ ನಾನು ಸ್ಪಷ್ಟನೆ ನೀಡುತ್ತಿದ್ದು, ಯಾವುದೇ ರಾಜಕೀಯ ಪಕ್ಷಗಳು ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ಮಾಧ್ಯಮಗಳು ಬಿತ್ತರಿಸದಂತೆ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಸೋಮ್ ದತ್ತಾ ಟ್ವಿಟ್ ಮಾಡಿದ್ದಾರೆ.

‘ನನ್ನ ಖಾಸಗಿ ಸಂಭಾಷಣೆಯನ್ನು ನನ್ನ ಅನುಮತಿ ಪಡೆಯದೆ ಬಿತ್ತರಿಸಲಾಗಿದೆ. ಇದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು, ಇದನ್ನು ನಾನು ಖಂಡಿಸುತ್ತೇನೆ. ನನ್ನ ಖಾಸಗಿತನಕ್ಕೆ ಧಕ್ಕೆ ತಂದವರು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ. ನನ್ನ ಘನತೆಗೆ ಕುಂದು ತಂದಿದ್ದಕ್ಕೆ ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News