ತೇಜಸ್ವಿ ಸೂರ್ಯ ಪರ ಯಡಿಯೂರಪ್ಪ ರೋಡ್ ಶೋ

Update: 2019-04-14 17:18 GMT

ಬೆಂಗಳೂರು,ಎ.14: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ‌, ಶಾಸಕ ರವಿ ಸುಬ್ರಮಣ್ಯ ಜೊತೆಗೂಡಿ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.

ಬನಶಂಕರಿ 1 ನೇ ಹಂತದ ವಿನಾಯಕ ನಗರದ ಶಂಕರ್ ನಾಗ್ ಸರ್ಕಲ್ ನಿಂದ ರಾತ್ರಿ 7: 45 ಕ್ಕೆ ಆರಂಭವಾದ ಚುನಾವಣಾ ರ‍್ಯಾಲಿಯು ಡಾ.ಮುತ್ತು ರಾಜ್ ರಸ್ತೆ ಮಾರ್ಗವಾಗಿ ಶ್ರೀನಿವಾಸ ನಗರ, ವಿವೇಕಾನಂದ ನಗರ ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು.

ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಎರಡು ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯರ ಗೆಲುವು ನಿಶ್ಚಿತ ಎಂದರು. ನಾವು ಬಂದಾಗ ಪ್ರತಿಯೊಂದು ಮನೆಯಲ್ಲೂ ಸಹ ಬಿಜೆಪಿ ಪರವಾಗಿ, ನರೇಂದ್ರ ಮೋದಿಯವರ ಪರವಾಗಿ, ತೇಜಸ್ವಿ ಸೂರ್ಯ ಪರವಾಗಿ ಜನ ಸ್ಪಂದಿಸುತ್ತಿರುವುದನ್ನು ನೋಡಿದರೆ ದೈವದತ್ತವಾದ ಸ್ವಾಗತ ಕೋರುತ್ತಿದ್ದಾರೆ ಎಂದು ಅನಿಸುತ್ತದೆ. 28 ವರ್ಷದ ಯುವಕ ರಾಜ್ಯವನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಾನೆ ಎಂಬುದೇ ನಾವು ಗರ್ವ ಪಡಬೇಕಾದ ವಿಷಯ ಎಂದರು.

ಈ ರ‍್ಯಾಲಿಯಲ್ಲಿ ಬಿಬಿಎಂಪಿ ಸದಸ್ಯರು, ಬಿಜೆಪಿಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಸ್ವಯಂಸೇವಕರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, ಕ್ಷೇತ್ರದಲ್ಲಿ ಮೋದಿಯವರ, ಬಿಜೆಪಿ ಪರವಾದ ಅಲೆಯು ದಟ್ಟವಾಗಿ ಆವರಿಸಿಕೊಂಡಿದ್ದು, ಫಲಿತಾಂಶಕ್ಕೂ ಮೊದಲೇ ಸಂಭ್ರಮದ ವಾತಾವರಣ ಕಂಡುಬರುತ್ತಿದೆ ಎಂದರು.

ಇನ್ನು, ಕೆಲ ಬಿಜೆಪಿಯ ಮಹಿಳಾ ಕಾರ್ಯಕರ್ತರು ಮಾತನಾಡುತ್ತ, ಸಾಂಕೇತಿಕವಾಗಿ ಪ್ರಚಾರ ನಡೆಯುತ್ತಿದ್ದು, ಇದು ವಿಜಯದ ಯಾತ್ರೆಯೆಂದೇ ನಾವು ಭಾವಿಸುತ್ತಿರುವುದಾಗಿ ತಿಳಿಸಿದರು. ನಮಗೆ ಅರಿವು ಬಂದ ನಂತರ ಮೊದಲ ಬಾರಿಗೆ ಸಾರ್ವಜನಿಕರು ಒಂದು ಪಕ್ಷದ ಕಾರ್ಯಕರ್ತರಂತೆ ಓಡಾಡುತ್ತಿರುವುದನ್ನು ನೋಡುತ್ತಿದ್ದೇವೆ ಎಂದರು, ನಾವು ಮನೆ ಬಾಗಿಲಿಗೆ ಪ್ರಚಾರಕ್ಕೆ ಹೋದಾಗ, ಮನೆಯಲ್ಲಿರುವವರು ಹೊರಗೆ ಬಂದು ಮೋದಿಗೆ ಜೈಕಾರ ಹಾಕುತ್ತಿದ್ದಾರೆ ಎಂದು ಮತ್ತೊಬ್ಬಳು ಕಾರ್ಯಕರ್ತೆ ವಿವರಿಸಿದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News