ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಉಚ್ಚಾಟನೆಗೆ ಡಿಸಿಎಂಗೆ ಒತ್ತಾಯ

Update: 2019-04-14 18:30 GMT

ಮಂಡ್ಯ, ಎ.14: ನಗರದ ಎ.ಸಿ.ಮಾದೇಗೌಡ ಸಮುದಾಯ ಭವನದಲ್ಲಿ ರವಿವಾರ ನಡೆದ ದಲಿತ ರಾಜಕೀಯ ಜಾಗೃತಿ ಸಮಾವೇಶದಲ್ಲಿ ಮಾಜಿ ಶಾಸಕರಾದ ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಉಚ್ಚಾಟಿಸುವಂತೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಒತ್ತಾಯಿಸಿದರು.

ಪರಮೇಶ್ವರ್ ಭಾಷಣ ಮಾಡುವಾಗ ಮಧ್ಯಪ್ರವೇಶಿಸಿದ ಕೆಲವು ಕಾಂಗ್ರೆಸ್ ಕಾರ್ಯಕರ್ತರು, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಪಕ್ಷದ ಸೂಚನೆ ಪಾಲಿಸುತ್ತಿಲ್ಲ. ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.

ಅಂಬರೀಷ್ ಇದ್ದಾಗ ಆಪ್ತರಾಗಿ ಗುರುತಿಸಿಕೊಂಡಿದ್ದ ಅಮರಾವತಿ ಚಂದ್ರಶೇಖರ್ ಮಾತನಾಡಿ, ಸುಮಲತಾ ಬಿಜೆಪಿ ಬೆಂಬಲಿತ ಅಭ್ಯರ್ಥಿಯಲ್ಲ. ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿದ್ದಾರೆ ಸಾರ್ ಎಂದು ನಿವೇದಿಸಿದರು.

ಕಾರ್ಯಕರ್ತರನ್ನು ಸಮಾಧಾನಿಸಿದ ಪರಮೇಶ್ವರ್, ಮುಖಂಡರು ಪಕ್ಷ ಹೇಳಿದ ಸೂಚನೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಬೆಂಬಲ ಕೊಟ್ಟಿರುವುದರಿಂದ ಅವರನ್ನು ಬೆಂಬಲಿಸದೆ ಮೈತ್ರಿ ಅಭ್ಯರ್ಥಿ ನಿಖಿಲ್ ಬೆಂಬಲಿಸಿ ಎಂದು ಮನವಿ ಮಾಡಿದರು.

ರಾಹುಲ್ ಪ್ರಧಾನಿ ಆಗಿ, ನಿಖಿಲ್ ಎಂಪಿ ಆದರೆ ಮಂಡ್ಯ ಅಭಿವೃದ್ಧಿ ಆಗುತ್ತದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಗಿರುವುದರಿಂದ ಜೆಡಿಎಸ್ ಅಭ್ಯರ್ಥಿ ಇರುವೆಡೆ ಕಾಂಗ್ರೆಸ್‍ನವರು ಹಸ್ತ ಚಿಹ್ನೆ ಹುಡುಕದೆ ತೆನೆ ಹೊತ್ತ ಮಹಿಳೆಗೆ, ಕಾಂಗ್ರೆಸ್ ಅಭ್ಯರ್ಥಿ ಇರುವೆಡೆ ಜೆಡಿಎಸ್‍ನವರು ತೆನೆ ಹೊತ್ತ ಮಹಿಳೆ ಹುಡುಕದೆ ಹಸ್ತಕ್ಕೆ ಮತಹಾಕಿ ಎಂದು ಅವರು ಹೇಳಿದರು.

ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರಾದ ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಹಲವು ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News