ಸಮಾನತೆಗಾಗಿ ಹೋರಾಡಿದ ಮಹಾನ್ ವಿಶ್ವನಾಯಕ ಅಂಬೇಡ್ಕರ್: ಚಿಕ್ಕಮಗಳೂರು ಜಿಲ್ಲಾಧಿಕಾರಿ ಗೌತಮ್

Update: 2019-04-14 18:44 GMT

ಚಿಕ್ಕಮಗಳೂರು, ಎ.14: ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಭಿಪ್ರಾಯಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜಕಲ್ಯಾಣ ಇಲಾಖೆ ಹಾಗೂ ನಗರಸಭೆ ಇವರ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ರವಿವಾರ ಹಮ್ಮಕೊಳ್ಳಲಾದ ಡಾ.ಬಿ.ಆರ್.ಅಂಬೇಡ್ಕರ್ ರವರ 128ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಅಭಿವೃದ್ಧಿಯಾಗಬೇಕಾದರೆ ಬಡವರ, ಮಹಿಳೆಯರ ಅಭಿವೃದ್ದಿಯಾಗಬೇಕು ಎಂಬುವುದನ್ನು ಮನಗಂಡಿದ್ದ ಅಂಬೇಡ್ಕರ್ ಇದಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅಂಬೇಡ್ಕರ್ ಎಂತಹ ತ್ಯಾಗಿ ಎಂಬುದು ಮನಗಟ್ಟಾಗಲು ಅವರ ಪುಸ್ತಕಗಳನ್ನು ಓದಬೇಕು. ಓದದಿದ್ದಲ್ಲಿ ಅವರ ಬಗ್ಗೆ ಯಾರು ಏನೂ ಹೇಳಿದರು ಅರ್ಥವಾಗುವುದಿಲ್ಲ. ಅವರ ಜಯಂತಿಯನ್ನು ವಿಶ್ವದಾದ್ಯಂತ ಆಚರಿಸುತ್ತಿದೆ ಎಂದರೆ ಅವರ ಜ್ಞಾನ, ವಿಶ್ವಕ್ಕೆ ನೀಡಿದ ಕೊಡುಗೆ ಏನೆಂಬುದು ಅರ್ಥವಾಗುತ್ತದೆ ಎಂದರು.

ಅವರ ಬರವಣಿಗೆಯಲ್ಲಿ ಇಡೀ ಸಮಾಜದ ಸ್ಥಿತಿಯನ್ನು ಬದಲಾವಣೆ ಮಾಡಲು ಶ್ರಮಿಸಿರುವುದು ಕಂಡುಬರುತ್ತದೆ. ಎಲ್ಲಾ ವರ್ಗದವರು ಸಮಾನವಾಗಿ ಬಾಳಬೇಕೆಂಬ ದೃಷ್ಠಿಯಿಂದ ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ನೀಡುವ ಮೂಲಕ ಬುದಕಿನ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನೀಡಿದವರು ಅಂಬೇಡ್ಕರ್. ಹಿಂದೆ ದೇಶಕ್ಕೆ ಶಾಪದಂತೆ ಅಂಟಿಕೊಂಡಿದ್ದ ಸಾಮಾಜಿಕ ಪಿಡುಗುಗಳು ಅಂಬೇಡ್ಕರ್ ಅವರ ಸಂವಿಧಾನದಿಂದ ದೂರವಾಗುವಂತಾಗಿದೆ ಎಂದ ಅವರು, ಅಂಬೇಡ್ಕರ್ ಯಾವುದೇ ಒಂದು ವ್ಯವಸ್ಥೆಯ ವಿರುದ್ಧ ಹೋರಾಡದೇ ಎಲ್ಲಾ ರಂಗಗಳಲ್ಲಿಯೂ ನ್ಯಾಯಕ್ಕಾಗಿ ಹೋರಾಡಿರುವುದು ಕಂಡು ಬರುತ್ತದೆ ಎಂದರು.

ಡಾ.ಕೃಷ್ಣಮೂರ್ತಿಚಮರಂ ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿ, ಭಾರತದಲ್ಲಿ ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಂಡಿದಕ್ಕಿಂತ ಅನರ್ಥ ಮಾಡಿಕೊಂಡಿದೇ ಹೆಚ್ಚು. ಭಾರತಿಯರ ಮನಸ್ಥಿತಿ ಜಾತಿ ಆಧಾರಿತ ಮನಸ್ಥಿತಿಯಾಗಿದೆ. ಭಾರತೀಯರ ಕಣ್ಣಿಗೆ ಅವರೊಬ್ಬ ದಲಿತನಾಗಿ ಕಂಡು ಬಂದರು. ಈ ಕಾರಣಕ್ಕೆ ಅವರನ್ನು ದೇಶದ ಪ್ರಜೆಗಳು ಒಪ್ಪಿಕೊಂಡಿರುವುದಕ್ಕಿಂದ ವಿಶ್ವದ ಇತರ ದೇಶಗಳ ನಾಗರಿಕರು ಅಪ್ಪಿಕೊಂಡಿದ್ದಾರೆ. ಅಂಬೇಡ್ಕರ್ ಅವರಂತಹ ವಿಶ್ವ ಚೇತನವನ್ನು ಒಕ್ಕಣ್ಣಿನಿಂದ ನೋಡುವ ದೃಷ್ಟಿ ಬದಲಾಗಬೇಕಾದರೆ ಅವರ ಬರವಣಿಗೆಗಳನ್ನು ಓದಬೇಕು. ಆಗ ಮಾತ್ರ ಇಂತಹ ಪೂರ್ವಗ್ರಹಪೀಡಿತ ಮನಸುಗಳು ಬದಲಾಗಲು ಸಾಧ್ಯ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಸ್.ಅಶ್ವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ನಗರಸಭೆ ಆಯುಕ್ತ ಪರಮೇಶಿ ಸೇರಿದ್ದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೇಶದ ಅಭಿವೃದ್ಧಿ ಅಖಂಡತೆಗೋಸ್ಕರ ಶ್ರಮಿಸಿದ ನಾಯಕರನ್ನು ಕಡೆಗಣಿಸುವುದನ್ನು ಕಾಣುತ್ತೇವೆ. ಪ್ರತಿಯೊಬ್ಬ ವ್ಯಕ್ತಿಗೂ ಆತ್ಮಗೌರವ ವಿರುತ್ತದೆ. ಆತನನ್ನು ಜಾತಿ, ಮತಗಳ ಆಧಾರದ ಮೇಲೆ ವಿಂಗಡಿಸಬಾರದು. ಅಂಬೇಡ್ಕರ್ ಅವರು ಭಾರತ ಇತಿಹಾಸವನ್ನು ಮರು ಶೋಧಿಸಿದವರು. ಜಾತಿಧರ್ಮ ಆಧಾರದಲ್ಲಿ ಒಡೆದು ಹಂಚಿ ಹೋಗಿದ್ದ ಭಾರತವನ್ನು ಒಟ್ಟುಗೂಡಿಸಲು ಶ್ರಮಿಸಿದವರು. ಇಂದು ದೇಶ ಆಹಾರದಲ್ಲಿ ಸ್ವಾವಲಂಬಿಯಾಗಿದ್ದರೆ ಅದಕ್ಕೆ ಅಂಬೇಡ್ಕರ್ ಕಾರಣ. ದೇಶದಲ್ಲಿ ಪವರ್‍ಗ್ರೀಡ್ ಸ್ಥಾಪಿಸಿ ವಿದ್ಯುತ್ ಉತ್ಪಾದನೆಗೆ ಶಕ್ತಿ ತುಂಬಿದವರು. ಅಸಂಘಟಿತ ಕಾರ್ಮಿಕರನ್ನು ಒಗ್ಗೂಡಿಸಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಇಂದು ಮತದಾನ ಮಾಡುವ ಪ್ರತಿಯೊಬ್ಬರು ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಬೇಕು.
- ಡಾ.ಕೃಷ್ಣಮೂರ್ತಿ ಚಮರಂ, ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News