ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದ.ಕ ದ್ವಿತೀಯ

Update: 2019-04-15 11:44 GMT

ಬೆಂಗಳೂರು, ಎ.15: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ನಗರ ಪ್ರದೇಶದ ಶೇ.61.38 ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಪ್ರದೇಶದ ಶೇ.62.88 ವಿದ್ಯಾರ್ಥಿಗಳು ಉತ್ತೀರ್ಣಗೊಳ್ಳುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಪಡೆದಿದ್ದಾರೆ.

ಸೋಮವಾರ ನಗರದ ಪಿಯು ಮಂಡಳಿಯಲ್ಲಿ ಫಲಿತಾಂಶ ಪ್ರಕಟಿಸಿದ ಬಳಿಕ ಮಾತನಾಡಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಈ ಸಾಲಿನಲ್ಲಿ ನಗರ ಪ್ರದೇಶದ 5,22,391 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 3,20,657 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದ 1,49,262 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 93,860 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶದಲ್ಲಿ ಶೇ.2 ರಷ್ಟು ಏರಿಕೆಯಾಗಿದೆ ಎಂದು ಹೇಳಿದರು.

ಉಡುಪಿ ಪ್ರಥಮ, ಚಿತ್ರದುರ್ಗ ಕೊನೆ ಸ್ಥಾನ: ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ. ಕೊಡಗು ಜಿಲ್ಲೆ ಮೂರನೇ ಸ್ಥಾನದಲ್ಲಿದ್ದು, ಚಿತ್ರದುರ್ಗ ಕೊನೆಯ ಸ್ಥಾನ ಪಡೆದಿದೆ. ಕಳೆದ ಬಾರಿ ಚಿಕ್ಕೋಡಿ ಕೊನೆಯ ಸ್ಥಾನ ಪಡೆದಿತ್ತು.

ಪ್ರಸಕ್ತ ಸಾಲಿನಲ್ಲಿ ಪಿಯು ಪರೀಕ್ಷೆ ಹಾಜರಾದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 6,71,653. ತೇರ್ಗಡೆಯಾದವರ ಸಂಖ್ಯೆ 4,14,587. ಇದರಲ್ಲಿ ಬಾಲಕರು 1,86,690, ಬಾಲಕಿಯರು 2,27,897 ಉತ್ತೀರ್ಣರಾಗಿದ್ದಾರೆ. ಈ ಬಾರಿಯು ಹೊಸಬರು 3,83,521 ವಿದ್ಯಾರ್ಥಿಗಳು, ಪುನರಾವರ್ತಿತ 23,425 ವಿದ್ಯಾರ್ಥಿಗಳು ಹಾಗೂ 7,641 ಖಾಸಗಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಭಾಗವಾರು ಫಲಿತಾಂಶ: ಕಲಾ ವಿಭಾಗದಲ್ಲಿ 2,00,022 ವಿದ್ಯಾರ್ಥಿಗಳು ಹಾಜರಾಗಿದ್ದು, 1,01,073 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 2,53,865 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,68,531 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ 2,17,766 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 1,44,983 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ 1,61,923 ವಿದ್ಯಾರ್ಥಿಗಳು ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ 2,52,664 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

80 ಕಾಲೇಜುಗಳು ಶೇ.100 ಫಲಿತಾಂಶ: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 15 ಸರಕಾರಿ ಪದವಿ ಪೂರ್ವ ಕಾಲೇಜುಗಳು ಶೇ.100 ರಷ್ಟು ಫಲಿತಾಂಶ ಪಡೆದಿವೆ. ಇನ್ನುಳಿದಂತೆ 1 ಅನುದಾನಿತ ಕಾಲೇಜು, 63 ಅನುದಾನ ರಹಿತ ಕಾಲೇಜುಗಳು, 1 ವಿಭಜಿತ ಪದವಿ ಕಾಲೇಜು ಶೇ.100 ರಷ್ಟು ಫಲಿತಾಂಶ ಪಡೆದಿವೆ.

98 ಕಾಲೇಜುಗಳು ಶೂನ್ಯ ಫಲಿತಾಂಶ: ಇಂದು ಪ್ರಕಟವಾದ ಫಲಿತಾಂಶದಲ್ಲಿ 3 ಸರಕಾರಿ ಪದವಿ ಪೂರ್ವ ಕಾಲೇಜುಗಳು, 1 ಅನುದಾನಿತ ಕಾಲೇಜು, 94 ಅನುದಾನ ರಹಿತ ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದುಕೊಂಡಿವೆ.

ಜಿಲ್ಲಾವಾರು ಶೇ. ಫಲಿತಾಂಶ:

ಉಡುಪಿ-ಶೇ. 92.20

ದಕ್ಷಿಣ ಕನ್ನಡ-ಶೇ.90.91

ಕೊಡಗು-ಶೇ.83.31

ಉತ್ತರ ಕನ್ನಡ-ಶೇ.79.59

ಚಿಕ್ಕಮಗಳೂರು-ಶೇ.76.42

ಹಾಸನ-ಶೇ.75.19

ಬಾಗಲಕೋಟೆ-ಶೇ. 74.26

ಬೆಂಗಳೂರು ದಕ್ಷಿಣ-ಶೇ. 74.25

ಶಿವಮೊಗ್ಗ-ಶೇ.73.54

ಬೆಂಗಳೂರು ಗ್ರಾಮಾಂತರ-ಶೇ.72.68

ಬೆಂಗಳೂರು ಉತ್ತರ-ಶೇ.72.68

ಚಾಮರಾಜನಗರ-ಶೇ.72.67

ಚಿಕ್ಕಬಳ್ಳಾಪುರ-ಶೇ.70.11

ವಿಜಯಪುರ-ಶೇ.68.55

ಮೈಸೂರು-ಶೇ.68.55

ಹಾವೇರಿ-ಶೇ.68.40

ತುಮಕೂರು-ಶೇ. 65.81

ಕೋಲಾರ-ಶೇ.65.19

ಬಳ್ಳಾರಿ-ಶೇ.64.87

ಕೊಪ್ಪಳ-ಶೇ.63.15

ಮಂಡ್ಯ-ಶೇ.63.08

ದಾವಣಗೆರೆ-ಶೇ.62.53

ಧಾರವಾಡ-ಶೇ.62.49

ರಾಮನಗರ-ಶೇ.62.08

ಚಿಕ್ಕೋಡಿ-ಶೇ.60.86

ಗದಗ-ಶೇ.57.76

ರಾಯಚೂರು-ಶೇ.56.73

ಬೆಳಗಾವಿ-ಶೇ.56.18

ಬೀದರ್-ಶೇ.55.78

ಯಾದಗಿರಿ-ಶೇ.53.02

ಚಿತ್ರದುರ್ಗ-ಶೇ.51.42

ಒಂದೇ ಕಾಲೇಜಿನ 9 ಟಾಫರ್ಸ್‌

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಬಳ್ಳಾರಿಯ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಕುಸುಮಾ ಉಜ್ಜಯಿನಿ(594), ಹೊಸಮನಿ ಚಂದ್ರಪ್ಪ(591), ನಾಗರಾಜು(591), ಎಸ್.ಉಮೇಶ್(591), ಕೆ.ಜಿ.ಸಚಿನ್(589), ಎಚ್.ಸುರೇಶ್(589) ಕ್ರಮವಾಗಿ 1 ರಿಂದ 6 ನೆ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ಹರಿಜನಸೊಪ್ಪಿನ ಹುಚ್ಚೆಂಗಮ್ಮ(588), ಕೋನಾಪುರ ಮಠದ ನಂದೀಶ(588) ಹಾಗೂ ಅಂಗಡಿ ಸರಸ್ವತಿ(587) ಅಂಕಗಳನ್ನು ಪಡೆದು ಕ್ರಮವಾಗಿ 8, 9, 10 ನೇ ಟಾಪರ್ಸ್‌ಗಳಾಗಿದ್ದಾರೆ. ಇನ್ನುಳಿದ ಒಂದು ಹರಪ್ಪನಹಳ್ಳಿಯ ಸುಜ್ಮಾ ಪಿಯು ಕಾಲೇಜಿನ ಬರಿಕರ ಶಿವಕುಮಾರ(589) 7 ನೆ ಸ್ಥಾನದಲ್ಲಿದ್ದಾರೆ.

ವಿಶೇಷ ಚೇತನರ ಸಾಧನೆ

ರಾಜ್ಯದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 285 ದೃಷ್ಟಿಮಾಂದ್ಯರು ಪರೀಕ್ಷೆಗೆ ಹಾಜರಾಗಿ 217 ಜನರು ಪಾಸಾಗಿದ್ದಾರೆ. 198 ಶ್ರವಣ ಮತ್ತು ವಾಕ್ ದೋಷವುಳ್ಳವರು ಪರೀಕ್ಷೆ ಬರೆದು 106 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 358 ಆರ್ಥೋ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 250 ಜನ ಉತ್ತೀರ್ಣಗೊಂಡಿದ್ದಾರೆ. 391 ಡಿಸ್‌ಲೆಕ್ಸಿಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 236 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.

ಟಾಪರ್ಸ್‌ಗಳ ಅಭಿಪ್ರಾಯ:

ಟಾಪರ್-1

ಕೆ.ದಿವ್ಯಾ, ದ್ವಿತೀಯ ರ‍್ಯಾಂಕ್‌ ವಿಜ್ಞಾನ ವಿಭಾಗ(ವಿದ್ಯಾಮಂದಿರ ಪಿಯು ಕಾಲೇಜು, ಬೆಂಗಳೂರು)

ಪ್ರತಿದಿನ ನಾನು ಇದನ್ನೇ ಓದಬೇಕು ಅಥವಾ ಇದೇ ಮಾದರಿಯಲ್ಲಿ ಓದಬೇಕು ಎಂದು ದಿನಚರಿ ಇರಲಿಲ್ಲ. ಆದರೆ, ಎಲ್ಲವನ್ನೂ ಸಮಗ್ರವಾಗಿ ಓದುತ್ತಿದ್ದೆ. ಯಾವುದನ್ನೂ ಬಿಡುತ್ತಿರಲಿಲ್ಲ. ಸಮಯ ಸಿಕ್ಕಿದಾಗಲೆಲ್ಲಾ ಓದುವುದನ್ನು ರೂಢಿಸಿಕೊಂಡಿದ್ದೆ. ಅದರ ಫಲ ಇಂದು ಸಿಕ್ಕಿದೆ. ಅಲ್ಲದೆ, ನಾನು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೇ ಎರಡನೇ ಸ್ಥಾನದಲ್ಲಿ ಉತ್ತೀರ್ಣಳಾಗುತ್ತೇನೆ ಎಂಬ ನಿರೀಕ್ಷೆಯಂತೂ ಇರಲಿಲ್ಲ.

ಟಾಪರ್-2

ವೊಲಿವಿಟಾ ಡಿಸೋಜ, ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ‍್ಯಾಂಕ್‌(ಆಳ್ವಾಸ್ ಪಿಯು ಕಾಲೇಜು)

ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ್ದರಿಂದ ಆಳ್ವಾಸ್ ಕಾಲೇಜಿನಲ್ಲಿ ಅವಕಾಶ ಸಿಕ್ಕಿತು. ಅಲ್ಲಿ ಪಿಯುಸಿಯಲ್ಲಿ ಉಚಿತ ಶಿಕ್ಷಣ ನೀಡಿದರು. ಅಲ್ಲಿನ ಉಪನ್ಯಾಸಕರ ಮಾರ್ಗದರ್ಶದಿಂದ ಚೆನ್ನಾಗಿ ಓದಿದೆ. ಪ್ರತಿದಿನ ಬೆಳಗ್ಗೆ 5ರಿಂದ ಸತತವಾದ ಅಭ್ಯಾಸ ಮಾಡುತ್ತಿದ್ದೆ. ಅಂದಿನ ಪಠ್ಯವನ್ನು ಅಂದೇ ಅಭ್ಯಾಸ ಮಾಡುತ್ತಿದ್ದೆ. ಅದರ ಫಲವಾಗಿ ಇಂದು ಮೊದಲ ರ‍್ಯಾಂಕ್‌ ಪಡೆಯಲು ಸಾಧ್ಯವಾಗಿದೆ. ಮುಂದೆ ಸಿಎ ಮಾಡಬೇಂಬ ಕನಸಿದ್ದು, ಉತ್ತಮ ಫಲಿತಾಂಶ ಬಂದಿದ್ದು ಖುಷಿ ತಂದಿದೆ.

ಟಾಪರ್-3

ಪಲ್ಲವಿ, ವಿಜ್ಞಾನ ವಿಭಾಗದಲ್ಲಿ 4 ನೇ ರ‍್ಯಾಂಕ್‌(ರಾಜಾಜಿನಗರ ಎಸ್‌ಸಿ ಪಿಯು ಕಾಲೇಜು)

ನಮ್ಮದು ತುಂಬು ಬಡ ಕುಟುಂಬ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದು, ನಮ್ಮ ತಂದೆ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಾ ನನ್ನನ್ನು ಓದಿಸಿದ್ದಾರೆ. ನಮ್ಮದು ಬಡ ಕುಟುಂಬವಾದ್ದರಿಂದ ಹೆಚ್ಚಿನ ಆಸೆಗಳನ್ನು ಕಂಡಿಲ್ಲ. ಆದರೆ, ದಿನಾಲೂ ಐದಾರು ಗಂಟೆ ಸತತವಾಗಿ ಅಭ್ಯಾಸ ಮಾಡುತ್ತಾ ಶ್ರಮ ಪಡುತ್ತಿದ್ದೆ. ಕಷ್ಟದಲ್ಲಿಯೂ ತಂದೆ-ತಾಯಿ ನನಗೆ ಅಗತ್ಯವಾದ ಸಹಕಾರ ನೀಡಿದ್ದಾರೆ. ಎಂಜಿನಿಯರ್ ಆಗಬೇಕು ಎಂಬ ಆಸೆಯಿದೆ. ಅದರ ಜತೆಗೆ ಐಎಎಸ್ ಓದಲು ತಯಾರಿ ನಡೆಸುತ್ತಿದ್ದೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News