ಸಿದ್ದರಾಮಯ್ಯರಿಗೆ ಕೊಡಗಿನಲ್ಲಿ ಮತಯಾಚಿಸುವ ನೈತಿಕ ಹಕ್ಕಿಲ್ಲ: ಪ್ರತಾಪ್ ಸಿಂಹ

Update: 2019-04-15 12:00 GMT

ಮಡಿಕೇರಿ,ಎ.15: ಪ್ರಾಕೃತಿಕ ವಿಕೋಪದಿಂದ ಕೊಡಗು ಸಂಕಷ್ಟದಲ್ಲಿದ್ದಾಗ ಕಾಗಿನೆಲೆ ಶ್ರೀಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಹಿಸಿಕೊಂಡು ಮಾತನಾಡುವ ಸಂದರ್ಭ ಜಿಲ್ಲೆಯ ಜನರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಹೇಳಿಕೆಯನ್ನು ನೀಡಿದ್ದರು. ಇದನ್ನು ಇಲ್ಲಿಯವರೆಗೆ ಖಂಡಿಸದ ಸಿದ್ದರಾಮಯ್ಯ ಅವರಿಗೆ ಕೊಡಗಿನ ಜನರ ಮತಯಾಚಿಸುವ ನೈತಿಕ ಹಕ್ಕಿಲ್ಲವೆಂದು ಕೊಡಗು, ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಗುಡುಗಿದ್ದಾರೆ.

ಮಡಿಕೇರಿಯಲ್ಲಿ ಮತಯಾಚಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಕೊಡಗು ಪ್ರಾಕೃತಿಕ ವಿಕೋಪಕ್ಕೆ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದೇ ಕಾರಣವೆಂದು ಹೇಳಿಕೆ ನೀಡಿದ್ದರೂ ಅದನ್ನು ಎಂದೂ ಖಂಡಿಸದ ಸಿದ್ದರಾಮಯ್ಯ ಅವರು ಈಗ ಯಾವ ಮುಖವಿಟ್ಟುಕೊಂಡು ಜಿಲ್ಲೆಗೆ ಬಂದು ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.

ಕೊಡಗು ಸಂಕಷ್ಟದಲ್ಲಿರುವಾಗ ಇಡೀ ರಾಜ್ಯದ ಜನರು ಕೊಡಗಿನ ಕಣ್ಣೀರು ಒರೆಸಿದ್ದರು. ಅಂತಹ ಸಂದರ್ಭದಲ್ಲಿ ಕಾಗಿನೆಲೆ ಶ್ರೀಗಳು ಕೊಡಗಿನ ಜನರ ಕುರಿತು ಚುಚ್ಚಿ ಮಾತನಾಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಪ್ರತಾಪ್ ಸಿಂಹ ಆರೋಪಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರು ಅರಣ್ಯ ಸಚಿವರಾಗಿದ್ದಾಗ ಕೊಡಗಿಗೆ ಮಾರಕವಾದ ಡಾ.ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಅಲ್ಲದೆ ಕೊಡಗಿಗೆ ಬಂದು ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯೂ ಉಳಿದಿಲ್ಲ. ಆದ್ದರಿಂದ ಕೊಡಗಿನಲ್ಲಿ ಮತಯಾಚಿಸುವ ಹಕ್ಕು ಇವರಿಗೆ ಕೂಡ ಇಲ್ಲವೆಂದು ಅಭಿಪ್ರಾಯಪಟ್ಟರು.

ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ಟೀಕೆ ಸಹಜ, ಆದರೆ ಕಳೆದ 5 ವರ್ಷಗಳ ಕಾಲ ಕೊಡಗಿನ ಅಭಿವೃದ್ಧಿಗಾಗಿ ಇಲ್ಲಿನ ಶಾಸಕರುಗಳ  ನೆರವಿನೊಂದಿಗೆ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಜನರ ಆಶೀರ್ವಾದ ಮತ್ತೆ ನನಗೆ ಸಿಗಲಿದೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ನಗರಾಧ್ಯಕ್ಷ ಮಹೇಶ್ ಜೈನಿ, ನಗರಸಭೆಯ ಮಾಜಿ ಬಿಜೆಪಿ ಸದಸ್ಯರುಗಳು ಹಾಗೂ ವಿವಿಧ ಮೋರ್ಚಾಗಳ ಮುಖಂಡರು ಈ ಸಂದರ್ಭ ಹಾಜರಿದ್ದರು. ಜೆಡಿಎಸ್ ನಲ್ಲಿದ್ದ ನಗರಸಭೆಯ ಮಾಜಿ ಸದಸ್ಯೆ ಸಂಗೀತ ಪ್ರಸನ್ನ ಇದೇ ಸಂದರ್ಭ ಬಿಜೆಪಿಗೆ ಸೇರ್ಪಡೆಯಾದರು. 

ಪ್ರಚಾರ ಕಾರ್ಯಕ್ಕೂ ಮೊದಲು ಪ್ರತಾಪ್ ಸಿಂಹ ಅವರು ನಗರದ ಶ್ರೀಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News