ದ್ವೇಷಭಾಷಣ: ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ; ಇಂದು ಕ್ಲೈಮ್ಯಾಕ್ಸ್

Update: 2019-04-16 03:48 GMT

ಹೊಸದಿಲ್ಲಿ, ಎ.16: ದ್ವೇಷ ಭಾಷಣ ಮಾಡುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗವನ್ನು ಸುಪ್ರೀಂಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ. ಸುಪ್ರೀಂಕೋರ್ಟ್ ಚಾಟಿ ಬೀಸಿದ ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಬಿಎಸ್ಪಿ ನಾಯಕಿ ಮಾಯಾವತಿ, ಕೇಂದ್ರ ಸಚಿವೆ ಮೇನಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖಂಡ ಅಝಂ ಖಾನ್ ವಿರುದ್ಧ ಆಯೋಗ ಪ್ರಚಾರ ನಿಷೇಧ ಹೇರಿದೆ.

ಜಾತಿ, ಧರ್ಮ ಮತ್ತು ದ್ವೇಷ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಹರ್ಪ್ರೀತ್ ಮನಸುಖಾನಿ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸುಪ್ರೀಂಕೋರ್ಟ್ ನೀಡಿದ ನೋಟಿಸ್ ಹಿನ್ನೆಲೆಯಲ್ಲಿ ವಕೀಲ ಅಮಿತ್ ಶರ್ಮಾ ಮೂಲಕ ಉತ್ತರಿಸಿದ ಚುನಾವಣಾ ಆಯೋಗ, "ದ್ವೇಷಭಾಷಣ ಮತ್ತು ಧರ್ಮ ಹಾಗೂ ಜಾತಿ ಆಧಾರದಲ್ಲಿ ಮತ ಯಾಚಿಸಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ, ನೋಟಿಸ್ ನೀಡಿ ಬಳಿಕ ಅವರಿಂದ ಬಂದ ಉತ್ತರದ ಹಿನ್ನೆಲೆಯಲ್ಲಿ ಸೂಚನೆಗಳನ್ನು ನೀಡುವ ಅಧಿಕಾರವಷ್ಟೇ ಆಯೋಗಕ್ಕೆ ಇದೆ" ಎಂದು ಸ್ಪಷ್ಟಪಡಿಸಿತು.

ಈ ಸಂದರ್ಭದಲ್ಲಿ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ, "ಯಾವುದೇ ಕ್ರಮ ಕೈಗೊಳ್ಳಲು ಆಯೋಗ ಹಲ್ಲಿಲ್ಲದ ಹಾವೇ? ಕೇವಲ ಸೂಚನೆಗಳನ್ನು ನೀಡುವುದಕ್ಕಷ್ಟೇ ನಿಮ್ಮ ಅಧಿಕಾರ ಸೀಮಿತವೇ?" ಎಂದು ಪ್ರಶ್ನಿಸಿತು.

ದ್ವೇಷಭಾಷಣದ ಸಂಬಂಧ ನೀಡಿದ ನೋಟಿಸ್‌ಗಳಿಗೆ ರಾಜಕೀಯ ಮುಖಂಡರು ಇದುವರೆಗೆ ಉತ್ತರಿಸಿಲ್ಲ ಎಂದು ಆಯೋಗದ ಪರ ವಕೀಲರು ಸ್ಪಷ್ಟಪಡಿಸಿದರು.

ದ್ವೇಷಭಾಷಣ ಮಾಡುವ ರಾಜಕಾರಣಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಮೃದು ಧೋರಣೆ ಅನುಸರಿಸುತ್ತಿರುವ ಆಯೋಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, "ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ಎಲ್ಲ ವಿಚಾರಗಳ ಬಗ್ಗೆ ಮಾಹಿತಿ ಇರುವ ಚುನಾವಣಾ ಆಯೋಗದ ಪ್ರತಿನಿಧಿಯೊಬ್ಬರು ಮಂಗಳವಾರ ಬೆಳಗ್ಗೆ 10:30ಕ್ಕೆ ನ್ಯಾಯಾಲಯದ ಮುಂದೆ ಹಾಜರಾಗಬೇಕು" ಎಂದೂ ಸೂಚಿಸಿತು. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಹಕರಿಸುವಂತೆ ಅರ್ಜಿದಾರರ ಪರ ವಕೀಲ ಸಂಜಯ್ ಹೆಗ್ಡೆ ಅವರನ್ನು ನ್ಯಾಯಾಲಯ ಕೋರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News