ಹಾಸನ, ಮಂಡ್ಯದಲ್ಲಿ ಸಚಿವರ ಆಪ್ತರ ಮೇಲೆ ಐಟಿ ದಾಳಿ

Update: 2019-04-16 04:49 GMT

ಹಾಸನ, ಎ.16: ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಸರಣಿ ಮುಂದುವರಿದಿದ್ದು, ಇಂದು ಬೆಳಗ್ಗೆ ಸಚಿವರಾದ ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು ಹಾಗೂ ಡಿ.ಸಿ.ತಮ್ಮಣ್ಣ ಅವರ ಆಪ್ತರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ.

ಹಾಸನದಲ್ಲಿ ಐದು ಕಡೇ ದಾಳಿ ನಡೆದಿದೆ. ರೇವಣ್ಣರ ಸೋದರ ಸಂಬಂಧಿ, ಹರದನಹಳ್ಳಿಯಲ್ಲಿರುವ ಜಿಪಂ ಮಾಜಿ ಸದಸ್ಯ ಪಾಪಣ್ಣಿ ಎಂಬವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಪರಿಶೀಲನೆ ನಡೆಸುತ್ತಿದ್ದಾರೆ. ಇಲ್ಲಿ ಐದಾರು ಗಂಟೆಗಳಿಂದ ಪರಿಶೀಲನೆ ಮುಂದುವರಿದಿದೆ. ರೇವಣ್ಣರ ಮತ್ತೋರ್ವ ಆಪ್ತರಾದ ವಿದ್ಯಾನಗರದಲ್ಲಿರುವ ಕಾರ್ಲೆ ಇಂದ್ರೇಶ್ ಎಂಬವರ ಮನೆಗೂ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಇಂದ್ರೇಶ್ ಗುತ್ತಿಗೆದಾರರು ಕೂಡಾ ಆಗಿದ್ದಾರೆ.
 
ಮಂಡ್ಯ: ಇನ್ನು ಮಂಡ್ಯದಲ್ಲಿ ಇಂದು ಬೆಳಗ್ಗೆ ಜಿಪಂ ಅಧ್ಯಕ್ಷೆ ನಾಗರತ್ನಾ ಸ್ವಾಮಿ, ಸಚಿವ ಡಿ.ಸಿ.ತಮ್ಮಣ್ಣ ಆಪ್ತ ಸಾಲದೊಳಲು ಸ್ವಾಮಿ, ಜಿಪಂ ಸದಸ್ಯ ಸಚಿವ ಸಿ.ಎಸ್.ಪುಟ್ಟರಾಜ ಆಪ್ತರಾದ ತಿಮ್ಮೇಗೌಡ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ಪಾಂಡವಪುರದಲ್ಲಿರುವ ತಿಮ್ಮೇಗೌಡರ ಮನೆ, ಪೆಟ್ರೋಲ್ ಬಂಕ್ ಮೇಲೆ ರೈಡ್ ನಡೆಸಿರುವ ಐಟಿ ಅಧಿಕಾರಿಗಳು ಪರಿಶೀಲನೆಯನ್ನು ಮುಂದುವರಿಸಿದ್ದಾರೆ.

ರಾಜಕೀಯಪ್ರೇರಿತ ದಾಳಿ
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸಿರುವ ದಾಳಿ ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
 ಬಿಜೆಪಿ ಅಧಿಕಾರಿ ದುರುಪಯೋಗಪಡಿಸಿಕೊಂಡು ಈ ಐಟಿ ದಾಳಿ ಮಾಡಿಸುತ್ತಿದೆ. ಯಾವುದೇ ಸಾಕ್ಷಗಳಿಲ್ಲದ್ದರೂ ನಡೆಯುತ್ತಿರುವ ಈ ಐಟಿ ದಾಳಿಯ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಗರನ್ನು ಬೆದರಿಸುವ ಉದ್ದೇಶ ಅಡಗಿದೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News