ಶಶಿ ತರೂರ್ ರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

Update: 2019-04-16 06:25 GMT

ತಿರುವನಂತಪುರಂ, ಎ.16: ಕೇರಳದ ತಂಪನೂರ್ ಎಂಬಲ್ಲಿನ  ಗಾಂಧಾರಿ ಅಮ್ಮನ್ ದೇವಳದಲ್ಲಿ ತುಲಾಭಾರ ಸೇವೆ ಸಮರ್ಪಿಸುವ ಸಂದರ್ಭ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ತಿರುವನಂತಪುರಂ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ಸೋಮವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು.

 ದೇವಸ್ಥಾನದಲ್ಲಿ ತುಲಾಭಾರ ಸಮರ್ಪಿಸುವ ಸಂದರ್ಭ  ತುಲಾಭಾರದ ಸಾಧನ ಕುಸಿದು ಅವರ ಮೇಲೆ ಬಿದ್ದ ಪರಿಣಾಮ ತರೂರ್ ಅವರ ತಲೆಗುಂಟಾದ ಗಾಯಗಳಿಗೆ ವೈದ್ಯರು 11  ಹೊಲಿಗೆಗಳನ್ನು ಹಾಕಬೇಕಾಯಿತು.

ಸಚಿವೆ ತಮ್ಮನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಸಂದರ್ಭದ ಫೋಟೋವನ್ನು ಟ್ವೀಟ್ ಮಾಡಿದ ತರೂರ್,  ತಮ್ಮ ಎಡೆಬಿಡದ ಪ್ರಚಾರದ ನಡುವೆಯೂ  ಸಚಿವೆ ತಮ್ಮನ್ನು ಭೇಟಿಯಾಗಿರುವುದರಿಂದ ಹೃದಯ ತುಂಬಿ ಬಂದಿದೆ ಎಂದಿದ್ದಾರೆ. “ಭಾರತದ ರಾಜಕೀಯದಲ್ಲಿ ನಾಗರಿಕತೆ ಒಂದು ಅಪರೂಪದ  ಗುಣ,  ಸಚಿವೆ ಅದಕ್ಕೊಂದು ದೃಷ್ಟಾಂತವಾಗಿರುವುದು ಖುಷಿಯಾಗಿದೆ'' ಎಂದು ತರೂರ್ ಬರೆದಿದ್ದಾರೆ.

ದೇವಳದಲ್ಲಿನ ಅವಘಡ ಸಂಭವಿಸಿದ ಕೂಡಲೇ ತರೂರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡು ಹೋಗಿ ನಂತರ ಅಲ್ಲಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು  ವೈದ್ಯರು ತಿಳಿಸಿದ್ದಾರೆ.

ತಮ್ಮ ಪ್ರಚಾರ ಕಾರ್ಯ ಆರಂಭಗೊಳ್ಳುವ ಮೊದಲೂ ತರೂರ್ ಕಝಕ್ಕೂಟ್ಟಂ ಕ್ಷೇತ್ರದ ದೇವಳದಲ್ಲಿ ತುಲಾಭಾರ ಸೇವೆ ಸಮರ್ಪಿಸಿದ್ದರು.  ತಿರುವನಂತಪುರಂನಿಂದ ಮೂರನೇ ಬಾರಿ ಆಯ್ಕೆ ಬಯಸಿ ಈ ಬಾರಿ ಮತ್ತೆ ತರೂರ್ ಕಣದಲ್ಲಿದ್ದು ಅವರೆದುರು ಬಿಜೆಪಿಯ ಕುಮ್ಮನಂ ರಾಜಶೇಖರನ್ ಸ್ಪರ್ಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News