ಮುಸ್ಲಿಂ ಮಹಿಳೆಯರಿಗೆ ಮಸೀದಿ ಪ್ರವೇಶಿಸಲು ಸುಪ್ರೀಂಗೆ ಅರ್ಜಿ; ಕೇಂದ್ರ ಸರಕಾರಕ್ಕೆ ಕೋರ್ಟ್ ನೋಟಿಸ್

Update: 2019-04-16 08:01 GMT

ಹೊಸದಿಲ್ಲಿ, ಎ.16: ಮುಸ್ಲಿಂ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಮಸೀದಿ ಪ್ರವೇಶಿಸಲು ಅವಕಾಶ ನೀಡುವಂತೆ ಮಹಾರಾಷ್ಟ್ರದ ದಂಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಮಂಗಳವಾರ ಈ ಸಂಬಂಧ ಕೇಂದ್ರ ಸರಕಾರ , ವಕ್ಫ್ ಮಂಡಳಿ ಮತ್ತು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್ ಬಿ)ಗೆ ನೋಟಿಸ್ ಜಾರಿಗೊಳಿಸಿದೆ.

ಇತ್ತೀಚೆಗೆ ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ , ಇದೀಗ ಮಸೀದಿಗಳಿಗೂ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಮಹಾರಾಷ್ಟ್ರದ ದಂಪತಿ ಯಾಸ್ಮಿನ್ ಝುಬೇರ್ ಅಹ್ಮದ್  ಪೀರ್ಝಾಡೆ ಮತ್ತು ಝುಬೇರ್ ನಝೀರ್ ಅಹ್ಮದ್  ಪೀರ್ಝಾಡೆ  ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠವು  ದಂಪತಿ   ಸಲ್ಲಿಸಿರುವ ಸಾರ್ವಜನಿಕ  ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದೆ.
ಮಹಿಳೆಯರಿಗೆ ಮಸೀದಿ ಪ್ರವೇಶ ನಿಷೇಧವು ಮಹಿಳೆಯ ಮೂಲಭೂತ ಹಕ್ಕಿನ ಉಲ್ಲಂಘನೆ, ಈ ಕಾರಣದಿಂದಾಗಿ  ಮಹಿಳೆಯರಿಗೆ ಪುರುಷರಂತೆಯೇ ಮಸೀದಿಗೆ  ಪ್ರವೇಶಿಸಲು ,  ಪ್ರಾರ್ಥನೆ ಸಲ್ಲಿಸಲು ಅವಕಾಶ ಒದಗಿಸಬೇಕು ಎಂದು ಯಾಸ್ಮಿನ್ ಝುಬೇರ್ ಅಹ್ಮದ್  ಪೀರ್ಝಾಡೆ ಮತ್ತು ಝುಬೇರ್ ನಝೀರ್ ಅಹ್ಮದ್  ಪೀರ್ಝಾಡೆ  ಸುಪ್ರೀಂ ಗೆ  ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News