ಮೋದಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ, ಬಿಜೆಪಿಗೆ ಮತ ಹಾಕದಿದ್ದರೆ ತಿಳಿಯುತ್ತದೆ ಎಂದ ಬಿಜೆಪಿ ಶಾಸಕ

Update: 2019-04-16 11:26 GMT

ಹೊಸದಿಲ್ಲಿ, ಎ.16 ಪ್ರಧಾನಿ ನರೇಂದ್ರ ಮೋದಿ ಮತದಾನ ಕೇಂದ್ರಗಳಲ್ಲಿ  ಕ್ಯಾಮರಾ ಅಳವಡಿಸಿದ್ದು ಯಾರು ಬಿಜೆಪಿಗೆ ಹಾಗೂ ಯಾರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದ್ದಾರೆಂದು ತಿಳಿದುಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಗುಜರಾತ್ ನ ಫತೇಹಪುರ ಶಾಸಕ ರಮೇಶ್ ಕಟಾರ ವಿವಾದ ಸೃಷ್ಟಿಸಿದ್ದಾರೆ. ಮಂಗಳವಾರ ದಹೋಡ್ ಕ್ಷೇತ್ರದ ಗ್ರಾಮವೊಂದರಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ವೇಳೆ ಕ್ಯಾಮರಾ ಎದುರೇ ಅವರು ಈ ಮಾತುಗಳನ್ನು ಹೇಳಿದ್ದಾರೆ.

“ನೀವು ಜಸ್ವಂತ್ ಸಿಂಗ್ ಭಾಭೊರ್ (ದಹೋಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ) ಹಾಗೂ ತಾವರೆಯ ಚಿಹ್ನೆಯನ್ನು ಇವಿಎಂನಲ್ಲಿ ನೋಡಬಹುದು. ಅದನ್ನು ನೋಡಿ ಬಟನ್ ಒತ್ತಿ.  ಎಲ್ಲಿಯೂ ತಪ್ಪಾಗಬಾರದು, ಏಕೆಂದರೆ ಮೋದಿ ಸಾಬ್ ಈ ಬಾರಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ'' ಎಂದು ಜನರ ಒಂದು ಸಣ್ಣ ಗುಂಪನ್ನು ಉದ್ದೇಶಿಸಿ ರಮೇಶ್ ಕಟಾರ ಹೇಳಿದ್ದಾರೆ.

ಕೆಲವರಿಗೆ ತಮ್ಮ ಮಾತುಗಳು ಅರ್ಥವಾಗದೇ ಇದ್ದರೆ ಅರ್ಥವಾಗಲಿ ಎಂದು ಮತ್ತೆ ಇದೇ ವಿಚಾರ ಹೇಳಿದ ಕಟಾರ ``ಯಾರು ಬಿಜೆಪಿಗೆ ಮತ ಹಾಕಿದ್ದಾರೆ ಹಾಗೂ ಯಾರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆಂಬುದು ತಿಳಿಯುತ್ತದೆ.  ಆಧಾರ್ ಕಾರ್ಡ್ ಮತ್ತು ಎಲ್ಲಾ ಕಾರ್ಡುಗಳಲ್ಲಿ ಈಗ ನಿಮ್ಮ ಫೋಟೋ ಇದೆ.  ನಿಮ್ಮ ಬೂತ್ ನಿಂದ ಕೆಲವೇ ಮತಗಳು ಬಿದ್ದಿವೆಯೆಂದಾದರೆ ಯಾರು ಅವರಿಗೆ ಮತ ನೀಡಿಲ್ಲ ಎಂದು ತಿಳಿಯುತ್ತದೆ, ನಂತರ ನಿಮಗೆ ನೌಕರಿ ದೊರೆಯುವುದಿಲ್ಲ'' ಎಂದು ಶಾಸಕ ಹೇಳಿಕೊಂಡಿದ್ದಾರೆ.

ಈ ಹೇಳಿಕೆಗಳು ವಿಪಕ್ಷಗಳಿಂದ ಭಾರೀ ಟೀಕೆಗೆ ಒಳಗಾಗಿವೆ. “ಅಸಹಾಯಕ ಮತದಾರರನ್ನು ಬೆದರಿಸಲಾಗುತ್ತಿದೆ. ಇಂತಹ ತಂತ್ರಗಾರಿಕೆಗಳು ಪರಿಣಾಮ ಬೀರುತ್ತವೆ'' ಎಂದು ಆರ್‍ಜೆಡಿ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News