ಬಂಡವಾಳ ಖಾಲಿಯಾಗಿ ಉತ್ತರ ಕರ್ನಾಟಕಕ್ಕೆ ಬರುತ್ತಿದ್ದಾರೆ: ಡಿಕೆಶಿ ವಿರುದ್ಧ ಎಂ.ಬಿ.ಪಾಟೀಲ್ ವಾಗ್ದಾಳಿ

Update: 2019-04-16 14:30 GMT

ವಿಜಯಪುರ, ಎ. 16: ಒಕ್ಕಲಿಗರ ಪ್ರಾಬಲ್ಯದ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಿದವರು, ತಮ್ಮ ಬಂಡವಾಳ ಅಲ್ಲಿ ಖಾಲಿಯಾದ ಬಳಿಕ ಉತ್ತರ ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಗೃಹ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರ ದರ್ಪದ ನುಡಿ, ಬಾಡಿ ಲಾಂಗ್ವೇಜ್‌ಗೆ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಪೂರ್ಣ ನಾಶವಾಗಿದೆ. ನಾನು ಅವರ ಗುರುವಲ್ಲ. ಅವರು ನನ್ನ ಶಿಷ್ಯನೂ ಅಲ್ಲ. ಇಬ್ಬರೂ ಸಹೋದ್ಯೋಗಿಗಳಷ್ಟೇ ಎಂದು ವಾಗ್ದಾಳಿ ನಡೆಸಿದರು.

ಆದಾಯ ತೆರಿಗೆ ಇಲಾಖೆ(ಐಟಿ) ದಾಳಿ ನಡೆದಾಗ ಯಾರ ಮನೆಯಲ್ಲಿ ಹಣ ಪತ್ತೆಯಾಯಿತು ಎಂಬುದು ಬಹಿರಂಗಗೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ನೀಡಿರಬಹುದಲ್ಲಾ? ಒಕ್ಕಲಿಗ ಸಮಾಜದ ಬಗ್ಗೆ ಗೌರವವಿದೆ. ನಾವೇನಾದರೂ ಅವರ ಬಗ್ಗೆ ಮಾತನಾಡಿದ್ದೇವಾ. ಆದರೆ, ಆ ಸಮಾಜದಲ್ಲಿ ಹುಟ್ಟಿದ ಇಂಥ ಕೆಲ ವ್ಯಕ್ತಿಗಳು ಕಳಂಕವಾಗುತ್ತಿದ್ದಾರೆಂದು ಪರೋಕ್ಷವಾಗಿ ಲೇವಡಿ ಮಾಡಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಮಾತನಾಡದಂತೆ ಕೆಪಿಸಿಸಿ ಇಬ್ಬರಿಗೂ ಸೂಚಿಸಿತ್ತು. ಆದರೆ, ಶಿವಕುಮಾರ್ ಪದೇ-ಪದೇ ಇದೇ ವಿಷಯ ಕೆದಕುತ್ತಿದ್ದಾರೆ. ಮೊದಲು ತಮ್ಮ ಮನೆ ಶುದ್ಧವಾಗಿಟ್ಟುಕೊಳ್ಳಲಿ. ಈ ಸಂಬಂಧ ದಿನೇಶ್ ಗುಂಡೂರಾವ್‌ಗೆ ದೂರು ನೀಡುತ್ತೇನೆಂದು ತಿಳಿಸಿದರು.

ಬಿಜೆಪಿ ಶಾಸಕ ಎ.ಎಸ್.ನಡಹಳ್ಳಿ ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತು ಮಾಡಲಿ. ಇಲ್ಲವೆ ಕಾರಾಗೃಹಕ್ಕೆ ಹೋಗಲು ಸಿದ್ಧವಾಗಿರಲಿ. ಕಾನೂನು ತಜ್ಞರ ಜತೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ ಎಂದು ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News