ಬಹಿರಂಗ ಪ್ರಚಾರಕ್ಕೆ ತೆರೆ: ಮತದಾರರ ಮನ ಗೆಲ್ಲಲು ಮನೆ-ಮನೆ ಪ್ರಚಾರಕ್ಕಿಳಿದ ಅಭ್ಯರ್ಥಿಗಳು

Update: 2019-04-16 13:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ. 16: ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಎ.18 ರಂದು ಮತದಾನ ನಡೆಯಲಿದೆ. ಒಂದು ತಿಂಗಳಿಂದ ನಡೆದಿದ್ದ ಅಬ್ಬರದ ಬಹಿರಂಗ ಪ್ರಚಾರಕ್ಕೆ ತೆರೆ ಬಿದಿದ್ದು ಕೊನೆಯ ಕ್ಷಣದಲ್ಲಿ ಮತದಾರರ ಮನ ಗೆಲ್ಲಲು ಮನೆ-ಮನೆ ಪ್ರಚಾರಕ್ಕೆ ಅಭ್ಯರ್ಥಿಗಳು ಮುಂದಾಗಿದ್ದಾರೆ.

ಚುನಾವಣಾ ಅಖಾಡದಲ್ಲಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಆಯಾ ಪಕ್ಷಗಳ ಮುಖಂಡರು, ಪಕ್ಷೇತರರು ಹಾಗೂ ಕಾರ್ಯಕರ್ತರು ನಿರಂತರವಾಗಿ ನಡೆಸುತ್ತಿದ್ದ ರೋಡ್ ಶೋ, ಬಹಿರಂಗ ಸಮಾವೇಶಗಳಿಗೆ ಇಂದೇ ತೆರೆ ಬಿದ್ದಿದ್ದು ಕೊನೆಯ ಕ್ಷಣದಲ್ಲಿ ಕತ್ತಲರಾತ್ರಿಯ ‘ಕರಾಮತ್ತು’ ನಡೆಸಲು ಸಿದ್ದತೆ ನಡೆಸಿದ್ದಾರೆ.

ಮೈತ್ರಿ ಅಭ್ಯರ್ಥಿಗಳ ಪರ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸಿದ್ದು, ಮತ್ತೊಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.

ತಿಂಗಳಿಂದ ಹಗಲು-ರಾತ್ರಿಗಳ ಪರಿವೆ ಇಲ್ಲದೆ ಪ್ರಚಾರ ನಡೆಸುತ್ತಿದ್ದ ರಾಜಕೀಯ ಪಕ್ಷಗಳ ಮುಖಂಡರು ಸಂಜೆಯಾಗುತ್ತಿದ್ದಂತೆ(ಮತದಾರರಲ್ಲದವರು) ಚುನಾವಣಾ ಆಯೋಗದ ನಿರ್ದೇಶನದಂತೆ ಕ್ಷೇತ್ರ ಬಿಟ್ಟು ತೆರಳಬೇಕಾಗಿರುವುದರಿಂದ ಗಂಟು-ಮೂಟೆ ಕಟ್ಟಿದ್ದು, ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.

ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಿಗೆ ಎ.18ರ ಬೆಳಗ್ಗೆ 7ಗಂಟೆಯಿಂದಲೆ ಮತದಾನ ಆರಂಭವಾಗಲಿದೆ.

ದೇಶದ ಗಮನ ಸೆಳೆದಿರುವ ತುಮಕೂರು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಂಡ್ಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ಹಾಸನ ಕ್ಷೇತ್ರದಲ್ಲಿ ಸಚಿವ ಎಚ್.ಡಿ. ರೇವಣ್ಣರ ಪುತ್ರ ಪ್ರಜ್ವಲ್, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸೇರಿದಂತೆ ಘಟಾನುಘಟಿ ಮುಖಂಡರು ಸ್ಪರ್ಧಾಕಣದಲ್ಲಿದ್ದಾರೆ.

ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್-10, ಜೆಡಿಎಸ್-4, ಬಿಜೆಪಿ-13, ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಪಕ್ಷೇತರ ಅಭ್ಯರ್ಥಿಗಳು ಸೇರಿ ಸ್ಪರ್ಧಾಕಣದಲ್ಲಿ 241 ಅಭ್ಯರ್ಥಿಗಳಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ ಸೃಷ್ಟಿಸಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ 14 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಜೆಯಿಂದಲೇ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ, ಬಿಗಿ ಪೊಲೀಸ್ ಬಂದ್‌ಬಸ್ತ್ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News