‘ನಮ್ಮನ್ನು ಕೊಂದ ನಿಮಗೆ ಅವಕಾಶ ನೀಡಲ್ಲ’: ಮೋದಿ ರ‍್ಯಾಲಿ ಸಮೀಪ ಕಾರ್ಮಿಕರ ಪ್ರತಿಭಟನೆ

Update: 2019-04-16 14:34 GMT

ಹೊಸದಿಲ್ಲಿ, ಎ. 16: ಮೋದಿ ಸರಕಾರ ಅಸ್ಸಾಂನಲ್ಲಿ ಎಚ್‌ಪಿಸಿ ಪೇಪರ್ ಮಿಲ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರಿಂದ ಎರಡು ಲಕ್ಷ ಜನರು ನಿರುದ್ಯೋಗಿಗಳಾಗಿರುವುದು ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ 51 ಕಾರ್ಮಿಕರು ಸಾವನ್ನಪ್ಪಿರುವುದನ್ನು ಖಂಡಿಸಿ ಅಸ್ಸಾಂನ ಕಚಾರ್ ಪೇಪರ್ ಮಿಲ್ ಹಾಗೂ ನಾಗಾಂವ್ ಪೇಪರ್ ಮಿಲ್‌ನ ಕಾರ್ಮಿಕರ ಸಂಘಟನೆ ಎಚ್‌ಪಿಸಿ ಪೇಪರ್ ಮಿಲ್ಸ್ ನವೀಕರಣ ಕ್ರಿಯಾ ಸಮಿತಿ ಮಂಗಳವಾರ ಪ್ರಧಾನಿ ಮೋದಿ ಚುನಾವಣಾ ರ‍್ಯಾಲಿ ನಡೆಸುತ್ತಿದ್ದ ಸಿಲ್ಚಾರ್‌ನ ಸಮೀಪ ಪ್ರತಿಭಟನೆ ನಡೆಸಿತು.

ನರೇಂದ್ರ ಮೋದಿ ಅಸ್ಸಾಂನ ಬೆಂಗಾಳಿ ಹಿಂದೂ ಪ್ರಾಬಲ್ಯದ ಸಿಲ್ಚಾರ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಸ್ಪಲ್ಪ ದೂರದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು ಹಾಗೂ ಕೇಂದ್ರ ಸರಕಾರ ಮಾಲಕತ್ವದ ಹಿಂದೂಸ್ತಾನ್ ಪೇಪರ್ ಕಾರ್ಪೊರೇಶನ್ ಲಿಮಿಟೆಡ್ ನಡೆಸುತ್ತಿರುವ ಎರಡು ಪೇಪರ್ ಮಿಲ್‌ಗಳ ನವೀಕರಣ ಮಾಡುವುದಾಗಿ ಈ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ನೆನಪಿಸಿದರು.

 2016ರಲ್ಲಿ ನಡೆದ ವಿಧಾನ ಸಭೆ ಚುನಾವಣೆ ಸಂದರ್ಭ ರಾಜ್ಯದ ಬರಾಕ್ ಹಾಗೂ ಬ್ರಹ್ಮಪುತ್ರ ಕಣಿವೆಯಲ್ಲಿರುವ ಕಚಾರ್ ಹಾಗೂ ನಾಗಾಂವ್ ಪೇಪರ್ ಮಿಲ್‌ಗಳ ಕಾರ್ಮಿಕರಿಗೆ ಬಿಜೆಪಿ ಭರವಸೆ ನೀಡಿತ್ತು ಎಂದು ಹೇಳಲಾಗುತ್ತಿದೆ. 2015ರಲ್ಲಿ ಕಚಾರ್ ಘಟಕ ಬಾಗಿಲು ಮುಚ್ಚಿರುವುದರಿಂದ ತೊಂದರೆಗೀಡಾದ ಪೇಪರ್ ಮಿಲ್‌ನ ಉದ್ಯೋಗಿಗಳನ್ನು ಒಳಗೊಂಡ ಪ್ರತಿಭಟನಕಾರರು ‘ಪ್ರಧಾನ ಮಂತ್ರಿ ಹಿಂದೆ ಹೋಗಿ’, ‘ಹಲವು ನೌಕರರನ್ನು ಕೊಂದ ನಿಮಗೆ ನಾವು ಇಲ್ಲಿ ಅವಕಾಶ ನೀಡಲಾರೆವು’ ಎಂದು ಅವರು ಘೋಷಣೆಗಳನ್ನು ಕೂಗಿದರು.

ಎಚ್‌ಪಿಸಿ ಪೇಪರ್ ಮಿಲ್‌ನ ನವೀಕರಣ ಸಮಿತಿಯ ಮುಖ್ಯ ಸಂಚಾಲಕ ಮಾನಬೇಂದ್ರ ಚಕ್ರವರ್ತಿ ಸುದ್ದಿ ವಾಹನಿಯೊಂದಿಗೆ ಮಾತನಾಡಿ, ‘ಮೋದಿ ಅವರು ಸುಳ್ಳುಗಾರ ಹಾಗೂ ದ್ರೋಹಿ’ ಎಂದರು. ‘‘ಕಾಚರ್‌ನ ಘಟಕವನ್ನು 2015ರಲ್ಲಿ ಸ್ಥಗಿತಗೊಳಿಸಲಾಗಿತ್ತು. ವಿಧಾನ ಸಭೆ ಚುನಾವಣೆಗಿಂತ ಮುನ್ನ ಈ ಘಟಕವನ್ನು ನವೀಕರಣಗೊಳಿಸಲಾಗುವುದು ಎಂದು ಬಿಜೆಪಿ ಭರವಸೆ ನೀಡಿತ್ತು. ನಾವು ಬಿಜೆಪಿಗೆ ಮತ ನೀಡಿದೆವು. ಆದರೆ, 2017ರಲ್ಲಿ ನಾಗಾಂವ್ ಘಟಕವನ್ನು ಕೂಡ ಸ್ಥಗಿತಗೊಳಿಸಲಾಯಿತು. ಈ ಮಿಲ್‌ಗಳನ್ನು ನವೀಕರಣಗೊಳಿಸದೇ ಇರುವುದರಿಂದ ಅಸ್ಸಾಂನ ಎರಡು ಲಕ್ಷ ಜನರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಿರುದ್ಯೋಗ ಸಮಸ್ಯೆ ಎದುರಿಸಿದರು. ಹಣಕಾಸಿನ ಬಿಕ್ಕಟ್ಟಿನಿಂದ ಇದುವರೆಗೆ 53 ಜನರು ಮೃತಪಟ್ಟಿದ್ದಾರೆ’’ ಎಂದು ಅವರು ಹೇಳಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರನ್ನು ಪೊಲೀಸರು ಬಂಧಿಸಿದರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣೆ ರ‍್ಯಾಲಿ ನಡೆಯುತ್ತಿದ್ದ ಪ್ರದೇಶದಿಂದ ಸ್ವಲ್ಪ ದೂರ ವರ್ಗಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News