ಮೋದಿ ಮೇ 23ರಂದು ಮಾಜಿ ಪ್ರಧಾನಿಯಾಗಲಿದ್ದಾರೆ: ಅಹ್ಮದ್ ಪಟೇಲ್

Update: 2019-04-16 15:27 GMT

ವಡೋದರಾ,ಎ.16: ನರೇಂದ್ರ ಮೋದಿ ಅವರು ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶಗಳು ಘೋಷಣೆಯಾದಾಗ ಮಾಜಿ ಪ್ರಧಾನಿಯಾಗಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು ಸೋಮವಾರ ಇಲ್ಲಿ ಹೇಳಿದರು.

ಆಡಳಿತ ಬಿಜೆಪಿಯು ತನ್ನ ನೀತಿಗಳಿಂದ ಜನರಿಗೆ ಕಿರುಕುಳಗಳನ್ನು ನೀಡಿದೆ,ಆದರೆ ಅದು ಬಣ್ಣಬಣ್ಣದ ಕನಸುಗಳನ್ನು ತೋರಿಸಲು ಪ್ರಯತ್ನಿಸುತ್ತಿದೆ. ಆದರೆ ಜನರು ಈ ಬಾರಿ ಅದಕ್ಕೆ ಮರುಳಾಗುವುದಿಲ್ಲ ಮತ್ತು ಚುನಾವಣೆಯಲ್ಲಿ ಬಿಜೆಪಿ ಮಣ್ಣುಮುಕ್ಕಲಿದೆ ಎಂದರು.

ಪ್ರತಿಪಕ್ಷಗಳ ‘ಮಹಾ ಮೈತ್ರಿಕೂಟ’ವು ಚುನಾವಣೆಗಳಲ್ಲಿ ಗೆದ್ದ ಬಳಿಕ ತನ್ನ ಪ್ರಧಾನ ಮಂತ್ರಿಯನ್ನು ಆಯ್ಕೆಮಾಡಲಿದೆ ಎಂದೂ ಪಟೇಲ್ ಹೇಳಿದರು.

ಗುಜರಾತಿನಿಂದ ರಾಜ್ಯಸಭಾ ಸದಸ್ಯರಾಗಿರುವ ಪಟೇಲ್,ರಾಜ್ಯದಲ್ಲಿನ 26 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 12ರಿಂದ 15 ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗುಜರಾತಿನಲ್ಲಿ ಶೂನ್ಯ ಸಾಧನೆಯನ್ನು ಮಾಡಿತ್ತು.

ಚುನಾವಣಾ ಪ್ರಚಾರದಲ್ಲಿ ರಾಷ್ಟ್ರವಾದ ಮತ್ತು ಭಯೋತ್ಪಾದನೆಯನ್ನು ವಿಷಯಗಳನ್ನಾಗಿ ಮಾಡಿಕೊಂಡಿರುವುದಕ್ಕೆ ಬಿಜೆಪಿ ವಿರುದ್ಧ  ದಾಳಿ ನಡೆಸಿದ ಅವರು,ಈ ಎರಡು ವಿಷಯಗಳಲ್ಲಿ ಅದು ಕಾಂಗ್ರೆಸ್‌ಗೆ ಉಪದೇಶಿಸಬೇಕಿಲ್ಲ. ಕಾಂಗ್ರೆಸ್ ನಾಯಕರು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದ್ದಾರೆ. ಭಯೋತ್ಪಾದನೆಯ ವಿರುದ್ಧ ಹೇಗೆ ಹೋರಾಡಬೇಕೆಂದು ಅದು ನಮಗೆ ಪಾಠ ಮಾಡುವ ಅಗತ್ಯವಿಲ್ಲ. ಬಿಜೆಪಿಯು ಭಯೋತ್ಪಾದನೆಯಲ್ಲಿ ರಾಜಕೀಯವನ್ನು ನೋಡುತ್ತಿರಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News