ಹಾಸನ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿ

Update: 2019-04-16 16:53 GMT

ಹಾಸನ,ಎ.16: ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಇಂದು ಸಂಜೆ 6 ರಿಂದ ಯಾವುದೇ ಪಕ್ಷದ ಬಹಿರಂಗ ಪ್ರಚಾರ ನಡೆಸುವಂತಿಲ್ಲ ಹಾಗೂ ಸಂಪೂರ್ಣವಾಗಿ ಒಣ ದಿನ ಘೋಷಣೆಯಾಗಿರುವುದಲ್ಲದೇ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರ ಉಪಸ್ಥಿತಿಯಲ್ಲಿ ಸೆಕ್ಟರ್ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕೇವಲ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ಮತಗಟ್ಟೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕಿದೆ. ಮನೆ ಮನೆ ಪ್ರಚಾರ ಹೊರತುಪಡಿಸಿ ಬೇರೆ ಯಾವ ಪ್ರಚಾರಗಳನ್ನು ಮಾಡದಿರುವಂತೆ ನಿಗಾವಹಿಸಬೇಕು ಎಂದು ತಿಳಿಸಿದರು.

ವಿಶೇಷ ಚೇತನರನ್ನು ಮತದಾನಕ್ಕೆ ಕರೆತರಲು ಜಿಲ್ಲಾ ಪಂಚಾಯತ್ ವತಿಯಿಂದ ಆಟೋ ಹಾಗೂ ಟೆಂಪೋ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದನ್ವಯ ವಾಹನ ಚಾಲಕರು ಕರ್ತವ್ಯ ನಿರ್ವಹಿಸಬೇಕು. ವಿಕಲ ಚೇತನರಿಗೆ ನಿಯೋಜನೆಗೊಂಡಿರುವ ವಾಹನಗಳಲ್ಲಿ ಇತರೆ ಸಾರ್ವಜನಿಕರನ್ನಾಗಲೀ ಅಥವಾ ಯಾವುದೇ ಪಕ್ಷದವರನ್ನಾಗಲಿ ಕರೆದೊಯ್ಯುವಂತಿಲ್ಲ ಹಾಗೂ ಯಾವುದೇ ಪಕ್ಷದ ಪೋಸ್ಟರ್ ಗಳನ್ನು ಹಾಕುವಂತಿಲ್ಲ ಎಂದು ಅವರು ಹೇಳಿದರು.  

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಮಾತನಾಡಿ, ಇಂದಿನಿಂದಲೇ ಸೆಕ್ಟರ್ ಪೊಲೀಸ್ ಮೊಬೈಲ್ ಕಾರ್ಯ ನಿರ್ವಹಿಸಲಿದ್ದು, ಮಸ್ಟರಿಂಗ್ ಸಮಯದಲ್ಲಿ ಇವಿಎಂ ಹಾಗೂ ವಿವಿ ಪ್ಯಾಟ್‍ಗಳನ್ನು ರವಾನಿಸುವಂತಹ ಬಸ್‍ಗಳು ಸೂಕ್ತ ಪೊಲೀಸ್ ಬಂದೋಬಸ್ತ್ ಮುಖಾಂತರ ಮತಗಟ್ಟೆಗಳನ್ನು ತಲುಪಲಿದೆ ಎಂದರು.

ಚುನಾವಣೆ ಹಿನ್ನೆಲೆ ಮತದಾನದ ದಿನ ಬಹಳ ಸೂಕ್ಷ್ಮವಾಗಿ ಪ್ರತಿಯೊಂದನ್ನು ಗಮನಿಸುತ್ತಿರಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಚೆಕ್ ಪೋಸ್ಟ್ ಬಳಿ ಕೆಲಸ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ ಎಲ್ಲಾ ವಾಹನಗಳ ತಪಾಸಣೆ ನಡೆಸಬೇಕು. ಎಲ್ಲಾ ಅಧಿಕಾರಿಗಳು, ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಬೇಕು. ಸೆಕ್ಟರ್ ಅಧಿಕಾರಿಗಳು ಹೆಚ್ಚಿನ  ಮುತುವರ್ಜಿವಹಿಸಿ ಕೆಲಸ ಮಾಡಬೇಕು. ಅಕ್ರಮಗಳ ಮೇಲೆ ಕಣ್ಗಾವಲು ಇಡಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಪ್ರೋಬೇಷನರಿ ಐಎಎಸ್ ಅಧಿಕಾರಿ ಹಾಗೂ ಎಂಸಿಸಿ ನೋಡಲ್ ಅಧಿಕಾರಿ ಪ್ರಿಯಾಂಗ.ಎಂ, ತಹಸೀಲ್ದಾರ್ ಶ್ರೀನಿವಾಸಯ್ಯ ಸೇರಿದಂತೆ ಎಲ್ಲಾ ಸೆಕ್ಟರ್ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News