ಕುಮಾರಸ್ವಾಮಿ ನೀಡಿದ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ: ಸುಮಲತಾ ಅಂಬರೀಷ್

Update: 2019-04-16 17:13 GMT

ಮಂಡ್ಯ, ಎ.16: ಮುಖ್ಯಮಂತ್ರಿ ಸೇರಿದಂತೆ ಪ್ರತಿಸ್ಪರ್ಧಿಗಳ ವೈಯಕ್ತಿಕ ತೇಜೋವಧೆ ಕುರಿತು ಜನರಿಂದ ಉತ್ತರ ಬಯಸಿ ಭಾವುಕರಾದ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಕಣ್ಣೀರಿಟ್ಟ ಘಟನೆ ನಡೆಯಿತು.

ಚುನಾವಣೆ ಆರಂಭದಿಂದ ಪ್ರತಿಸ್ಪರ್ಧಿಗಳ ತೇಜೋವಧೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ಅಂಬರೀಷ್ ಅಂತ್ಯಸಂಸ್ಕಾರದ ವಿಷಯವನ್ನು ವೈಭವೀಕರಿಸುವ ಮೂಲಕ ಚುನಾವಣಾ ವಿಷಯ ಶೂನ್ಯತೆಯಿಂದ ಬಳಲುತ್ತಿದ್ದಾರೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೇರೆ ಕುಟುಂಬದವರು ರಾಜಕಾರಣ ಮಾಡುವುದೇ ಬೇಡವೆ ಎಂದು ಪ್ರಶ್ನಿಸಿದ ಅವರು, ಸ್ನೇಹಿತರು, ಬಂಧುಗಳು, ಕಡೆಗೆ ಜಿಲ್ಲೆಯ ಜನರೂ ಇವರಿಗೆ ಕಾಲಕಸಕ್ಕಿಂತ ಕಡೆ. ಮಹಿಳೆಯರ ಬಗ್ಗೆ ಹತ್ತಾರು ರೀತಿ ಕನಿಕರದ ಮಾತುಗಳ ಮಳೆಗೆರೆಯುವ ಮುಖ್ಯಮಂತ್ರಿ ನನ್ನ ವಿರುದ್ಧ ತದ್ವಿರುದ್ಧವಾಗಿ ವರ್ತಿಸುತ್ತಿರುವುದಕ್ಕೆ ಜನರು ಪ್ರತ್ಯುತ್ತರ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ಜನಸಾಗರದ ನಡುವೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರೆ ಎಳೆದ ಸುಮಲತಾ, ಅಂಬರೀಷ್ ಸಮಾಧಿ ಮೇಲೆ ತಮ್ಮ ಮಗನ ರಾಜಕಾರಣಕ್ಕೆ ನಾಂದಿ ಹಾಡಲು ಹೊರಟಿದ್ದಾರೆಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಸಹಸ್ರಾರು ಬೆಂಬಲಿಗರ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂಬರೀಷ್ ಅವರ ಅಂತ್ಯಸಂಸ್ಕಾರ ಮಾಡಿದ್ದೇನೆಂದು ಪದೇ ಪದೇ ಹೇಳುವ ಮೂಲಕ ಅಂಬರೀಷ್ ಅವರ ಸಮಾಧಿ ಮೇಲೆ ಮಗನ ರಾಜಕಾರಣಕ್ಕೆ ನಾಂದಿ ಹಾಡಲು ಹೊರಟಿದ್ದೀರ ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ ಅವರು, ಇದೆಂಥ ರಾಜಕಾರಣ ಎಂಬುದಾಗಿ ಜನ ಕೇಳಬೇಕು ಎಂದು ಕರೆ ಇತ್ತರು.

ಬರೀ ನಿಮ್ಮ ಕುಟುಂಬ, ಮಕ್ಕಳು ಅಭಿವೃದ್ಧಿಯಾಗಬೇಕು. ನಿಮ್ಮ ಪ್ರತಿಸ್ಪರ್ಧಿಗಳ ಆತ್ಮಸ್ಥೈರ್ಯ ಕುಗ್ಗಿಸಬೇಕು. ಇವೇ ನೀವು ಪ್ರಚಾರದುದ್ದಕ್ಕೂ ಮಾಡಿದ್ದು. ಪ್ರಚಾರ ವೇಳೆ ಒಂದು ದಿನವಾದರೂ ಅಭಿವೃದ್ಧಿ ವಿಚಾರ ಮಾತನಾಡಿದ್ದೀರಾ ಎಂದು ಅವರು ತರಾಟೆಗೆ ತೆಗೆದುಕೊಂಡರು. ಇವರಿಗೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಮಹಿಳೆಯರ, ಸೈನಿಕರ ಬಗ್ಗೆ ಗೌರವ ಇಲ್ಲ. ಪ್ರಜಾಪ್ರಭುತ್ವದಲ್ಲಿ ಮಹಿಳೆ ಚುನಾವಣೆಗೆ ನಿಲ್ಲಬಾರದೆ? ನಾನು ಚುನಾವಣೆಗೆ ನಿಂತಿದ್ದೇ ತಪ್ಪೆ? ಅವರೊಬ್ಬರೇ ಸ್ಪರ್ಧೆ ಮಾಡಬೇಕೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಂಬರೀಷ್ ತಮ್ಮ ಉತ್ತಮ ಸ್ನೇಹಿತನೆಂದು ಹೇಳಿಕೊಳ್ಳುತ್ತೀರಿ. ಈಗ ಆ ಸ್ನೇಹಿತನ ವಿರುದ್ಧವೇ ಸಲ್ಲದ ಮಾತನಾಡುತ್ತೀರಿ. ಚುನಾವಣೆಗೆ ಸ್ಪರ್ಧಿಸಿರುವ ಸ್ನೇಹಿತನ ಹೆಂಡತಿಯನ್ನು ಹೀಯಾಳಿಸುತ್ತೀರಿ. ಸ್ನೇಹಕ್ಕೆ ನೀವು ಬೆಲೆ ಕೋಡೋದು ಇದೇನಾ ಎಂದು ಅವರು ಪ್ರಶ್ನಿಸಿದರು. ಯಶ್, ದರ್ಶನ್ ಮನೆ ಮಕ್ಕಳಾಗಿ ನನ್ನ ಪ್ರಚಾರಕ್ಕೆ ಬಂದಿದ್ದಾರೆ. ಅವರ ವಿರುದ್ಧ ವೈಯಕ್ತಿಕ ವಿಷಯಗಳನ್ನಿಟ್ಟು ದಾಳಿ ನಡೆಸುತ್ತಾರೆ. ನಾವೂ ಕೂಡ ಅವರ ನೂರಾರು ವೈಯಕ್ತಿ ವಿಚಾರಗಳನ್ನಿಟ್ಟು ಟಾರ್ಗೆಟ್ ಮಾಡಬಹದು. ಆದರೆ, ಅದು ಸಂಸ್ಕೃತಿಯಲ್ಲ ಎಂದು ಸುಮಲತಾ ಹೇಳಿದರು.

ರಾಜಕಾರಣ ಬೇಡವೆಂದು ಅಂಬರೀಷ್ ಹೇಳುತ್ತಿದ್ದರು. ಆದರೆ, ಜಿಲ್ಲೆಯ ಅಭಿಮಾನಿಗಳ ಒತ್ತಾಯಕ್ಕೆ ಸಾಕಷ್ಟು ಚಿಂತನೆ ನಡೆಸಿ ಸ್ಪರ್ಧೆ ಮಾಡಿದ್ದೇನೆ. ಅಂಬರೀಷ್ ಅವರ ಆಶಯಗಳನ್ನು ಸಾಕಾರಗೊಳಿಸುವ ಇರಾದೆ ಇದೆ. ಇದು ಅನ್ಯಾಯದ ವಿರುದ್ಧ ಸ್ವಾಭಿಮಾನದ ಹೋರಾಟ. ನಿಮ್ಮಲ್ಲಿ ಸ್ವಾಭಿಮಾನದ ಭಿಕ್ಷೆ ಬೇಡುತ್ತಿದ್ದೇನೆ ಎಂದು ಅವರು ಮನವಿ ಮಾಡಿದರು.

ತನಗೆ ಬೆಂಬಲ ನೀಡಿರುವ ಕಾಂಗ್ರೆಸ್, ರೈತಸಂಘ, ಹಲವು ಪ್ರಗತಿಪರ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದ ಸುಮಲತಾ, ತಾನು ಪಕ್ಷೇತರ ಅಭ್ಯರ್ಥಿ. ಬಿಜೆಪಿ ಬೆಂಬಲ ನೀಡಿದೆ ಅಷ್ಟೆ. ಬಿಜೆಪಿ ಅಭ್ಯರ್ಥಿ ಎಂದು ವಿರೋಧಿಗಳು ಬಿಂಬಿಸುತ್ತಿರುವುದಕ್ಕೆ ಅಲ್ಪಸಂಖ್ಯಾತರು ಕಿವಿಗೊಡಬಾರದು ಎಂದು ಸ್ಪಷ್ಟಪಡಿಸಿದರು.

ನಾಲ್ಕು ವಾರ ಪ್ರಚಾರ ಕಾಲಕ್ಕೆ ಹಲವು ಸಮಸ್ಯೆಗಳ ಅರಿವಾಯಿತು. ಮಂಡ್ಯದ ಜನತೆಯಲ್ಲಿ ದೇವರನ್ನು ಕಂಡೆ. ಒಬ್ಬಂಟಿಯಾಗಿ ಇಳಿದ ನನಗೆ ಕಾಂಗ್ರೆಸ್ಸಿಗರು ಜತೆಯಾದರು, ಆದರೆ ಅವರು ಅಮಾನತು ಶಿಕ್ಷೆಗೊಳಗಾದರು. ಆದರೆ, ನಾನು ಎಂದೆಂದಿಗೂ ಅವರ ಕೈಬಿಡುವುದಿಲ್ಲ ಎಂದು ಭರವಸೆ ನೀಡಿದರು. ರೈತರು, ಮಹಿಳೆಯರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ನೀಡಿದ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಹಲವು ಕಡೆ ಸರಿಯಾದ ರಸ್ತೆಗಳಿಲ್ಲ. ಕೆರೆಗಳಿಗೆ ನೀರು ತುಂಬಿಸಿಲ್ಲ. ಈ ಸಮಸ್ಯೆಗಳ ಅರಿವು ತನಗೆ ಬಂದಿದೆ ಎಂದು ಅವರು ಹೇಳಿದರು.

ನಟರಾದ ಯಶ್, ದರ್ಶನ್, ದೊಡ್ಡಣ್ಣ, ರೈತಸಂಘದ ನಾಯಕಿ ಸುನೀತಾ ಪ್ಮಟ್ಟಣ್ಣಯ್ಯ, ದರ್ಶನ್ ಪ್ಮಟ್ಟಣ್ಣಯ್ಯ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಡಾ.ರವೀಂದ್ರ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಇತರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News