ಚು.ಆಯೋಗಕ್ಕೆ ಅಪಕೀರ್ತಿ ತರುವ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ರಾಷ್ಟ್ರಪತಿಗೆ ಮಾಜಿ ಅಧಿಕಾರಿಗಳ ಪತ್ರ

Update: 2019-04-16 17:43 GMT

ಹೊಸದಿಲ್ಲಿ,ಎ.16: ಚುನಾವಣಾ ಆಯೋಗದ ತಟಸ್ಥತೆಯ ಬಗ್ಗೆ ಶಂಕೆಗಳನ್ನು ವ್ಯಕ್ತಪಡಿಸುವ ಮೂಲಕ ಅದಕ್ಕೆ ಅಪಕೀರ್ತಿಯನ್ನು ತರಲು ಕೆಲವು ಗುಂಪುಗಳು ಮಾಡುತ್ತಿವೆಯೆನ್ನಲಾಗಿರುವ ಪ್ರಯತ್ನಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ಸುಮಾರು 80ರಷ್ಟು ಮಾಜಿ ಸರಕಾರಿ ಅಧಿಕಾರಿಗಳು,ರಕ್ಷಣಾ ಸಿಬ್ಬಂದಿ,ನ್ಯಾಯಾಧೀಶರು ಮತ್ತು ಶಿಕ್ಷಣ ತಜ್ಞರನ್ನೊಳಗೊಂಡ ಗುಂಪೊಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರವನ್ನು ಬರೆದಿದೆ.

ಚುನಾವಣಾ ಆಯೋಗದ ವಿರುದ್ಧ ನಿಂದನೆಗಳನ್ನು ಮಾಡಲಾಗುತ್ತಿದೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಅದರ ಸಾಮರ್ಥ್ಯವನ್ನು ಶಂಕಿಸಲಾಗುತ್ತಿದೆ ಎಂದು ಹೇಳಿರುವ ಈ ಪತ್ರಕ್ಕೆ ಸಹಿ ಮಾಡಿರುವವರಲ್ಲಿ ಮಾಜಿ ದಿಲ್ಲಿ ಪೊಲೀಸ್ ಆಯುಕ್ತ ಆರ್.ಎಸ್.ಗುಪ್ತಾ,ಏರ್ ಮಾರ್ಷಲ್(ನಿವೃತ್ತ) ಆರ್.ಸಿ.ಬಾಜಪೈ,ಮಾಜಿ ರಾಜತಾಂತ್ರಿಕ ಅಶೋಕ ಕುಮಾರ್,ಲೆ.ಜ.ಎ.ಕೆ.ಸೈನಿ ಮುಂತಾದವರು ಸೇರಿದ್ದಾರೆ.

ಈ ಪತ್ರವು ನೀತಿ ಸಂಹಿತೆ ಉಲ್ಲಂಘನೆಗಳು,ನಿರ್ದಿಷ್ಟವಾಗಿ ಆಡಳಿತ ಪಕ್ಷವು ಭಾಗಿಯಾಗಿರುವ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವಲ್ಲಿ ವೈಫಲ್ಯಕ್ಕಾಗಿ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ಕಾರ್ಯ ನಿರ್ವಹಣೆಯ ಕುರಿತು ಕಳವಳಗಳನ್ನು ವ್ಯಕ್ತಪಡಿಸಿ ಮಾಜಿ ಸರಕಾರಿ ಅಧಿಕಾರಿಗಳ ಗುಂಪೊಂದು ಈ ಹಿಂದೆ ರಾಷ್ಟ್ರಪತಿಗಳಿಗೆ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆಯಾಗಿದೆ.

ಕಾಲದ ಪರೀಕ್ಷೆಯಲ್ಲಿ ಗೆದ್ದಿರುವ ಮತ್ತು ಭಾರತದಲ್ಲಿ ಮಾತ್ರವಲ್ಲ,ವಿಶ್ವಾದ್ಯಂತ ತನ್ನ ವಿಶ್ವಾಸಾರ್ಹತೆಗಾಗಿ ಹೆಸರಾಗಿರುವ ಚುನಾವಣಾ ಆಯೋಗಕ್ಕೆ ಅಪಕೀರ್ತಿ ತರಲು ಕೆಲವು ಗುಂಪುಗಳು ನಡೆಸಿರುವ ಪ್ರಯತ್ನಗಳ ಬಗ್ಗೆ ನಾವು ಕಳವಳಗೊಂಡಿದ್ದೇವೆ. ಇದು ಇಂತಹ ಪ್ರಜಾಸತ್ತಾತ್ಮಕ ಸಂಸ್ಥೆಗಳ ಸ್ಥಾನವನ್ನು ಕಡೆಗಣಿಸಿ ಅವುಗಳಿಗೆ ಅಪಕೀರ್ತಿ ತರಲು ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಈ ಗುಂಪುಗಳ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂಬ ಶಂಕೆಯನ್ನು ಮೂಡಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಯೊಪಿಕ್ ಕುರಿತು ಗುಂಪು ವ್ಯಕ್ತಪಡಿಸಿದ್ದ ಆಕ್ಷೇಪಗಳನ್ನು ಪ್ರಸ್ತಾಪಿಸಿರುವ ಪತ್ರವು,ಚುನಾವಣಾ ಆಯೋಗದ ಸ್ವಾತಂತ್ರ್ಯದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಇದೇ ಜನರು ಸ್ವತಂತ್ರ ನಿರ್ಮಾಪಕರ ನಿರ್ಮಾಣದ  ಬಯೊಪಿಕ್ ಅನ್ನು ನಿಷೇಧಿಸಿರುವ ಚುನಾವಣಾ ಆಯೋಗದ ನಿರ್ಧಾರದ ಮೇಲೆ ಪ್ರಭಾವ ಬೀರಲು ಯಶಸ್ವಿಯಾಗಿರುವಂತೆ  ಕಂಡುಬರುತ್ತಿದೆ ಎಂದೂ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News