ಯಡಿಯೂರಪ್ಪ ತಿಪ್ಪರಲಾಗ ಹಾಕಿದರೂ ಮೈತ್ರಿ ಸರ್ಕಾರ ಬೀಳಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-04-16 18:45 GMT

ಮೈಸೂರು,ಎ.16: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಹಿನ್ನಡೆಯಾದರೆ ಸರ್ಕಾರ ಪತನವಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಇದರಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಈಗಾಗಲೇ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹಣ ಕೊಟ್ಟು ಶಾಸಕರನ್ನು ಖರೀದಿ ಮಾಡುತಿದ್ದೇನೆ ಎನ್ನುತ್ತಿದ್ದಾರಲ್ಲ ಅದಕ್ಕೆ ಮತ್ತಷ್ಟು ಶಕ್ತಿ ಬಂದಂತಾಗುತ್ತದೆ. ಹಾಗಾಗಿ ಆ ರೀತಿ ಹೇಳಿದ್ದೆ. ಯಡಿಯೂರಪ್ಪ ತಿಪ್ಪರಲಾಗ ಹಾಕಿದರೂ ಮೈತ್ರಿ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನರೇಂದ್ರ ಮೋದಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಪುಲ್ವಾಮ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ಪ್ರದೇಶದಲ್ಲಿ ಸೈನಿಕರನ್ನು ಕರೆದುಕೊಂಡು ಬರಬೇಕಾದರೆ ಬಾಂಬ್ ದಾಳಿಯಾಗುತ್ತದೆ ಎಂದರೆ, ಕೇಂದ್ರ ಗುಪ್ತಚರದಳ, ಆರ್.ಎ ಮತ್ತು ಐ.ಬಿಗಳ ವೈಫಲ್ಯ ಎದ್ದು ಕಾಣುತ್ತದೆ. ಎಲ್ಲಾ ಗುಪ್ತಚರಗಳು ಮೋದಿಯವರ ಬಳಿಯೇ ಇವೆ. ಆದರೂ ಬಾಂಬ್ ದಾಳಿ ಹೇಗಾಯಿತು ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟಿಯೇ ಇರಲಿಲ್ಲ, ಯುವಕರು ಬಿಜೆಪಿಗೆ ಮತ ನೀಡುವ ಮೂಲಕ ಸೈನ್ಯವನ್ನು ಬಲಪಡಿಸಬೇಕು ಎಂಬ ಹೇಳಿಕೆ ಭಟ್ಟಂಗಿತನದಿಂದ ಕೂಡಿದೆ. ಸೈನ್ಯ ಏನು ಮೋದಿ ಪ್ರಧಾನಿ ಆದ ಮೇಲೆ ಬಂದಿಲ್ಲ, ಇದು ದೇಶದ ಸೈನ್ಯ, ಸೈನ್ಯದ ಬಗ್ಗೆ ಮಾತನಾಡುವಾಗ ಬಹಳ ಗೌರವದಿಂದ ಮಾತನಾಡಬೇಕು, ಅದ್ಯಾರೋ ಯೋಗಿ ಅಧಿತ್ಯನಾಥ ಎಂಬ ತಲೆಕಟ್ಟ ವ್ಯಕ್ತಿ ಮೋದಿ ಸೈನ್ಯ ಎಂದು ಹೇಳುತ್ತಾನೆ. ಇದು ದೇಶದ ಸೈನ್ಯ ಇಂತಹ ಹೇಳಿಕೆ ನೀಡುವವರು ಸಂವಿಧಾನಕ್ಕೆ ಗೌರವ ಕೊಡುತ್ತಾರೆಯೇ ಎಂಬುದನ್ನು ಜನ ತೀರ್ಮಾನಿಸಬೇಕು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಐದು ವರ್ಷಗಳ ಆಡಳಿತದಲ್ಲಿ ಏನು ಸಾಧನೆ ಮಾಡಿದ್ದೇನೆ ಎಂದು ಜನರ ಮುಂದೆ ಹೇಳಲಿ, ನಾನು ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಾನು ಏನು ಮಾಡಿದ್ದೇನೆ ಎಂದು ಹೇಳಲು ಸಿದ್ದ, ಇವರು ಸಿದ್ದವಾಗಿದ್ದಾರ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News