ಮಹಾ ಘಟಬಂಧನ್‍ನಲ್ಲಿ ದಿನಕ್ಕೆ ಒಬ್ಬರಂತೆ ಪ್ರಧಾನಿ ಅಭ್ಯರ್ಥಿ: ದಾವಣಗೆರೆಯಲ್ಲಿ ಅಮಿತ್ ಶಾ

Update: 2019-04-16 18:54 GMT

ದಾವಣಗೆರೆ,ಎ.16: ಮಹಾ ಘಟಬಂಧನ್‍ನ ಮಿತ್ರ ಪಕ್ಷಗಳಲ್ಲಿ ದಿನಕ್ಕೆ ಒಬ್ಬರಂತೆ ಪ್ರಧಾನಿ ಅಭ್ಯರ್ಥಿಗಳಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. 

ಹೊನ್ನಾಳಿ ಪಟ್ಟಣದ ಖಾಸಗಿ ಬಸ್  ನಿಲ್ದಾಣದ ಎದುರಿನ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ಜಿ.ಎಂ.ಸಿದ್ದೇಶ್ವರ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು. 

ಮಹಾಘಟಬಂಧನ್‍ನಲ್ಲಿ ಸೋಮವಾರ ಮಾಯಾವತಿ, ಮಂಗಳವಾರ ಅಖಿಲೇಶ್ ಯಾದವ್, ಬುಧವಾರ ದೇವೇಗೌಡ, ಗುರುವಾರ ಚಂದ್ರಬಾಬು ನಾಯ್ಡು, ಶುಕ್ರವಾರ ಶರದ್ ಪವಾರ್, ಶನಿವಾರ ಮಮತಾ ದೀದಿ ಪ್ರಧಾನಿ ಅಭ್ಯರ್ಥಿಯಾದರೆ, ಭಾನುವಾರ ದೇಶದಲ್ಲಿ ಮಹಾಘಟ ಬಂಧನ್ ನಾಯಕರು ರಜೆಗೆ ತೆರಳುತ್ತಾರೆ. ಪ್ರಧಾನಿ ಅಭ್ಯರ್ಥಿ ಯಾರೆಂಬುದೇ ಗೊತ್ತಿಲ್ಲದವರು, ಮಹಾ ಘಟಬಂಧನ್ ನಾಯಕತ್ವ ಯಾರದ್ದೆಂಬುದು ಗೊತ್ತಿಲ್ಲದವರು ದೇಶ ಮುನ್ನಡೆಸಬಲ್ಲರೇ? ಎಂದು ಅವರು ಪ್ರಶ್ನಿಸಿದರು.  

ನಾವು ಮಾತ್ರ ಮೋದಿ ನಮ್ಮ ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಪುನಃ ಘೋಷಿಸಿ, ದೇಶ ಸದೃಢಗೊಳಿಸಲು ಸಂಕಲ್ಪ ಮಾಡಿದ್ದೇವೆ. ದೇಶದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹೀಗೆ ದೇಶದ ಯಾವುದೇ ಭಾಗಕ್ಕೆ ಹೋದರೂ ನರೇಂದ್ರ ಮೋದಿ ಪರ ಒಲವು ವ್ಯಕ್ತವಾಗುತ್ತಿದೆ. ಕಳೆದ 4 ತಿಂಗಳಿನಿಂದಲೂ 244ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಕ್ಕೆ ಸಭೆ, ಸಮಾರಂಭ, ಪ್ರಚಾರಕ್ಕೆ ಹೋದಲ್ಲೆಲ್ಲಾ ಕೇಳಿ ಬರುತ್ತಿರುವುದು ಒಂದೇ ಒಂದು ಧ್ವನಿ. ಅದು ಮೋದಿ ಎಂದರು.

ಕೇವಲ 37 ಕ್ಷೇತ್ರ ಗೆದ್ದಿರುವ ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಮಾಡಿದ್ದು ರಾಹುಲ್‍ ಗಾಂಧಿ. ಈ ಮೂಲಕ ಕಾಂಗ್ರೆಸ್ ಪಕ್ಷವು ಮಿತ್ರ ಪಕ್ಷ ಜೆಡಿಎಸ್‍ನ್ನು ರಿಮೋಟ್ ಕಂಟ್ರೋಲ್‍ನಂತೆ ನಿಯಂತ್ರಿಸಿ, ಹಿಂಬಾಗಿಲ ಮೂಲಕ ಭ್ರಷ್ಟಾಚಾರ  ಮಾಡುತ್ತಿದೆ. ಇಲ್ಲಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರುಗಳು ಪರಸ್ಪರ ಕಿತ್ತಾಡುತ್ತಿದ್ದಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದಂತಹ ಸ್ಥಿತಿ ಇದೆ. ಮೈತ್ರಿ ಪಕ್ಷಗಳ ನಾಯಕರ ಪರಸ್ಪರ ಕಿತ್ತಾಟದಿಂದಾಗಿ ರಾಜ್ಯದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ ಎಂದರು.

ರಾಹುಲ್ ಬಾಬಾ ಮತ್ತು ಉಮರ್ ಅಬ್ದುಲ್ಲಾ ಏನೇ ಹೇಳಲಿ. ದೇಶದಲ್ಲಿ ಬಿಜೆಪಿಯ ಕಾರ್ಯಕರ್ತರು ಇರುವವರೆಗೂ ಭಾರತದಿಂದ ಕಾಶ್ಮೀರ ಇಬ್ಬಾಗವಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಶ್ಮೀರವು ಭಾರತದ ದೇಶದ ಅವಿಭಾಜ್ಯ ಅಂಗ ಎಂದರು.

ದೇಶ ಸದೃಢಗೊಳಿಸಲು ಮತ್ತೆ ಬಿಜೆಪಿ ನೇತೃತ್ವದ ಎನ್‍ಡಿಎ ದೇಶದಲ್ಲಿ ಅಧಿಕಾರಕ್ಕೆ ಬರಬೇಕು. ಪುಲ್ವಾಮಾದಲ್ಲಿ ನಮ್ಮ ವೀರ ಯೋಧರ ಮೇಲೆ ಉಗ್ರರು ದಾಳಿ ನಡೆಸಿ, 40 ಯೋಧರನ್ನು ಹತ್ಯೆ ಮಾಡಿದ್ದನ್ನು ಭಾರತೀಯರಷ್ಟೇ ಅಲ್ಲ, ಇಡೀ ವಿಶ್ವವೇ ಖಂಡಿಸಿದೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರವು ಪಾಕಿಸ್ತಾನದಲ್ಲಿದ್ದ ಉಗ್ರರ ಅಡಗುತಾಣ ಏರ್ ಸ್ಟ್ರೈಕ್ ಮೂಲಕ ಧ್ವಂಸ ಮಾಡಿತು. ಆದರೆ, ಕಾಂಗ್ರೆಸ್ಸಿನ ಶಾಮ್ ಪಿತ್ರೋಡಾ ಪಾಕಿಸ್ತಾನದ ಮೇಲೆ ಬಾಂಬ್ ಹಾಕಬೇಡಿ ಅನ್ನುತ್ತಾರೆ. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿ ಎಂಬ ಸಲಹೆ ನೀಡುತ್ತಾರೆ. ಇಂತಹ ಪಕ್ಷದವರಿಂದ ದೇಶದ ರಕ್ಷಣೆ ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು. 

ಲೋಕಸಭೆ ಚುನಾವಣೆಯಲ್ಲಿ ದೇಶ, ರಾಜ್ಯದದ ಪ್ರತಿಯೊಬ್ಬ ಮತದಾರರೂ ಕಮಲ ಚಿಹ್ನೆಯ ಬಟನ್ ಒತ್ತುವ ಮೂಲಕ ಮೋದಿಗೆ ಅಧಿಕಾರಕ್ಕೆ ತರಬೇಕು. ದಾವಣಗೆರೆ ಕ್ಷೇತ್ರದಿಂದ ಜಿ.ಎಂ.ಸಿದ್ದೇಶ್ವರ ಅವರನ್ನು ಸಂಸದರನ್ನಾಗಿ ಪುನರಾಯ್ಕೆ ಮಾಡಿ ಕಳುಹಿಸಿ ಎಂದರು.

ಈ ಸಂದರ್ಭ ಬಿಜೆಪಿ ಅಭ್ಯರ್ಥಿ, ಸಂಸದ ಜಿ.ಎಂ.ಸಿದ್ದೇಶ್ವರ, ಲೋಕಸಭಾ ಕ್ಷೇತ್ರದ ಉಸ್ತುವಾರಿ, ವಿಪ ಸದಸ್ಯ ಆಯನೂರು ಮಂಜುನಾಥ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರುಪಾಕ್ಷಪ್ಪ, ಪ್ರೊ.ಎನ್. ಲಿಂಗಣ್ಣ, ಮಾಜಿ ಶಾಸಕರಾದ ಬಿ.ಪಿ. ಹರೀಶ, ಎಂ. ಬಸವರಾಜ ನಾಯ್ಕ, ಗಾಯತ್ರಿ ಸಿದ್ದೇಶ್ವರ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News