ಮನುಸ್ಮೃತಿ ತರುವ ಬಿಜೆಪಿ ನಮಗೆ ಬೇಕೇ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

Update: 2019-04-16 18:57 GMT

ಕೊರಟಗೆರೆ,ಎ.16:  ಬಿಜೆಪಿಯದ್ದು ಒಡೆದು ಆಳುವ ಸಿದ್ಧಾಂತ. ಸಂವಿಧಾನವನ್ನೇ ಬದಲಿಸುವ, ಸುಟ್ಟುಹಾಕುವ ಮಾತನಾಡಿದ ಇವರನ್ನು ಮತ್ತೆ ತರಬೇಕಾ? ಮನುಸ್ಮೃತಿ ಮತ್ತೊಮ್ಮೆ ತರುವ ಸಿದ್ಧಾಂತ ಈ ಬಿಜೆಪಿಯದ್ದು. ಅದಕ್ಕೆ ನಾವಿಬ್ಬರೂ ಒಂದಾಗಿ ಪಣತೊಟ್ಟಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು

ಕೊರಟಗೆರೆಯಲ್ಲಿ ಇಂದು ಆಯೋಜಿಸಿದ್ದ ಮೈತ್ರಿ ಪರ್ವ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆ ವೇಳೆ  ಕಾಂಗ್ರೆಸ್‌ನವರೇ ಸಿಎಂ ಆಗಲಿ ಎಂದು ಬಿಟ್ಟುಕೊಟ್ಟ ದೇವೇಗೌಡರ ಗುಣ ದೊಡ್ಡದು. ಆದರೆ ನಾವೆಲ್ಲ ಒಮ್ಮತದಿಂದ ಒಪ್ಪಿ ಅನುಭವಿ ಯುವಕ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು‌ ಎಂದು ಹೇಳಿ ನಾವೆಲ್ಲ ಸೇರಿ ಮಾಡಿದ ಸಿಎಂ ಅವರು. ಅವರ ನೇತೃತ್ವದಲ್ಲಿ ಉತ್ತಮ ಯೋಜನೆಯನ್ನು ನೀಡಿದ್ದೇವೆ. ನಾನು ಹಾಗೂ ಸುಧಾಕರ್ ಲಾಲ್ ಇಬ್ಬರು ತುಮಕೂರಿನಲ್ಲಿ ವಿರುದ್ಧವಾಗಿ ಚುನಾವಣೆ ಎದುರಿಸಿದ್ದೆವು. ಈಗ ಒಂದಾಗಿ ಒಂದೇ ವೇದಿಕೆಯಲ್ಲಿದ್ದೇವೆ. ಯಾಕೆಂದರೆ ನಮ್ಮ ಧ್ಯೇಯ ಏನಿದ್ದರೂ ದೇವೇಗೌಡರನ್ನು ಗೆಲ್ಲಿಸುವುದು.

ಈ ದೇಶದಲ್ಲಿ ಪ್ರಸ್ತುತ ಬರಗಾಲ ಭೀಕರವಾಗಿದೆ. ರೈತ ಬೆಳೆಗಾಗಿ ಸಾಲಮಾಡಿದ್ದಾನೆ. ಅವರ ಸಾಲಮನ್ನಾ ಮಾಡಲು ನಮ್ಮ ಸರಕಾರ ಮುಂದಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ ಗಳ ಸಾಲಮನ್ನಾ ಮಾಡಿ ಎಂದು ಮನವಿ ಮಾಡಿದೆವು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ ಎಂದು ಹೇಳಿದರು.

ತಮ್ಮ ಹೆಸರಲ್ಲಿ ಮತ ಹಾಕಿ ಎಂದು ಕೇಳಲು ನೈತಿಕತೆ ಇಲ್ಲದೇ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಜೊತೆಗೆ ಅವರ ಸಮಯದಲ್ಲಿ ಯಾವ ಗಲಭೆ, ಜಗಳವೂ‌ ಆಗಿರಲಿಲ್ಲ. ಅಂಥವರು ನಮಗೆ ಬೇಕು. ಅವರ ಗೆಲುವಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಶ್ರಮಿಸಬೇಕು ಎಂದು‌ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News