ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ಪರಾಭವ

Update: 2019-04-16 19:08 GMT

ಮೊಹಾಲಿ, ಎ.16: ಇಲ್ಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 34ನೇ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ 12 ರನ್‌ಗಳಿಂದ ಪರಾಭವಗೊಂಡಿದೆ.

ಪಂಜಾಬ್ ನೀಡಿದ 183 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಲಷ್ಟೇ ಶಕ್ತವಾಯಿತು.

   ರಾಜಸ್ಥಾನಕ್ಕೆ ರಾಹುಲ್ ತ್ರಿಪಾಠಿ (50, 45 ಎಸೆತ, 4 ಬೌಂಡರಿ) ಹಾಗೂ ಜೋಸ್ ಬಟ್ಲರ್ (23, 17 ಎಸೆತ, 1 ಬೌಂಡರಿ, 2 ಸಿಕ್ಸರ್) ಉತ್ತಮ ಆರಂಭ ಒದಗಿಸಿದರು. ಬಟ್ಲರ್ ಅವರು ಅರ್ಷದೀಪ್ ಸಿಂಗ್ ಎಸೆತದಲ್ಲಿ ಪೂರನ್‌ಗೆ ಕ್ಯಾಚ್ ನೀಡಿದರು. ಆ ಬಳಿಕ ಸಂಜು ಸ್ಯಾಮ್ಸನ್ (27, 21 ಎಸೆತ, 2 ಬೌಂಡರಿ) ಸಮಯೋಚಿತ ಆಟವಾಡಿ ಅಶ್ವಿನ್ ಎಸೆತದಲ್ಲಿ ಬೌಲ್ಡ್ ಆದರು. ತ್ರಿಪಾಠಿ ಅರ್ಧಶತಕ ಗಳಿಸಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು ಹಾಗೂ ಅಶ್ಟನ್ ಟರ್ನರ್ ಶೂನ್ಯ ಸುತ್ತಿದರು. ಅಜಿಂಕ್ಯಾ ರಹಾನೆ (26, 21 ಎಸೆತ, 1 ಬೌಂಡರಿ)ಉತ್ತಮ ಆಟವಾಡಿದರು. ಸ್ಟುವರ್ಟ್ ಬಿನ್ನಿ (33, 11 ಎಸೆತ, 2 ಬೌಂಡರಿ, 3 ಸಿಕ್ಸರ್) ಕೊನೆಯಲ್ಲಿ ಅಬ್ಬರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ನಾಯಕ ಆರ್. ಅಶ್ವಿನ್, ಮುಹಮ್ಮದ್ ಶಮಿ ಹಾಗೂ ಅರ್ಷದೀಪ್ ಪಂಜಾಬ್ ಪರ ತಲಾ ಎರಡು ವಿಕೆಟ್ ಪಡೆದರು.

 ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 ರನ್ ಗಳಿಸಿತು. ಕೆ.ಎಲ್.ರಾಹುಲ್ (52, 47 ಎಸೆತ, 3 ಬೌಂಡರಿ, 2 ಸಿಕ್ಸರ್ ) ಹಾಗೂ ಕ್ರಿಸ್ ಗೇಲ್ (30, 22 ಎಸೆತ, 2 ಬೌಂಡರಿ, 3 ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 38 ರನ್ ಸೇರಿಸಿದರು. ಗೇಲ್ ಅವರು ಜೋಫ್ರಾ ಅರ್ಚರ್ ಎಸೆತದಲ್ಲಿ ವಿಕೆಟ್ ಕೀಪರ್ ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ಆ ಬಳಿಕ ರಾಹುಲ್‌ಗೆ ಮಾಯಾಂಕ್ ಅಗರ್ವಾಲ್ (26, 12 ಎಸೆತ, 1 ಬೌಂಡರಿ, 2 ಸಿಕ್ಸರ್ ) ಜೊತೆಗೂಡಿದರು. ಅಗರ್ವಾಲ್‌ರನ್ನು ಇಶ್ ಸೋಧಿ ಬಲೆಗೆ ಕೆಡವಿದರು. ಡೇವಿಡ್ ಮಿಲ್ಲರ್ (40, 27 ಎಸೆತ, 2 ಬೌಂಡರಿ, 2 ಸಿಕ್ಸರ್ ) ಅವರು ರಾಹುಲ್‌ಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ ಮೂರನೇ ವಿಕೆಟ್ ಜೊತೆಯಾಟದಲ್ಲಿ ಬರೋಬ್ಬರಿ 85 ರನ್ ಸೇರಿಸಿತು. ರಾಹುಲ್ ಅವರು ಉನಾದ್ಕತ್ ಎಸೆತದಲ್ಲಿ ಅರ್ಚರ್‌ಗೆ ಕ್ಯಾಚ್ ನೀಡಿ ಔಟಾದರು. ಆರ್.ಅಶ್ವಿನ್ ಕೊನೆಯ ಓವರ್‌ನಲ್ಲಿ 4 ಎಸೆತಗಳಲ್ಲಿ 17 ರನ್ ಗಳಿಸಿದರು.

ರಾಜಸ್ಥಾನ ಪರ ಬೌಲಿಂಗ್‌ನಲ್ಲಿ ಅರ್ಚರ್ (15ಕ್ಕೆ 3) ಮಿಂಚಿದರು. ಉನಾದ್ಕತ್ (48ಕ್ಕೆ 1 )ಇಶ್ ಸೋಧಿ (41ಕ್ಕೆ 1) ವಿಕೆಟ್ ಪಡೆದರೂ ದುಬಾರಿ ಎನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News