ಸಮಾಜಸೇವಾ ಸಂಸ್ಥೆಗಾಗಿ ವಿಶ್ವಕಪ್ ಬೂಟ್ ಹರಾಜಿಗಿಟ್ಟ ಪೌಲ್ ಪೊಗ್ಬಾ

Update: 2019-04-16 19:08 GMT

ಪ್ಯಾರಿಸ್, ಎ.16: ಕಳೆದ ವರ್ಷ ರಶ್ಯದಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಫ್ರಾನ್ಸ್ ಫುಟ್ಬಾಲ್ ತಂಡದ ಆಟಗಾರ ಪೌಲ್ ಪೊಗ್ಬಾ ತಾನು ವಿಶ್ವಕಪ್‌ನಲ್ಲಿ ಧರಿಸಿದ್ದ ಬೂಟ್‌ಗಳನ್ನು ಈ ತಿಂಗಳಾಂತ್ಯದಲ್ಲಿ ಪ್ಯಾರಿಸ್‌ನಲ್ಲಿ ಹರಾಜಿಗಿಟ್ಟು ಅದರಿಂದ ಸಂಗ್ರಹವಾಗುವ ನಿಧಿಯನ್ನು ಸಮಾಜಸೇವಾ ಸಂಸ್ಥೆಗೆ ದಾನ ನೀಡಲು ನಿರ್ಧರಿಸಿದ್ದಾರೆ. ಪೊಗ್ಬಾ ಧರಿಸಿರುವ ಬೂಟ್‌ಗಳು ಅಂದಾಜು 50,000 ಯುರೋ(56,500 ಡಾಲರ್)ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಇಡಲಾಗಿದೆ.

ಮ್ಯಾಂಚೆಸ್ಟರ್ ಯುನೈಟೆಡ್‌ನ ಮಿಡ್ ಫೀಲ್ಡರ್ ಪೊಗ್ಬಾ ಕ್ರೊಯೇಶಿಯ ವಿರುದ್ಧ ನಡೆದ ವಿಶ್ವಕಪ್ ಫೈನಲ್‌ನಲ್ಲಿ ತನ್ನ ತಂಡದ ಪರ ಮೂರನೇ ಗೋಲು ದಾಖಲಿಸಿದ್ದರು. ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಕ್ರೊಯೇಶಿಯ ತಂಡವನ್ನು 4-2 ಅಂತರದಿಂದ ಸೋಲಿಸಿತ್ತು.

ಹೈಸ್ಕೂಲ್ ಶಾಲಾ ವಿದ್ಯಾರ್ಥಿಗಳಿಗೆ ನೆರವಾಗುವ ಫ್ರಾನ್ಸ್‌ನ ಚಾರಿಟಿ ಸಂಸ್ಥೆಗೆ ಬೂಟ್ ಹರಾಜಿನಿಂದ ಬರುವ ಹಣವನ್ನು ದಾನ ಮಾಡಲು ಪೊಗ್ಬಾ ತೀರ್ಮಾನಿಸಿದ್ದಾರೆ. ಪ್ಯಾರಿಸ್ ಉಪ ನಗರದಲ್ಲಿ ಬಾಲ್ಯದ ದಿನವನ್ನು ಕಳೆದಿರುವ ಪೊಗ್ಬಾ 2016ರ ಯುರೋ ಫೈನಲ್‌ನಲ್ಲಿ ಧರಿಸಿರುವ ಶರ್ಟ್‌ನ್ನು ಎ.29 ರಂದು ನಡೆಯುವ ಹರಾಜಿನಲ್ಲಿ ಇಡಲಿದ್ದಾರೆ. ‘‘ಸಂಕಷ್ಟದಲ್ಲಿರುವ ಯುವಕರಿಗೆ ಈ ಸಂಸ್ಥೆ ಸಹಾಯ ಮಾಡುತ್ತಿದೆ. ನಾನು ಬಡ ಕುಟುಂಬದಿಂದ ಬಂದಿರುವ ಕಾರಣ ಕಷ್ಟ ಏನೆಂದು ಅರ್ಥವಾಗುತ್ತದೆ’’ ಎಂದು ಸ್ಟಾರ್ ಆಟಗಾರ ಪೊಗ್ಬಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News