ಪೊಲೀಸರ ಮೇಲೆ ಹಲ್ಲೆ: ಆರೋಪಿಗಳಿಗೆ ಶಿಕ್ಷೆ

Update: 2019-04-17 18:37 GMT

ಪಾಂಡವಪುರ, ಎ.17: ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಿಗೆ ಇಲ್ಲಿನ ಜೆ-ಎಂಎಫ್‍ಸಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತಾಲೂಕಿನ ಡಿಂಕಾ ಗ್ರಾಮದ ನಿವಾಸಿಗಳಾದ ಚೆಲುವ, ಸುನೀಲ್, ಅಶೋಕ್, ಸುಧಾಕರ, ಚಲುವಯ್ಯ ಮತ್ತು ಶ್ರೀನಿವಾಸ್ ಶಿಕ್ಷೆಗೆ ಗುರಿಯಾದವರು.
ಜನವರಿ 2, 2017 ರಂದು ಗ್ರಾಮದಲ್ಲಿ ಆಯೋಜಿಸಿದ್ದ ನಾಟಕದ ಬಂದೋಬಸ್ತ್ ಗಾಗಿ ನೇಮಕಗೊಂಡಿದ್ದ ಕೆ.ಆರ್.ಸಾಗರ ಪೊಲೀಸ್ ಠಾಣೆಯ ಮಂಜುನಾಥ್ ಮತ್ತು ಮಂಜೇಗೌಡ ಎಂಬ ಪೇದೆಗಳೊಂದಿಗೆ ಆರೋಪಿಗಳು ತಡರಾತ್ರಿಯಲ್ಲಿ ಜಗಳ ತೆಗೆದು, ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಕೆ.ಆರ್.ಸಾಗರ ಠಾಣೆಯ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಕೆ.ರವಿಕಾಂತ್, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ 8 ವರ್ಷ 6 ತಿಂಗಳು ಜೈಲು ಶಿಕ್ಷೆ ಹಾಗೂ ಹಲ್ಲೆಗೊಳಗಾದ ಪೇದೆಗಳಿಗೆ 10 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಒಂದು ವೇಳೆ ಪರಿಹಾರ ನೀಡಲು ವಿಫಲವಾದರೆ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೊಜಕ ಎಸ್.ಶಿವಕುಮಾರ್ ವಾದ ಮಂಡಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News