ಆದಿವಾಸಿ ವ್ಯಕ್ತಿಯನ್ನು ಕೊಲ್ಲುವ ಮುನ್ನ 1 ಕಿ.ಮೀ. ಎಳೆದೊಯ್ದಿದ್ದ ದುಷ್ಕರ್ಮಿಗಳು

Update: 2019-04-18 15:30 GMT

► ದಾರಿಯುದ್ದಕ್ಕೂ ಜೈ ಶ್ರೀ ರಾಮ್, ಜೈ ಬಜರಂಗ ಬಲಿ ಘೋಷಣೆ

ರಾಂಚಿ, ಎ.18: ಎಪ್ರಿಲ್ 10ರಂದು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಆದಿವಾಸಿಗಳ ಮೇಲೆ ದಾಳಿ ನಡೆಸಿದ್ದ ಗುಂಪು ‘ಜೈ ಶ್ರೀ ರಾಮ್, ಜೈ ಬಜರಂಗ ಬಲಿ’ ಮುಂತಾದ ಘೋಷಣೆ ಕೂಗುತ್ತಿತ್ತು ಮತ್ತು ನಾಲ್ವರು ಆದಿವಾಸಿಗಳನ್ನು ಸುಮಾರು 1 ಕಿ.ಮೀ ದೂರ ಎಳೆದೊಯ್ದು ತೀವ್ರ ಹಲ್ಲೆ ನಡೆಸಿದ ಕಾರಣ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಜಾರ್ಖಂಡ್ ಜನಾಧಿಕಾರ ಮಹಾಸಭಾದ ಸತ್ಯಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ಗೋಹತ್ಯೆ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಈ ಹಲ್ಲೆ ಮತ್ತು ಹತ್ಯೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ. ಗುಮ್ಲಾ ಜಿಲ್ಲೆಯ ದುಮ್ರಿ ವಿಭಾಗದಲ್ಲಿ ಈ ಘಟನೆ ನಡೆದಿದೆ. ಸತ್ತ ಎತ್ತಿನ ಮಾಂಸ ಮತ್ತು ಚರ್ಮ ಕತ್ತರಿಸಿ ಕೊಡುವಂತೆ ಜುಮ್ರು ಗ್ರಾಮದ ಕೆಲವರು ಆದಿವಾಸಿಗಳನ್ನು ಕೇಳಿದ್ದಾರೆ. ಅದರಂತೆ ಆದಿವಾಸಿಗಳು ನದಿ ತೀರದಲ್ಲಿ ಸತ್ತ ಎತ್ತಿನ ಮಾಂಸ ಕಡಿಯುತ್ತಿದ್ದಾಗ ಸುಮಾರು 40 ಮಂದಿಯಿದ್ದ ಗುಂಪು ದಾಳಿ ಮಾಡಿದೆ ಎಂದು ಗ್ರಾಮಸ್ಥರು ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಂದೀಪ್ ಸಾಹು, ಸಂತೋಷ್ ಸಾಹು, ಸಂಜಯ್ ಸಾಹು ಹಾಗೂ ಆತನ ಮಕ್ಕಳು ಗುಂಪಿನ ನೇತೃತ್ವ ವಹಿಸಿದ್ದರು. ದಾಳಿಯ ಮುನ್ಸೂಚನೆ ದೊರೆತೊಡನೆ ಆದಿವಾಸಿಗಳು ಅಲ್ಲಿಂದ ಪರಾರಿಯಾಗಿದ್ದು ಪ್ರಕಾಶ್, ಪೀಟರ್, ಬೆಲಾರಿಯಸ್ ಮತ್ತು ಜನೇರಿಯಸ್ ಎಂಬವರು ಗುಂಪಿನವರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗೋ ಹತ್ಯೆ ಮಾಡುತ್ತಿದ್ದೀರಿ ಎಂದು ಅವರನ್ನು ಗದರಿದ ತಂಡ ದೊಣ್ಣೆಯಿಂದ ಹಲ್ಲೆ ನಡೆಸಿ ಸುಮಾರು 1 ಕಿ.ಮೀ ದೂರ ವಿರುವ ಜೈರಗಿ ಚೌಕ ಎಂಬಲ್ಲಿಗೆ ಎಳೆದೊಯ್ದಿದ್ದಾರೆ.

ದಾರಿಯುದ್ದಕ್ಕೂ ಆದಿವಾಸಿಗಳನ್ನು ಮನಬಂದಂತೆ ಥಳಿಸುತ್ತಿದ್ದ ಗುಂಪು, ‘ಜೈ ಶ್ರೀರಾಮ್, ಜೈ ಭಜರಂಗ ಬಲಿ’ ಎಂಬ ಘೋಷಣೆ ಕೂಗುವಂತೆ ಬಲವಂತ ಪಡಿಸುತ್ತಿತ್ತು. ಘೋಷಣೆ ಕೂಗಲು ನಿರಾಕರಿಸಿದರೆ ಅಥವಾ ಮೆಲು ಧ್ವನಿಯಲ್ಲಿ ಘೋಷಣೆ ಕೂಗಿದರೆ ಅವರನ್ನು ಥಳಿಸಲಾಗುತ್ತಿತ್ತು. ಜೈರಗಿ ಚೌಕ ತಲುಪಿದ ಬಳಿಕ ಅಲ್ಲಿ ಸುಮಾರು 3 ಗಂಟೆಯ ಕಾಲ ನಾಲ್ವರು ಆದಿವಾಸಿಗಳನ್ನು ಥಳಿಸಿದ್ದು, ಮಧ್ಯರಾತ್ರಿಯ ವೇಳೆ ಅವರನ್ನು ದುಮ್ರಿ ಪೊಲೀಸ್ ಠಾಣೆಯ ಎದುರು ತಂದು ಹಾಕಲಾಗಿದೆ.

ಆದರೆ ಸಂತ್ರಸ್ತರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಬದಲು ಪೊಲೀಸರು ಅವರನ್ನು ಚಳಿಯ ವಾತಾವರಣದಲ್ಲೇ ಮೂರು ಗಂಟೆ ಕುಳ್ಳಿರಿಸಿ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆಗಾಗಲೇ 50 ವರ್ಷದ ಪ್ರಕಾಶ್ ಮೃತಪಟ್ಟಿದ್ದ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡಿರುವ ರೀತಿಯೂ ಪ್ರಶ್ನಾರ್ಥಕವಾಗಿದೆ. ಸತ್ತ ಎತ್ತಿನ ಚರ್ಮ ಸುಲಿಯುತ್ತಿದ್ದೆವು ಎಂದು ಆದಿವಾಸಿಗಳು ತಿಳಿಸಿದ್ದರೂ ಪೊಲೀಸರು 20ರಿಂದ 25 ಅನಾಮಿಕ ವ್ಯಕ್ತಿಗಳ ವಿರುದ್ಧ ಗೋಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಸಂತ್ರಸ್ತರು 7 ಮಂದಿ ವಿರುದ್ಧ ದೂರು ನೀಡಿದ್ದರೂ ಎಪ್ರಿಲ್ 15ರವರೆಗೆ ಕೇವಲ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜಾರ್ಖಂಡ್‌ನಲ್ಲಿ ಆದಿವಾಸಿಗಳು ಪಾರಂಪರಿಕವಾಗಿ ಸತ್ತ ಜಾನುವಾರುಗಳನ್ನು ಮಾಂಸಕ್ಕಾಗಿ ಕೊಂಡೊಯ್ಯುತ್ತಿದ್ದಾರೆ. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಈ ಸಂಪ್ರದಾಯಕ್ಕೆ ತಿಲಾಂಜಲಿ ನೀಡುವಂತೆ ಬೆದರಿಕೆ ಬರುತ್ತಿದೆ.

ಕಳೆದ 5 ವರ್ಷಗಳಲ್ಲಿ 11 ಮಂದಿಯನ್ನು ಗೋಹತ್ಯೆ ಆರೋಪದಲ್ಲಿ ಹತ್ಯೆ ಮಾಡಲಾಗಿದೆ. ಆದಿವಾಸಿಗಳ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕು ಮತ್ತು ಹಿಂಸಾಚಾರದಲ್ಲಿ ಶಾಮೀಲಾಗಿರುವವರನ್ನು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಬೇಕು ಎಂದು ವರದಿಯಲ್ಲಿ ಆಗ್ರಹಿಸಲಾಗಿದೆ.

ಗುಂಪಿನಿಂದ ಹಲ್ಲೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ, ಪ್ರಕರಣದಲ್ಲಿ ಮೃತಪಟ್ಟ ಪ್ರಕಾಶ್ ಕುಟುಂಬದವರಿಗೆ 15 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ವರದಿಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News