ಉಡುಪಿ-ಚಿಕ್ಕಮಗಳೂರು ಕ್ಷೇತ್ರ: ಶೇ.75.26 ರಷ್ಟು ಮತದಾನ

Update: 2019-04-18 17:50 GMT

►ಮತದಾನಕ್ಕೆ ಬಹಿಷ್ಕಾರದ ಬಿಸಿ ►ಮನವೊಲಿಕೆಗೆ ಅಧಿಕಾರಿಗಳ ಹರಸಾಹಸ

ಚಿಕ್ಕಮಗಳೂರು, ಎ.18: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಚುನಾವಣೆ ಅಂಗವಾಗಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಗುರುವಾರ ನಡೆದ ಮತದಾನ ಪ್ರಕ್ರಿಯೆ ಸಣ್ಣಪುಟ್ಟ ಗೊಂದಲ ಹೊರತು ಪಡಿಸಿ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಜಿಲ್ಲಾದ್ಯಂತ ಒಟ್ಟಾರೆ ಶೇ.75.26 ರಷ್ಟು ಮತದಾನವಾಗಿದೆ.

ಕ್ಷೇತ್ರ ವ್ಯಾಪ್ತಿಯ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಇವಿಎಂನಲ್ಲಿ ಕಂಡು ಬಂದ ತಾಂತ್ರಿಕ ದೋಷದಿಂದಾಗಿ ಮತದಾನ ಸುಮಾರು ಮುಕ್ಕಾಲು ಗಂಟೆ ತಡವಾಗಿ ಆರಂಭವಾದ ಘಟನೆ ನಡೆದಿದ್ದು, ತರೀಕೆರೆ ಹಾಗೂ ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಬಹಿಷ್ಕಾರದ ಕೂಗು ಎದ್ದಿದ್ದ ಘಟನೆಗಳು ಹೊರತು ಪಡಿಸಿದರೆ ಶೃಂಗೇರಿ ಹಾಗೂ ಹಾಗೂ ಹಾಸನ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕಡೂರು ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿತ್ತು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ನಾಲ್ಕು ಹಾಗೂ ಹಾಸನ ಕ್ಷೇತ್ರದ ಒಂದು ವಿಧಾನಸಭೆ ಕ್ಷೇತ್ರ ವ್ಯಾಪ್ತಿ ಹೊಂದಿರುವ ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ ನಡೆದ ಮತದಾನ ಪ್ರಕ್ರಿಯೆ ಸಂಜೆ ಆರು ಗಂಟೆಯವರೆಗೂ ನಡೆಯಿತು. ಬೆಳಗ್ಗೆ  ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಪುರುಷರು, ಮಹಿಳೆಯರು, ವೃದ್ಧರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ನಗರ, ಪಟ್ಟಣ ಪ್ರದೇಶಗಳಲ್ಲಿ ಬೆಳಗ್ಗೆ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯಿತಾದರೂ ಗ್ರಾಮೀಣ ಪ್ರದೇಶಗಳಲ್ಲಿ ಮತದಾನ ಮಂದಗತಿಯಲ್ಲಿ ಸಾಗಿದ್ದು ಕಂಡುಬಂತು. ಗ್ರಾಮೀಣ ಪ್ರದೇಶಗಳಲ್ಲಿ ಮತದಾರರು ಕೂಲಿ ಕೆಲಸ ಮುಗಿಸಿ ಸಂಜೆ ವೇಳೆ ಮತದಾನ ಮಾಡುವ ತೀರ್ಮಾನ ಮಾಡಿದ್ದರಿಂದ ಸಂಜೆ ವೇಳೆ ಮತಗಟ್ಟೆಗಳಲ್ಲಿ ಮತದಾನ ಚುರುಕು ಪಡೆಯಿತು. 

ವೃದ್ಧರು ಹಾಗೂ ಅಂಗವಿಕಲರು ಚುನಾವಣಾ ಆಯೋಗದಿಂದ ನಿಯೋಜಿಸಲಾಗಿದ್ದ ಆಟೊ ಮತ್ತು ವಾಹನದಲ್ಲಿ ಬಂದು ಮತ ಚಲಾಯಿಸಿದರೆ, ಕೆಲ ಮಹಿಳೆಯರು ತಮ್ಮ ಪುಟ್ಟ ಕಂದಮ್ಮಗಳೊಂದಿಗೆ ಮತಗಟ್ಟೆಯಲ್ಲಿ ಸರತಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂದು. ಇನ್ನೂ ಕೇಲ ಪ್ರದೇಶದಲ್ಲಿ ಮಹಿಳೆಯರಿಗಾಗಿ ಚುನಾವಣಾ ಆಯೋಗ ನಿಗದಿಪಡಿಸಿದ್ದ ಸಖಿ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ವಿಕಲಚೇತನರಿದ್ದ ಮತಗಟ್ಟೆಗಳಿಗೆ ಚುನಾವಣಾಧಿಕಾರಿಗಳು ವ್ಹೀಲ್‍ಚೇರ್ ಗಳನ್ನು ನೀಡಿದ್ದರಿಂದ ದಿವ್ಯಾಂಗರು ವೀಲ್‍ಚೇರ್ ಗಳಲ್ಲಿ ಬಂದು ಮತ ಚಲಾಯಿಸುತ್ತಿದ್ದ ದೃಶ್ಯ ಜಿಲ್ಲಾದ್ಯಂತ ಸಾಮಾನ್ಯವಾಗಿತ್ತು. 

ಚಿಕ್ಕಮಗಳೂರು ನಗರದಲ್ಲಿ ಗುರುವಾರ ಮುಂಜಾನೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಅಂಬೇಡ್ಕರ್ ರಸ್ತೆ ಬಳಿಯ ಸರಕಾರಿ ಉರ್ದು ಶಾಲೆಯಲ್ಲಿ ನಂ.164 ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂತು. ಇವಿಎಂ ಪರಿಣತರು ಮತಯಂತ್ರ ಪರಿಶೀಲಿಸಿ ದೋಷ ಸರಿಪಡಿಸಲು ಸುಮಾರು ಮುಕ್ಕಾಲು ಗಂಟೆ ವ್ಯಯ ಮಾಡಿದರು. ಈ ವೇಳೆ ಮತದಾನಕ್ಕೆ ಬಂದಿದ್ದ ನಾಗರಿಕರು ಸರತಿ ಸಾಲಿನಲ್ಲಿ ನಿಂತು ಹೈರಾಣಾದರು. ಹಿನ್ನೆಲೆ ಮತದಾನ ಪ್ರಕ್ರಿಯೆ ಸುಮಾರು 40 ನಿಮಿಷಗಳಷ್ಟು ತಡವಾಗಿ ಪ್ರಾರಂಭವಾಯಿತು. ಅದರಂತೆ ಹೌಸಿಂಗ್‍ಬೋರ್ಡ್‍ನ ವಾರ್ಡ್ ನಂ.122, ಬೂತ್ ಸಂಖ್ಯೆ 27ರಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು, ಮತಯಂತ್ರವನ್ನು 1:45ಕ್ಕೆ ಸರಿಪಡಿಸಲಾಯಿತು.

ಇನ್ನು ನಗರದ ಹೊರವಲಯದಲ್ಲಿರುವ ಕರ್ತಿಕೆರೆ ಗ್ರಾಮದ ಬೂತ್‍ನಲ್ಲಿ ಬೆಳಗ್ಗೆ ಆರು ಗಂಟೆಯಿಂದ ಆರಂಭಗೊಂಡಿದ್ದು, ಬೆಳಗ್ಗೆ ಸ್ವಲ್ಪಮಟ್ಟಿನ ಬಿರುಸು ಕಂಡುಬಂದರೂ ಮಧ್ಯಾಹ್ನದ ವೇಳೆಗೆ ಮಂದಾಗತಿಯಲ್ಲಿ ಮತದಾನ ನಡೆಯಿತು. ಸಂಜೆಯ ವೇಳೆಗೆ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡು ಬಂತು. ಚಿಕ್ಕಮಗಳೂರು ತಾಲೂಕಿನ ಕಳಸಾಪುರದಲ್ಲಿ ಬೆಳಗ್ಗೆ ಬಿರುಸು ಪಡೆದುಕೊಂಡಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ವೇಳೆ ಮತಗಟ್ಟೆಗಳಲ್ಲಿ ಬೆರಳೆಣಿಕೆಯ ಮತದಾರರು ಕಾಣಿಸಿಕೊಂಡರು. ಆಗೊಮ್ಮೆ ಈಗೊಮ್ಮೆ ಒಬ್ಬೊಬ್ಬರು ಬಂದು ಮತದಾನ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತಾಲೂಕಿನ ಬೆಳವಾಡಿ ಮತಗಟ್ಟೆಯಲ್ಲಿ ಮಹಿಳೆಯರು ಹಾಗೂ ಪುರುಷರು ಪ್ರತ್ಯೇಕ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯಕಂಡು ಬಂತು. ಕೆ.ಬಿ.ಹಾಳ್ ಮತಗಟ್ಟೆಯಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೂ ನೀರಸ ಮತದಾನ ಇದ್ದರೆ, ಎಸ್.ಬಿದರೆ ಮತಗಟ್ಟೆಯಲ್ಲಿ ಮತದಾರರು ಹೆಚ್ಚಿನ ಸಂಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವುದು ಕಂಡು ಬಂತು. ಸಿಂದಗೆರೆಯಲ್ಲೂ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಸರಾಗವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದದ್ದು ಕಂಡು ಬಂತು.

ಇನ್ನು ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಕೊರತೆ ಹಾಗೂ ಕೆಂಜಿಗೆ ಗ್ರಾಮದಿಂದ ಬಾಳೆಹಳ್ಳಿಗೆ ಮತಗಟ್ಟೆ ಬದಲಾಯಿಸಿದ್ದನ್ನು ವಿರೋಧಿಸಿ ಗ್ರಾಮಸ್ಥರು ಸುಮಾರು 600 ಮತದಾರರು ಮತದಾನ ಪ್ರಕ್ರಿಯೆಯಿಂದ ಹೊರಗುಳಿದಿದ್ದರು. ಈ ಸುದ್ದಿ ತಿಳಿದ ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದ ನಂತರ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. 

ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ಗುಳ್ಳದಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಿಗೇನಹಳ್ಳಿ, ತ್ಯಾಗದಬಾಗಿ, ತಾಂಡ್ಯ ಸಿದ್ಧಾಪುರ ಸೇರಿದ ಮೂರು ಗ್ರಾಮಗಳ ಗ್ರಾಮಸ್ಥರು ಮೂಲಭೂತ ಸೌಲಭ್ಯದ ಬೇಡಿಕೆ ಮುಂದಿಟ್ಟು ಮತದಾನ ಪ್ರಕ್ರಿಯೆಯಿಂದ ಹೊರಗುಳಿದಿದ್ದರು. ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದ ಚುನಾವಣಾಧಿಕಾರಿಗಳ ತಂಡ ನಿವಾಸಿಗಳ ಮನವೊಲಿಸಿದ್ದರಿಂದ ಗ್ರಾಮಸ್ಥರು ತಮ್ಮ ನಿರ್ಧಾರ ಬದಲಿಸಿ ಮತದಾನ ಪ್ರಕ್ರಿಯಲ್ಲಿ ಪಾಲ್ಗೊಂಡರೆಂದು ತಿಳಿದು ಬಂದಿದೆ.

ಇನ್ನು ಜಿಲ್ಲೆಯ ಮಲೆನಾಡು ಭಾಗದ ಶೃಂಗೇರಿ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿನ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಬೆಳಗ್ಗೆ ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ವೇಳೆ ಚುರುಕುಗೊಂಡಿತು. ಈ ಭಾಗದ ಬಹುತೇಕ ಕಾರ್ಮಿಕರು ಕೂಲಿ ಕೆಲಸ ಮುಗಿಸಿ ಮಧ್ಯಾಹ್ನದ ವೇಳೆ ಮತದಾನಕ್ಕೆ ಬಂದಿದ್ದರಿಂದ ಈ ಭಾಗದ ಮತಗಟ್ಟೆಗಳಲ್ಲಿ ಸಂಜೆ ವೇಳೆ ಬಿರುಸಿನ ಮತದಾನ ನಡೆಯಿತೆಂದು ತಿಳಿದು ಬಂದಿದೆ. ಮಲೆನಾಡು ಭಾಗದ ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳಲ್ಲೂ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಹಿಳಾ ಮತದಾರರು ಪ್ರತ್ಯೇಕವಾಗಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಹಿರಿಯ, ವಯೋವೃದ್ಧ ಮತದಾರರು ಕೆಲವೆಡೆ ವ್ಹೀಲ್‍ಚೇರ್ ಗಳ ಸಹಾಯದಿಂದ ಬಂದು ಮತದಾನ ಮಾಡಿದರೆ, ಕೆಲವೆಡೆ ಮಕ್ಕಳು, ಮೊಮ್ಮಕ್ಕಳ ಸಹಾಯದಿಂದ ಮತಗಟ್ಟೆಗೆ ಹೊತ್ತು ತಂದು ಮತದಾನ ಮಾಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಮತಗಟ್ಟೆ ಆವರಣದ ಹೊರಭಾಗಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕರ್ತರು, ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಪ್ರಯತ್ನಸುತ್ತಿದ್ದ ದೃಶ್ಯಗಳೂ ಸಾಮಾನ್ಯವಾಗಿದ್ದವು. ಕೆಲ ಗ್ರಾಮಗಳಲ್ಲಿ ಮತದಾರರು ಹಣ ಹೆಂಡ ನೀಡದಿರುವುದಕ್ಕೆ ಕೆಲ ರಾಜಕೀಯ ಪಕ್ಷಗಳು, ಮುಖಂಡರ ವಿರುದ್ಧ ದೂರಿದ ಪ್ರಸಂಗಗಳೂ ಕಂಡುಬಂದವು. 

ಇನ್ನು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಧ್ಯಾಹ್ನ ಚಿಕ್ಕಮಗಳೂರು ನಗರದ ಮತಗಟ್ಟೆಯೊಂದರ ಬಳಿ ಕಾಣಿಸಿಕೊಂಡು ಕಾಯಕರ್ತರೊಂದಿಗೆ ಕೆಲ ಹೊತ್ತು ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿ ನಂತರ ಬೆಂಗಳೂರಿಗೆ ತೆರಳಿದರು. ಆದರೆ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮಾತ್ರ ನಗರದಲ್ಲಿ ಕಂಡು ಬರಲಿಲ್ಲ. ಒಟ್ಟಾರೆ ಜಿಲ್ಲೆಯ ಐದು ವಿಧಾಸಭೆ ಕ್ಷೇತ್ರಗಳ ವ್ಯಾಪ್ತಿಯ ಕೆಲ ಮತಗಟ್ಟೆಗಳಲ್ಲಿ ಮತಯಂತ್ರಗಳ ದೋಷದಿಂದ ಕೆಲ ಗಂಟೆಗಳು ಮತದಾನ ವಿಳಂಬವಾಗಿರುವುದು ಹಾಗೂ ಮತ ಬಹಿಷ್ಕಾರದ ಕೂಗು ಹೊರತು ಪಡಿಸಿ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಶಾಂತಿಯಿಂದ ನಡೆಯಿತು. ಮತದಾನದ ಹಿನ್ನೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪ್ರತೀ ಬೂತ್‍ಗಳಲ್ಲೂ ಪೊಲೀಸರು ಹಾಗೂ ಅರೆಸೇನಾ ಪಡೆಗಳ ಸಿಬ್ಬಂದಿ ಭದ್ರತೆ ಒದಗಿಸಿದ್ದರು.

ಎಲ್ಲೆಲ್ಲಿ, ಎಷ್ಟೆಷ್ಟು ಮತದಾನ ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಫಿಯನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.75ರಷ್ಟು ಮತದಾನವಾಗಿದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.65, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.75, ಚಿಕ್ಕಮಗಳೂರು ವಿಧಾನಸಬಾ ಕ್ಷೇತ್ರದಲ್ಲಿ ಶೇ.70, ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.70ರಷ್ಟು ಹಾಗೂ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.70 ರಷ್ಟು ಮತದಾನವಾಗಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ಅತೀ ಹೆಚ್ಚು ಮತ್ತು ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನವಾಗಿದೆ. ಚುನಾವಣಾ ಆಯೋಗ ಕೈಗೊಂಡ ಕಾರ್ಯಕ್ರಮಗಳು ಮತದಾನ ಪ್ರಮಾಣ ಹೆಚ್ಚಳವಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ. 

ನಾನು ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆ. ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ವಾಸವಿದ್ದು, ನಮ್ಮ ಊರಿನಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿದೆ. ತೆಂಗು, ಅಡಿಕೆ ಮರಗಳು ಒಣಗಿ ಹೋಗಿವೆ. ಹಾಗಾಗಿ ನನ್ನ ಮತಕ್ಕೆ ಬೆಲೆ ಇದೆ. ಈ ಕಾರಣಕ್ಕೆ ಬೆಂಗಳೂರಿನಿಂದ ಗುರುವಾರ ರಾತ್ರಿ ಗ್ರಾಮಕ್ಕೆ ಬಂದಿದ್ದೇನೆ. ನೀರಾವರಿಗೆ ಒತ್ತು ನೀಡುವ ಸರಕಾರದ ಪರವಾಗಿ ನಾನು ಮತ ಚಲಾಯಿಸುತ್ತೇನೆ.
- ಭಾರ್ಗವಿ, ಬೆಳವಾಡಿ ಗ್ರಾಮದ ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ 

ಈ ಬಾರಿಯ ಚುನಾವಣೆಯಲ್ಲಿ ಹಣ ಹೆಂಡಕ್ಕೆ ಅವಕಾಶ ನೀಡಿಲ್ಲ, ಆದ್ದರಿಂದ ಮತದಾರರಲ್ಲಿ ನಿರಾಸಕ್ತಿ ಮೂಡಿಸಿದೆ. ಯಾಕೆ ಮತದಾನ ಮಾಡಬೇಕು ಎಂಬ ತತ್ಸಾರ ಮನೋಭಾವ ಹೊಂದಿದ್ದಾರೆ. ಚುನಾವಣೆ ಹೀಗೆ ನಡೆಯಬೇಕು, ಹಣ ಮತ್ತು ಹೆಂಡಕ್ಕೆ ಅವಕಾಶ ನೀಡಬಾರದು.
- ಕೆ.ಬಿ. ಚಂದ್ರಶೇಖರ್, ಕಳಾಸಪುರ ಗ್ರಾಮಸ್ಥ 

ಕರಗಡ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಾಶವಾಗಿದೆ. ಮೂರು ಪಕ್ಷದ ಮುಖಂಡರು ತಾವು ಕರಗಡ ಯೋಜನೆಯನ್ನು ಪೂರ್ಣಗೊಳ್ಳಿಸುತ್ತೇವೆಂದು ನಾ ಮುಂದೂ, ತಾ ಮುಂದೂ ಎಂದು ಬಂದು ನಾಟಕ ಮಾಡುತ್ತಾರೆ. ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ, ನೀರಿನ ಸಮಸ್ಯೆಯಿಂದ ಇಡೀ ಗ್ರಾಮಸ್ಥರೇ ಬೇಸರಗೊಂಡಿದ್ದು, ದೇಶದ ಹಿತಕ್ಕಾಗಿ ಅನಿವಾರ್ಯವಾಗಿ ಮತದಾನ ಮಾಡಬೇಕಾಗಿದೆ.

-ಚಂದ್ರಶೇಖರ್ ಹಾಗೂ ಜಗದೀಶ್, ಲಕ್ಯಾ ಗ್ರಾಮಸ್ಥರು

ಶಾಸಕ ಸಿಟಿ ರವಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಗ್ರಾಮಕ್ಕೆ ಏನು ಕೆಲಸ ಮಾಡಿಲ್ಲ, ಚುನಾವಣೆ ಬಂದಾಗ ಮತ ಕೇಳಲು ಬರುತ್ತಾರೆ. ಆಮೇಲೆ ಗ್ರಾಮಕ್ಕೆ ಕಾಲಿಡುವುದಿಲ್ಲ, ಶಾಸಕ ಸಿ.ಟಿ.ರವಿ ನಾಲ್ಕು ಬಾರಿ ಎಂಎಲ್‍ಎ ಆದರೂ ಇದುವರೆಗೂ ಸುಳ್ಳು ಹೇಳಿಕೊಂಡು ಬಂದಿದ್ದಾರೆ. 

- ನಾಗರಾಜ್, ಕಳಸಾಪುರ ಗ್ರಾಮಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News