ಬಂಜಾರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಿದ್ದೇ ಕಾಂಗ್ರೆಸ್: ಮಲ್ಲಿಕಾರ್ಜುನ ಖರ್ಗೆ

Update: 2019-04-18 18:42 GMT

ಕಲಬುರ್ಗಿ, ಎ. 18: ರಾಜ್ಯದಲ್ಲಿನ ಬಂಜಾರ ಸಮುದಾಯವನ್ನು ಪರಿಶಿಷ್ಟ ಜಾತಿ(ಎಸ್ಸಿ) ಪಟ್ಟಿಗೆ ಸೇರಿಸಿದ್ದೆ ಕಾಂಗ್ರೆಸ್ ಸರಕಾರ. ದೇವರಾಜ ಅರಸು ಸಿಎಂ ಆಗಿದ್ದ ಸಂದರ್ಭದಲ್ಲಿ ತಾನೂ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಹೀಗಿರುವಾಗ ನಾನು ಬಂಜಾರ ವಿರೋಧಿ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ತಾಂಡಗಳ ಅಭಿವೃದ್ದಿಗೆ ಕ್ರಮ ಕೈಗೊಂಡ ಪರಿಣಾಮವಾಗಿ ತಾಂಡಗಳು ಇಂದು ಶೈಕ್ಷಣಿಕವಾಗಿ ಸಬಲವಾಗಿವೆ. ಸಮುದಾಯದ ಕೆಲವರು ಖರ್ಗೆ ಗೆದ್ದು ಬಂದರೆ ಬಂಜಾರ ಸಮುದಾಯವನ್ನು ಎಸ್ಸಿಯಿಂದ ತೆಗೆಸುತ್ತಾರೆಂದು ತಪ್ಪು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ಪರಿಶಿಷ್ಟರ ಪಟ್ಟಿಗೆ ಸೇರಿಸುವಾಗಲೇ ನಾನು ವಿರೋಧಿಸಲಿಲ್ಲ. ಹೀಗಿರುವಾಗ ಈಗೇಕೆ ಎಸ್ಸಿ ಪಟ್ಟಿಯಿಂದ ತೆಗೆದುಹಾಕಿಸಲಿ. ಭೋವಿ ಹಾಗೂ ಬಂಜಾರ ಸಮುದಾಯಗಳು ಸಂವಿಧಾನದ ಅಡಿಯಲ್ಲಿ ಮೀಸಲಾತಿ ಪಡೆಯುತ್ತಿವೆ. ಹೀಗಾಗಿ ಯಾರೇ ಬಂದರೂ ಅದನ್ನು ತೆಗೆಸಲು ಸಾಧ್ಯವಿಲ್ಲ ಎಂದು ಖರ್ಗೆ ಸ್ಪಷ್ಟಣೆ ನೀಡಿದರು.

ನಾನು ನನ್ನ ರಾಜಕೀಯ ಜೀವನ ಆರಂಭಿಸಿದ್ದೇ ಗುರುಮಠಕಲ್ ಕ್ಷೇತ್ರದಿಂದ. ಅಲ್ಲಿ ಬಂಜಾರ ಜನಾಂಗದವರ ಸಂಖ್ಯೆ ಹೆಚ್ಚಿದೆ. ಅವರಿಗೆ ಯಾರಾದರೂ ತೊಂದರೆ ಕೊಟ್ಟರೆ ನಾನೇ ರಕ್ಷಣೆ ಮಾಡಿದ್ದೇನೆ. ಕಂದಾಯ ಸಚಿವರಾಗಿದ್ದ ವೇಳೆ ಹಲವು ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿದ್ದೇನೆ. ಇಷ್ಟೆಲ್ಲ ಮಾಡಿದ ಮೇಲೆ ನಾನು ಹೇಗೆ ಬಂಜಾರ ಸಮುದಾಯದ ವಿರೋಧಿ ಎಂದು ಪ್ರಶ್ನಿಸಿದರು.

ಬಿಜೆಪಿಯವರು ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಈ ಚುನಾವಣೆ ಸಂವಿಧಾನ ಉಳಿಸುವ ಚುನಾವಣೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಸಂವಿಧಾನ ಉಳಿಸಿ ಎಂದ ಅವರು, ಎ.23ರಂದು ನಡೆಯಲಿರುವ ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮನೆ ಒಡೆದ ಕೇಶವ ಕೃಷ: ಬಿಜೆಪಿಯವರು ಬಂಜಾರ ಸಮುದಾಯವನ್ನು ಒಡೆದರು. ದೊಡ್ಡ ಮರವನ್ನು (ಬೆಳಮಗಿ) ಕಡಿದು, ಗೊಡ್ಡುಮರ (ಜಾಧವ್) ನೆಟ್ಟರು. ಇಂತ ಮನೆಹಾಳ ಕೆಲಸವನ್ನು ಕೇಶವ ಕೃಪ ಮಾಡಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ ಆರೋಪಿಸಿದರು.

ಸಮುದಾಯ ನಂಬಿದವರನ್ನು ಕೈಬಿಡುವುದಿಲ್ಲ. ಬಂಜಾರ ಸಮುದಾಯದವರು ಕಾಂಗ್ರೇಸ್ ಪರವಾಗಿದ್ದಾರೆ. ಯಾಕೆಂದರೆ ಸಂವಿಧಾನ ಉಳಿಸುತ್ತಿದ್ದಾರೆ ಎಂದ ಅವರು, ಮೋದಿ ಬಗ್ಗೆ ಮುಸಲ್ಮಾನರಿಗೇನು ಭಯವಿಲ್ಲ. ಹಿಂದೂ-ಮುಸ್ಲಿಮರ ನಡುವೆ ಬಿರುಕು ತಂದ ಮೋದಿ ಮನೆಗೆ ಹೋಗಬೇಕು ಎಂದರು.

ಕಾಂಗ್ರೆಸ್ ಸರಕಾರ ಅನ್ನಭಾಗ್ಯ ಯೋಜನೆ ತಂದು ಅಕ್ಕಿ ಉಚಿತವಾಗಿ ನೀಡಿತು. ಮಕ್ಕಳಿಗೆ ಮೊಟ್ಟೆ ಉಚಿತವಾಗಿ ನೀಡಿದೆ. ಮಾಜಿ ಸಿಎಂ ಯಡಿಯೂರಪ್ಪ ಏನ್ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಅವರು, ಬಡವರಿಗೆ ಪೌಷ್ಠಿಕಾಂಶ ಒದಗಿಸುವ ದೃಷ್ಟಿಯಿಂದ ಹೊಸ ಯೋಜನೆ ರೂಪಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಾಬುರಾವ್ ಚವ್ಹಾಣ್, ಸುಭಾಷ್ ರಾಠೋಡ್, ರೇವೂ ನಾಯ್ಕಾ ಬೆಳಮಗಿ, ಬಾಬು ಹೊನ್ನಾನಾಯ್ಕಾ, ಅಲ್ಲಮಪ್ರಭು ಪಾಟೀಲ್, ಮಲ್ಲಮ್ಮ ವಳಕೇರಿ, ಜಗದೇವ್ ಗುತ್ತೇದಾರ್, ಲತಾ ರಾಠೋಡ್, ಕಿಶನ್ ರಾಠೋಡ್ ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News