ಶಿವಮೊಗ್ಗ ಕ್ಷೇತ್ರ: ಖಾತೆ ಮಾಡಿಕೊಡಲು ನಿರಾಕರಣೆ- ಮತದಾನ ಬಹಿಷ್ಕರಿಸಲು ದಲಿತರ ನಿರ್ಧಾರ

Update: 2019-04-18 18:53 GMT

ಶಿವಮೊಗ್ಗ, ಎ. 18: ತಾವು ವಾಸಿಸುತ್ತಿರುವ ಮನೆಗಳಿಗೆ ಕಳೆದ ಹಲವು ವರ್ಷಗಳಿಂದ ಖಾತೆ ಮಾಡಿಕೊಡಲು ಮಹಾನಗರ ಪಾಲಿಕೆ ಆಡಳಿತ ನಿರಾಕರಿಸುತ್ತಿದೆ. ಈ ಕಾರಣದಿಂದ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ನಗರದ ವಿದ್ಯಾನಗರ ಬಡಾವಣೆಯ ಕರಲಟ್ಟಿ (ದಲಿತರ ಕೇರಿ) ನಿವಾಸಿಗಳು ತಿಳಿಸಿದ್ದಾರೆ.

ಈ ಸಂಬಂಧ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನಿವಾಸಿಗಳು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ತಮ್ಮ ಬೇಡಿಕೆ ಈಡೇರಿದರೆ ಮಾತ್ರ, ಮತದಾನ ಕಾರ್ಯದಲ್ಲಿ ಭಾಗಿಯಾಗುವುದಾಗಿ ನಿವಾಸಿಗಳು ತಿಳಿಸಿದ್ದಾರೆ.

ಖಾತೆಯಿಲ್ಲ: ಕರಲಟ್ಟಿ (ದಲಿತರ ಕೇರಿ) ಯಲ್ಲಿ ನೂರಾರು ವರ್ಷಗಳಿಂದ ನಮ್ಮ ಪೂರ್ವಜರು ವಾಸಿಸಿಕೊಂಡು ಬರುತ್ತಿದ್ದಾರೆ. ಕಳೆದ ಸುಮಾರು 33 ವರ್ಷಗಳ ಹಿಂದೆ ಈ ಜಾಗಕ್ಕೆ ಹಕ್ಕುಪತ್ರ ನೀಡಲಾಗಿದೆ. ನಮ್ಮ ಕುಟುಂಬಗಳ ಸದಸ್ಯರು ಸ್ವಾತಂತ್ರ್ಯ ಪೂರ್ವದಿಂದಲೂ ಜೀತ ಮಾಡಿಕೊಂಡು ಬರುತ್ತಿದ್ದಾರೆ. ಅಸ್ಪಶ್ಯತೆಯಿಂದ ಸಾಕಷ್ಟು ನೊಂದಿದ್ದೇವೆ ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪ್ರಸ್ತುತ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಬಹುತೇಕರು ಅನಕ್ಷರಸ್ಥ, ಕಡುಬಡವರಾಗಿದ್ದೇವೆ. ಗಾರೆ, ಮನೆಕೆಲಸ ಮತ್ತಿತರ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇವೆ. ನಮ್ಮ ಮನೆಗಳಿಗೆ ಖಾತೆ ಮಾಡಿಕೊಡಬೇಕು ಎಂಬುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಈ ಹಿಂದಿನ ನಗರಸಭೆ ಆಡಳಿತಾವಧಿಯ 1988 ರಲ್ಲಿ ಹಕ್ಕುಪತ್ರ ನೀಡಿತ್ತು. ಆದರೆ ಇದರ ಆಧಾರದ ಮೇಲೆ ಖಾತೆ ಮಾಡಿಕೊಡಲು ನಗರಸಭೆಯಿಂದ ಹೊರನಡೆದು, ಈಗಿನ ಮಹಾನಗರ ಪಾಲಿಕೆ ಆಡಳಿತ ಕೂಡ ನಿರಾಕರಿಸಿಕೊಂಡು ಬರುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಖಾತೆ ಮಾಡಿಕೊಡಲು ನಿರಾಕರಿಸುತ್ತಿರುವ ಆಡಳಿತದ ಕ್ರಮದ ವಿರುದ್ದ ದಲಿತರ ಕೇರಿಯ ಮತದಾರರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ. ಸುಮಾರು 250 ರಿಂದ 300 ರಷ್ಟು ಜನರು ಮತದಾನ ಕಾರ್ಯದಿಂದ ದೂರ ಉಳಿಯಲಿದ್ದಾರೆ ಎಂದು ನಿವಾಸಿಗಳು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ವೇಳೆ ನಿವಾಸಿಗಳಾದ ರತ್ನಮ್ಮ, ಲಕ್ಷ್ಮಮ್ಮ, ರೇಣುಕಾ, ದೇವೇಂದ್ರ, ಜಯಲಕ್ಷ್ಮಮ್ಮ, ಲಕ್ಷ್ಮೀ, ದೇವೇಂದ್ರ, ಈಶ್ವರಪ್ಪ, ದೀಪಕ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News