ಕೋಲಾರ ಲೋಕಸಭಾ ಕ್ಷೇತ್ರ: ಶೇ 75.94 ರಷ್ಟು ಮತದಾನ

Update: 2019-04-18 19:01 GMT

ಕೋಲಾರ,ಎ.18: ಕೋಲಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ, ಕೆಲವು ಸಣ್ಣ-ಪುಟ್ಟ ಘಟನೆಗಳು ಹೊರತುಪಡಿಸಿ ಇನ್ನುಳಿದಂತೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ 75.94 ರಷ್ಟು ಮತದಾನವಾಗಿದೆ.

ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ಬೆಳಗ್ಗೆ ಮತದಾನದ ಆರಂಭದಲ್ಲೇ ವಿದ್ಯುನ್ಮಾನ ಮತ ಯಂತ್ರಗಳಲ್ಲಿ (ಇವಿಎಂ) ಮತ್ತು ಮತದಾನ ಖಾತ್ರಿ (ವಿ.ವಿ ಪ್ಯಾಟ್‌) ಉಪಕರಣಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸ್ವಲ್ಪ ಮಟ್ಟಿಗೆ ಗೊಂದಲ ಮೂಡಿತ್ತು. ಹಾಗಾಗಿ ಸಕಾಲಕ್ಕೆ ಮತದಾನ ಆರಂಭವಾಗಲಿಲ್ಲ. ಇದರಿಂದ ಅಸಮಾಧಾನಗೊಂಡ ಮತದಾರರು ಮತಗಟ್ಟೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆದರೆ ಮತಗಟ್ಟೆ ಸಿಬ್ಬಂದಿ ದೋಷಯುಕ್ತ ಇವಿಎಂ ಮತ್ತು ವಿ.ವಿ ಪ್ಯಾಟ್‌ ಉಪಕರಣಗಳನ್ನು ಬದಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಮೊದಲ ಎರಡು ತಾಸು ಮತದಾನ ನಿಧಾನ ಗತಿಯಲ್ಲಿ ಸಾಗಿತ್ತು. ಮತದಾರರು ಮತಗಟ್ಟೆಯತ್ತ ಮುಖ ಮಾಡಲಿಲ್ಲ. ಬೆಳಿಗ್ಗೆ 9 ಗಂಟೆವರೆಗೆ ಸರಾಸರಿ ಶೇ 5.88ರಷ್ಟು ಮತದಾನವಾಗಿತ್ತು.

ನಂತರ ಮತದಾರರು ಹುರುಪಿನಿಂದ ಮತಗಟ್ಟೆಗಳತ್ತ ಧಾವಿಸಿದರು. ಬಳಿಕ ಮತದಾನ ಚುರುಕುಗೊಂಡಿತು. ಪ್ರತಿ ಮತಗಟ್ಟೆಯಲ್ಲೂ ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಿಸಲಾಯಿತು. 100 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆ ಅಧಿಕಾರಿಗಳು ಮತದಾನದ ಕ್ಷಣ ಕ್ಷಣದ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ರವಾನಿಸಿದರು.

ಹೆಚ್ಚಿನ ಬಂದೋಬಸ್ತ್: ಮತಗಟ್ಟೆಗಳ ಸುತ್ತಮುತ್ತ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ರಾಜಕೀಯ ಮುಖಂಡರು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಮತದಾರರಿಗೆ ಮತ ಚಲಾವಣೆ ಬಗ್ಗೆ ತಿಳಿವಳಿಕೆ ನೀಡುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ಮತಗಟ್ಟೆಗಳ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಅಂಗವಿಕಲರ ಅನುಕೂಲಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪ್ರತ್ಯೇಕವಾಗಿ ತಲಾ ಒಂದು ಮತಗಟ್ಟೆ ಸ್ಥಾಪಿಸಲಾಗಿತ್ತು. ಈ ಮತಗಟ್ಟೆಗಳಿಗೆ ಅಂಗವಿಕಲ ಸಿಬ್ಬಂದಿಯನ್ನೇ ನಿಯೋಜಿಸಲಾಗಿತ್ತು. ಅಂಗವಿಕಲ ಮತದಾರರನ್ನು ಉಚಿತವಾಗಿ ಆಟೊಗಳಲ್ಲಿ ಮತಗಟ್ಟೆಗೆ ಕರೆತರಲಾಯಿತು. ಮತಗಟ್ಟೆಗಳಲ್ಲಿ ವ್ಹೀಲ್‌ ಚೇರ್‌ ಮತ್ತು ರ್ಯಾಂಪ್‌ ಸೌಲಭ್ಯ ಕಲ್ಪಿಸಲಾಗಿತ್ತು. ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವ ಕಡೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 2 ಸಖಿ ಮತಗಟ್ಟೆ ತೆರೆಯಲಾಗಿತ್ತು.

ವಯೋವೃದ್ಧರು ಕುಟುಂಬ ಸದಸ್ಯರ ನೆರವಿನೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಕೆಲವೆಡೆ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಮತದಾರರನ್ನು ವಾಹನಗಳಲ್ಲಿ ಕರೆತಂದು ಮತ ಹಾಕಿಸಿದರು. ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡಿ ಸಂಭ್ರಮಿಸಿದರು.

ನಿಯಮಿತ ಪರಿಶೀಲನೆ: ಮುನ್ನೆಚ್ಚರಿಕೆ ಕ್ರಮವಾಗಿ ಮತಗಟ್ಟೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಚುನಾವಣಾ ವೀಕ್ಷಕರು, ಜಿಲ್ಲಾಧಿಕಾರಿ, ತಹಶೀಲ್ದಾರ್‌ಗಳು, ಹಿರಿಯ ಪೊಲೀಸ್‌ ಅಧಿಕಾರಿಗಳು, ತಹಶೀಲ್ದಾರ್‌ಗಳು, ಸಂಚಾರ ದಳ ಸಿಬ್ಬಂದಿಯು ಮತಗಟ್ಟೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಡಾವಣೆಗಳಲ್ಲಿ ಮತದಾರರ ಓಲೈಕೆ ಕಸರತ್ತು ಜೋರಾಗಿತ್ತು. ಕಾರ್ಯಕರ್ತರು ಮನೆ ಮನೆ ಅಲೆಯುತ್ತಾ ಮತದಾರರ ಓಲೈಕೆ ಮಾಡಿ ಮತಗಟ್ಟೆಗೆ ಕರೆತಂದು ಮತ ಹಾಕಿಸಿದರು. ಬಿಸಿಲ ಝಳ ಹೆಚ್ಚಿದ್ದರಿಂದ ಮತಗಟ್ಟೆಗಳಿಂದ ಸಾಕಷ್ಟು ದೂರದಲ್ಲಿ ಮತದಾರರಿಗೆ ನೀರು, ಮಜ್ಜಿಗೆ, ಪಾನಕ ವಿತರಿಸಿದರು.

ಸಮಯ ಕಳೆದಂತೆ ಮತದಾನ ಪ್ರಮಾಣ ಹೆಚ್ಚುತ್ತಾ ಹೋಯಿತು. ಸಂಜೆ 5 ಗಂಟೆ ವೇಳೆಗೆ ಮತಗಟ್ಟೆಗಳ ಬಳಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮತದಾನ ಅಂತ್ಯಗೊಳ್ಳಲು ಒಂದು ತಾಸು ಬಾಕಿ ಇರುವಾಗ ಮತಗಟ್ಟೆಗಳ ಮುಂದೆ ಮತದಾರರ ದೊಡ್ಡ ಸಾಲು ಕಂಡುಬಂತು. ಮತದಾರರು ಕೊನೆಯ ಕ್ಷಣದವರೆಗೂ ಸರದಿ ಸಾಲಿನಲ್ಲಿ ನಿಂತು ಹುರುಪಿನಿಂದ ಮತ ಚಲಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News