ಕೋಲಾರ : ಸವರ್ಣೀಯರಿಂದ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ

Update: 2019-04-19 07:12 GMT

ಕೋಲಾರ, ಎ. 19 :  ದಲಿತನೋರ್ವ ಕಾಂಗ್ರೆಸ್ ಬೂತ್ ಏಜೆಂಟ್ ಆಗಿ ಕೆಲಸ ಮಾಡಿದ ಕಾರಣಕ್ಕಾಗಿ ಸವರ್ಣೀಯರ ಗುಂಪೊಂದು ದಲಿತ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೋಲಾರದ ಚಲುವನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಇದೇ ವೇಳೆ ದಲಿತರ ಗುಡಿಸಲನ್ನು ಧ್ವಂಸ ಮಾಡಲಾಗಿದ್ದು, ನಾಲ್ಕು ಜನ ಗಾಯಾಳುಗಳು ಎಸ್.ಎನ್.ಆರ್.ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಗ್ರಾಮದ ದಲಿತ ಕುಟುಂಬದ ಮಂಜುನಾಥ ಬಿನ್ ಚಿಕ್ಕಯಲ್ಲಪ್ಪ, ಚಲುವನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಏಜೆಂಟ್ ಆಗಿ ಕೆಲಸ ಮಾಡಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಚಿಕ್ಕಯಲ್ಲಪ್ಪ,  ರತ್ನಮ್ಮ ಚಿಕ್ಕಯಲ್ಲಪ್ಪ, ನಾಗೇಶ್ ಬಿನ್ ಚಿಕ್ಕಯಲ್ಲಪ್ಪ, ಸಾಕಮ್ಮ ನಾಗೇಶ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗ್ರಾಮದ ವಕ್ಕಲಿಗರ ಸಮುದಾಯಕ್ಕೆ ಸೇರಿದ ಗೋವಿಂದಸ್ವಾಮಿ, ರಾಧಮ್ಮ, ಸುನಿಲ್ ,  ತಿಮ್ಮೇಗೌಡ,  ಶಿವಕುಮಾರ ಎಂಬವರು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಹೇಳಲಾಗುತ್ತಿದೆ.

ಗ್ರಾಮದಲ್ಲಿ ಮೊದಲಿನಿಂದಲೂ ದಲಿತರು ಮತ್ತು ಸವರ್ಣೀಯರ ಮಧ್ಯೆ ಜಾತಿ ವೈಶಮ್ಯಗಳ ಹಿನ್ನಲೆಯಲ್ಲಿ ಗಲಾಟೆ ನಡೆಯುತ್ತಿದ್ದವು. ಇದೀಗ ದಲಿತರು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಿದ್ದಕ್ಕೆ ಕುಪಿತಗೊಂಡ ಬಿಜೆಪಿ ಬೆಂಬಲಿತ ಸವರ್ಣೀಯರು ಮತದಾನ ಮುಗಿಯುತ್ತಿದ್ದಂತೆ  ಗುಂಪುಕಟ್ಟಿಕೊಂಡು ಬಂದು ಮನೆಯಲ್ಲಿ ಇದ್ದ ಮಹಿಳೆಯರನ್ನೂ ಸೇರಿದಂತೆ ಮನೆಯಿಂದ ಎಳೆದುಕೊಂಡು ಬಂದು, ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News