ವಿದ್ಯಾರ್ಥಿನಿ ಮಧು ನಿಗೂಢ ಸಾವು: ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಎಲ್ಲೆಡೆ ಪ್ರತಿಭಟನೆ

Update: 2019-04-19 12:12 GMT

ರಾಯಚೂರು/ಬೆಂಗಳೂರು, ಎ.19: ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಧು ಪತ್ತಾರ (23) ನಿಗೂಢ ಸಾವು ಪ್ರಕರಣದ ತನಿಖೆ ಚುರುಕುಗೊಳಿಸಿ, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಎಲ್ಲೆಡೆ ಪ್ರತಿಭಟನೆ ನಡೆಸಲಾಗುತ್ತಿದೆ.

ಶುಕ್ರವಾರ ನಗರದ ಹಲವು ಕಡೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯ ಮಾಡಿದರು.

ಏನಿದು ಪ್ರಕರಣ?: ಎ.13ರಂದು ಬೆಳಗ್ಗೆ ಮನೆಯಿಂದ ತೆರಳಿದ್ದ ವಿದ್ಯಾರ್ಥಿನಿ ಮಧು ಪತ್ತಾರ, ಮನೆಗೆ ವಾಪಸ್ ಬಂದಿರಲಿಲ್ಲ. ನೇತಾಜಿ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಎ.15ರಂದು ನಗರದ ಮಾಣಿಕ್‌ಪ್ರಭು ದೇವಸ್ಥಾನದ ಹಿಂಭಾಗದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮಧು ಮೃತದೇಹ ಪತ್ತೆಯಾಗಿತ್ತು. ಪರೀಕ್ಷೆಯಲ್ಲಿ ಪದೇಪದೇ ಅನುತ್ತೀರ್ಣಗೊಂಡಿರುವ ಕಾರಣಕ್ಕೆ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸುದರ್ಶನ ಯಾದವ್ ಎಂಬುವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಗತ್ಯ ಮಾಹಿತಿ ಕಲೆ ಹಾಕಿ ತನಿಖೆ ಕೈಗೊಂಡಿದ್ದಾರೆ.

ಆರಂಭದಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದ ಪೊಲೀಸರು ಮೃತಳ ತಾಯಿಯ ದೂರು ಆಧರಿಸಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜಸ್ಟೀಸ್ ಫಾರ್ ಮಧು ಎಂಬ ಹ್ಯಾಸ್ ಟ್ಯಾಗ್‌ನಲ್ಲಿ ಆಂದೋಲನ ಆರಂಭಗೊಂಡಿದೆ. ಈ ಪ್ರತಿಭಟನೆ ಚುನಾವಣೆಯ ಕಾರಣದಿಂದಾಗಿ ಹೆಚ್ಚು ಪ್ರಚಾರ ಪಡೆದಿರಲಿಲ್ಲ. ಮೊದಲ ಹಂತದ ಚುನಾವಣೆ ಮುಗಿದ ಬೆನ್ನಲ್ಲೇ ವಿದ್ಯಾರ್ಥಿನಿಯ ಅಸಹಜ ಸಾವಿನ ಪ್ರಕರಣ ಹೆಚ್ಚು ಚರ್ಚೆಗೀಡಾಗುತ್ತಿದ್ದು, ಇತರ ಜಿಲ್ಲೆಗಳಲ್ಲೂ ಪ್ರತಿಭಟನೆಗಳು ಆರಂಭಗೊಳ್ಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News