ಮೋದಿಯಂತಹ ನೂರು ಜನ ಬಂದರೂ ದೇವೇಗೌಡರನ್ನು ಮಣಿಸಲು ಅಸಾಧ್ಯ: ಎಸ್.ಎಲ್.ಭೋಜೇಗೌಡ

Update: 2019-04-19 12:46 GMT

ಚಿಕ್ಕಮಗಳೂರು, ಎ.19: ಮಾಜಿ ಪ್ರಧಾನಿ ದೇವೇಗೌಡರದ್ದು ಕುಟುಂಬ ರಾಜಕೀಯ ಹೌದೋ ಅಲ್ಲವೋ ಎಂಬುದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ. ಬಿಜೆಪಿ ಪಕ್ಷದಲ್ಲಿರುವ ಕುಟುಂಬ ರಾಜಕಾರಣಕ್ಕೆ ಮೊದಲು ಇತಿಶ್ರೀ ಹಾಡಿ ನಂತರ ದೇವೇಗೌಡ ಕುಟುಂಬದ ಬಗ್ಗೆ ಮಾತನಾಡಿ ಎಂದು ಎಂದು ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಅವರು ಬಾಗಲಕೋಟೆ ಮತ್ತು ಚಿಕ್ಕೋಡಿಯಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರದ್ದು ಕುಟುಂಬ ರಾಜಕಾರಣ ಎಂದು ಟೀಕಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ದೇವೇಗೌಡರದ್ದು ಕುಟುಂಬ ರಾಜಕಾರಣವಾದರೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ನನ್ನ ಮಗಳ ಸಮಾನ ಎಂದು ಹೇಳಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಅವರ ಮಗ ಬಿ.ವೈ.ರಾಘವೇಂದ್ರ ಸಂಸದರಾಗಿದ್ದಾರೆ, ಯಡಿಯೂರಪ್ಪನವರದ್ದು ಕುಟುಂಬ ರಾಜಕಾರಣ ಅಲ್ಲದೇ ಮತ್ತೇನೆಂದು ಭೋಜೇಗೌಡ ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಮೊದಲು ತಮ್ಮ ಪಕ್ಷದಲ್ಲಿರುವ ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಲಿ ಎಂದು ಸವಾಲು ಹಾಕಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಚುನಾವಣೆಯಲ್ಲಿ ಸ್ಫರ್ಧಿಸುವ ಅವಕಾಶವಿದೆ. ದೇವೇಗೌಡರ ಕುಟುಂಬದ ಸದಸ್ಯರು ಹಿಂಬಾಗಿಲ ರಾಜಕಾರಣ ಮಾಡುತ್ತಿಲ್ಲ, ಜನರಿಂದ ಆಯ್ಕೆ ಬಯಸಿದ್ದಾರೆ. ಅದರಲ್ಲೇನು ತಪ್ಪು ಎಂದು ಪ್ರಶ್ನಿಸಿ, ಬಿಜೆಪಿ ಯವರ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಮತ್ತೊಬ್ಬರ ತಟ್ಟೆಯಲ್ಲಿ ನೋಣ ಬಿದ್ದಿದೆ ಎನ್ನುತ್ತಿದ್ದಾರೆ. ಕುಟುಂಬ ರಾಜಕಾರಣದ ಬಗ್ಗೆ ಮೋದಿ ಹಾಗೂ ಬಿಜೆಪಿಯವರಿಗೆ ನೈತಿಕತೆಯೇ ಇಲ್ಲ. ಮೋದಿಯಂತಹ ನೂರು ಮಂದಿ ಬಂದು ಅಪಪ್ರಚಾರ ಮಾಡಿದರೂ ದೇವೇಗೌಡ ಅವರನ್ನು ಸೋಲಿಸಲಾಗಲ್ಲ ಎಂದು ಸವಾಲು ಹಾಕಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಅಳುವ ಮುಖ್ಯಮಂತ್ರಿ, ಸಮ್ಮಿಶ್ರ ಸರಕಾರ ಅಭದ್ರ ಸರಕಾರ ಎಂದು ಪ್ರಧಾನಿ ಟೀಕಿಸಿದ್ದಾರೆ. ಆದರೆ ಹೆಂಡತಿಯನ್ನು ಬಿಟ್ಟು, ತಾಯಿಯನ್ನು ನೋಟು ಬದಲಾಯಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಲ್ಲಿಸಿ ತಾಯಿಯನ್ನು ಅವಮಾನಿಸಿದ ಮೋದಿಯಂತಹ ಮಗನಿಗೆ ತಾಯಿ ಕರುಳಿನ ಭಾವುಕತೆ ಬಗ್ಗೆ ತಿಳಿದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಭಾವುಕ ಜೀವಿ. ಅನೇಕ ಕಷ್ಟಗಳನ್ನು ನೋಡಿದವರು, ತಂದೆ ತಾಯಿ ಜೊತೆ ಬೆಳೆದವರು ಎಂದರು.

ಸಮ್ಮಿಶ್ರ ಸರಕಾರ ಅಭದ್ರ ಸರಕಾರ ಅಲ್ಲ, ಸುಭದ್ರ ಸರಕಾರ ಎಂದ ಅವರು, ಈ ಸರಕಾರ ಅಭದ್ರ ಸರಕಾರವಾಗಿದ್ದರೇ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಬಿಜೆಪಿಯವರು ಹೋದ ಕಡೆಗಡೆಗಳಲ್ಲಿ ರೈತರ ಸಾಲಮನ್ನಾ ಆಗಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅನೇಕ ಬಿಜೆಪಿ ಮುಖಂಡರ, ಕಾರ್ಯಕರ್ತರ ಬೆಳೆಸಾಲ ಮನ್ನಾ ಆಗಿರುವ ಪಟ್ಟಿಯನ್ನು ಪ್ರಧಾನಮಂತ್ರಿ ಕಚೇರಿಗೆ ಕಳಿಸಲು ಸಿದ್ಧ ಎಂದ ಅವರು,  ಸಿದ್ದರಾಮಯ್ಯ ಅವರ ಅಧಿಯಲ್ಲಿ ಸಾಲಮನ್ನಾ ಆಗಿದೆ, ಕುಮಾರಸ್ವಾಮಿ ಅವರ ಅವಧಿಯಲ್ಲೂ ರೈತರ ಸಾಲ ಮನ್ನಾ ಆಗಿದೆ. ಇದರ ಫಲಾನುಭವಿಗಳು ಬಿಜೆಪಿಯಲ್ಲೂ ಇದ್ದಾರೆಂದ ಅವರು, ಮೇ ತಿಂಗಳ ಅಂತ್ಯದಲ್ಲಿ ಜಿಲ್ಲೆಯ ರೈತರ ಸಾಲಮನ್ನಾ ಆಗಲಿದ್ದು, ಆಗ ಬಿಜೆಪಿಯವರ ಆರೋಪಕ್ಕೆ ಪ್ರತ್ಯುತ್ತರ ನೀಡುವುದಾಗಿ ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಸಿಪಿಐ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್ ಅವರು ಈ ಬಾರಿ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದ ವಿಜಯಕುಮಾರ್, ಮೈತ್ರಿ ಪಕ್ಷದ ಅಭ್ಯರ್ಥಿ ಈ ಬಾರಿ ಸಂಸದರಾಗಿ ಆಯ್ಕೆಯಾಗುವುದು ಖಚಿತ ಎಂದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ ಮುಖಂಡ ರೇಣುಕಾರಾಧ್ಯ, ಕಾಂಗ್ರೆಸ್ ಮುಖಂಡ ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಮೂರು ಪಕ್ಷಗಳ ಕಾರ್ಯಕರ್ತರು ಬೂತ್‍ಮಟ್ಟದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ ಪರಿಣಾಮ ಹಿಂದೆಂದೂ ಕಾಣದ ಬೆಂಬಲವನ್ನು ಪ್ರಮೋದ್‍ ಗಳಿಸಿದ್ದಾರೆ. ಬೈಂದೂರು ಹಾಗೂ ಕಾಪು ಕ್ಷೇತ್ರಗಳಲ್ಲಿ ಪ್ರಮೋದ್ ಲೀಡ್ ಗಳಿಸಲಿದ್ದು, ಕುಂದಾಪುರ, ಕಾರ್ಕಳದಲ್ಲಿ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಸಮಾನವಾಗಿ ಮತಗಳಿಕೆ ಮಾಡಿದ್ದಾರೆಂಬ ಮಾಹಿತಿ ಇದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಮೈತ್ರಿ ಅಭ್ಯರ್ಥಿ ಲೀಡ್‍ಗಳಿಸಲಿದ್ದಾರೆ. ಪರಿಣಾಮ ಮೈತ್ರಿ ಅಭ್ಯರ್ಥಿ ಅತೀ ಹೆಚ್ಚು ಅಂತರದ ಮತಗಳಿಂದ ಗೆಲುವು ಸಾಧಿಸಲಿದ್ದಾರೆ.
- ರಂಜನ್ ಅಜೀತ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ 

ಜಿಲ್ಲೆಯಲ್ಲಿ ಯಶಸ್ವಿಯಾಗಿ ಚುನಾವಣೆ ಎದುರಿಸಿದ್ದೇವೆ. ಜನರು ಉತ್ಸಹದಿಂದ ಮತದಾನ ಮಾಡಿದ್ದಾರೆ. ಬಿಜೆಪಿ ಒಡಕು ಮನೆಯಾಗಿದ್ದರಿಂದ ಶೋಭಾಗೆ ಹತಾಶೆ ನಿರಾಸೆ ಉಂಟಾಗಿದೆ. ಗೋಬ್ಯಾಕ್ ಚಳವಳಿಯಿಂದ ಮೈತ್ರಿ ಅಭ್ಯರ್ಥಿಗೆ ಬಾರಿ ಅನುಕೂಲವಾಗಿದೆ. ಪ್ರಮೋದ್ ಗೆಲುವು ಸಾಧಿಸಲಿದ್ದಾರೆ.
-  ಎಚ್.ಎಚ್.ದೇವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News