ಕಾಂಗ್ರೆಸ್ ಎಲ್ಲರಿಗೂ ಸಮಾನವಾದ ಸ್ಥಾನ ಕಲ್ಪಿಸಿದೆ: ಮಾಜಿ ಸಚಿವ ಎಚ್.ಆಂಜನೇಯ

Update: 2019-04-19 13:03 GMT

ದಾವಣಗೆರೆ,ಎ.19: ಕಾಂಗ್ರೆಸ್ ಜಾತ್ಯಾತೀತ ನಿಲುವುಳ್ಳ ಹಾಗೂ ಸಾಮಾಜಿಕ ಪರವಾದ ಪಕ್ಷವಾಗಿದ್ದು, ಎಲ್ಲರಿಗೂ ಸಮಾನವಾದ ಸ್ಥಾನ ಕಲ್ಪಿಸಿದೆ. ಆದರೆ, ಬಿಜೆಪಿ ಒಂದು ಕೋಮುವಾದಿ ಪಕ್ಷವಾಗಿದ್ದು, ಇಲ್ಲಿ ಎಲ್ಲರನ್ನು ಒಟ್ಟುಗೂಡಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.  

ಇಲ್ಲಿನ ನರಹರಿಶೇಟ್ ಕಲ್ಯಾಣ ಮಂಟಪದಲ್ಲಿ ಲೋಕಸಭೆ ಚುನಾವಣೆ ಮೈತ್ರಿ ಅಭ್ಯರ್ಥಿ ಎಚ್. ಮಂಜಪ್ಪ ಪರವಾಗಿ ಶುಕ್ರವಾರ ನಡೆದ ಮತಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಜೆಪಿ ಇದು ಅಪವಿತ್ರ ಮೈತ್ರಿ ಎಂದು ಬೊಬ್ಬೆ ಹೊಡೆಯುತ್ತಿದೆ. ಅಲ್ಲದೇ ಜನಪ್ರತಿನಿಧಿಗಳ ಖರೀದಿ ಹೊರಟಿದ್ದು, ಇದು ಬಿಜೆಪಿಯ ಕೆಟ್ಟ ಸಂಸ್ಕೃತಿ. ಮೇ 23ರ ನಂತರ ಸರಕಾರ ಬೀಳುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದು, ಇದು ಶುದ್ಧ ಸುಳ್ಳು, ಐದು ವರ್ಷಗಳ ಕಾಲ ಸಮ್ಮಿಶ್ರ ಸರಕಾರ ಆಡಳಿತ ನಡೆಸುತ್ತದೆ ಎಂದರು. 

ಈ 70 ವರ್ಷಗಳಲ್ಲಿ ಕಾಂಗ್ರೆಸ್ ಆರ್‍ಟಿಇ, ಆರ್‍ಟಿಐ, ರೈತರ ಸಾಲಮನ್ನಾ, ಉದ್ಯೋಗ ಖಾತರಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಮೋದಿ ಜನರ ಖಾತೆಗೆ ಹಣ ಹಾಕುತ್ತೇನೆ ಎಂದು ಹಣವನ್ನೇ ಹಾಕಿಲ್ಲ, ಉದ್ಯೋಗ ನೀಡಿಲ್ಲ. ರೈತರ ಸಾಲಮನ್ನಾ ಮಾಡಿಲ್ಲ. ಬದಲಾಗಿ ಪಕೋಡ ಮಾರಾಟ ಮಾಡಿ ಎನ್ನುತ್ತಿದ್ದಾರೆ. ತನ್ನ ಪ್ರಣಾಳಿಕೆಯಲ್ಲಿ ನೀಡಿದ ಅನೇಕ ಅಂಶಗಳನ್ನು ಜಾರಿಗೆ ತಂದಿಲ್ಲ. ಆದರೆ ಕಾಂಗ್ರೆಸ್ ನುಡಿದಂತೆ ನಡೆಯಲಿದೆ ಎಂದರು. 

ಚಿತ್ರದುರ್ಗದ ಕಾಂಗ್ರೆಸ್ ಮುಖಂಡ ಎಂ.ಜಯ್ಯಣ್ಣ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಮೋದಿ ನೇತೃತ್ವದ ಕೋಮವಾದಿ ಸರಕಾರ ದೇಶದ ಜನರ ಮಧ್ಯೆ ಕೋಮುಭಾವನೆ ಕೆರಳಿಸಿ ಅಭಿವೃದ್ದಿ ಸಂಪೂರ್ಣ ಕಡೆಗಣಿಸಿದೆ. ಇಂತಹ ಸರಕಾರ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು. ಪ್ರಸ್ತುತ ನಡೆಯುತ್ತಿರುವ ಚುನಾವಣೆ ಮೇಲ್ವರ್ಗದ ಜನರು ಮತ್ತು ಕೆಳ ಹಂತದ ಜನರ ನಡುವೆ ನಡೆಯುತ್ತಿರುವ ಹೋರಾಟವಾಗಿದೆ. ಈ ಹೋರಾಟದಲ್ಲಿ ರಾಜ್ಯದ 28 ಕೇತ್ರಗಳ ಪೈಕಿ ಕನಿಷ್ಟ 22 ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಹೇಳಿದರು. 

ಜೆಡಿಎಸ್ ಮುಖಂಡ ಎಚ್.ಎಸ್.ಶಿವಶಂಕರ್ ಮಾತನಾಡಿ, ಬಿಜೆಪಿ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನರ ಭಾವನೆ ಕೆರಳಿಸುವ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕಾರಣ ನಡೆಸುತ್ತದೆ. ರಾಷ್ಟ್ರದ ಅರ್ಧ ಭಾಗದಲ್ಲಿ ಬಿಜೆಪಿ ಅಧಿಕಾರ ಹಿಡಿದಿಲ್ಲ. ಇನ್ನು ಜೆಡಿಎಸ್ ಮತಗಳು ಜಿಲ್ಲೆಯಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚಿದ್ದು, ಆ ಮತಗಳು ಕಾಂಗ್ರೆಸ್‍ಗೆ ಬೀಳುವುದರಿಂದ ಮೈತ್ರಿ ಅಭ್ಯರ್ಥಿ ಮಂಜಪ್ಪ ಗೆಲವು ನಿಶ್ಚಿತವೆಂದರು.

ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಜೆಡಿಎಸ್ ಮುಖಂಡ ಗಣೇಶ್ ದಾಸಕರಿಯಪ್ಪ, ಮಳಲ್ಕರೆ ಶಿವಣ್ಣ, ಬಿ.ಎಮ್. ಹನುಮಂತಪ್ಪ, ಎಲ್.ಬಿ. ಹನುಮಂತಪ್ಪ, ಎಸ್.ಮಲ್ಲಿಕಾರ್ಜುನ್, ಎಂ.ಹಾಲೇಶ್, ಜಿಪಂ ಸದಸ್ಯ ಬಸವಂತಪ್ಪ, ಬಲ್ಕಿಶ್ ಭಾನು, ಚಿದಾನಂದಪ್ಪ, ಎ.ಕೆ. ನಾಗಪ್ಪ ಇದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News