‘ಮಜಬೂತ್’ ಪ್ರಧಾನಿ ಮೋದಿ ರೈತರ ಸಾಲಮನ್ನಾ ಮಾಡಲಿಲ್ಲವೇಕೆ?: ಸಚಿವ ಶಿವಾನಂದ ಪಾಟೀಲ್ ಪ್ರಶ್ನೆ

Update: 2019-04-19 13:20 GMT

ಬಾಗಲಕೋಟೆ, ಎ. 19: ‘ದುರ್ಬಲ (ಮಜಬೂರಿ) ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲಮನ್ನಾ ಮಾಡಿ ರೈತರ ಕಣ್ಣೀರು ಒರೆಸಿದ್ದಾರೆ. ಅದೇ ಕೆಲಸವನ್ನು ‘ಮಜಬೂತ್’ ಸರಕಾರದ ಪ್ರಧಾನಿ ಮೋದಿ ಮಾಡಲಿಲ್ಲ ಏಕೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಪ್ರಶ್ನಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಬಿಜೆಪಿ ವಿಜಯ ಸಂಕಲ್ಪಯಾತ್ರೆಯಲ್ಲಿ ಪ್ರಧಾನಿ ಮೋದಿ ಮಾಡಿದ ದುರ್ಬಲ ಸರಕಾರ ಹಾಗೂ ಪ್ರಬಲ ಸರಕಾರ ಹೋಲಿಕೆಯ ಭಾಷಣಕ್ಕೆ ತಿರುಗೇಟು ನೀಡಿದರು.

ತಮ್ಮದು ಮಜಬೂತ್ ಸರಕಾರ ಎನ್ನುವ ಪ್ರಧಾನಿ ಮೋದಿ, ಐದು ವರ್ಷಗಳ ಆಡಳಿತದ ಅವಧಿಯಲ್ಲಿ ಸಾಲಮನ್ನಾ ಮಾಡಿ ರೈತರ ಸಂಕಷ್ಟಕ್ಕೆ ಏಕೆ ಸ್ಪಂದಿಸಲಿಲ್ಲ ಎಂದ ಅವರು, ಮೋದಿ ಭಾಷಣ ಬಾಗಲಕೋಟೆ ಜನ ಹಾಗೂ ಮುಳುಗಡೆ ಸಂತ್ರಸ್ತರ ನಿರೀಕ್ಷೆ ಹುಸಿಗೊಳಿಸಿದೆ ಎಂದರು.

ಆಲಮಟ್ಟಿ ಜಲಾಶಯ ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಬರಬೇಕು ಎಂಬುದು ರಾಜ್ಯ ಸರಕಾರದ ಒತ್ತಾಯ. ಆ ಬಗ್ಗೆಯೂ ಮೋದಿ ಸ್ಪಷ್ಟವಾಗಿ ಏನೂ ಹೇಳಲಿಲ್ಲ. ದೇವೇಗೌಡ ಪ್ರಧಾನಿಯಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ಅದಕ್ಕೆ ವೇಗ ನೀಡಿದ್ದರು. ಆದರೆ ಮೋದಿ ಏನೂ ಮಾಡಿಲ್ಲ ಎಂದರು.

‘ಲಿಂಗಾಯತ ಪ್ರತ್ಯೇಕ ಧರ್ಮ’ದಂತಹ ವಿಚಾರ ಪ್ರಧಾನಿ ಪ್ರಸ್ತಾಪಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಮೋದಿ ಮುಖ ನೋಡಿಕೊಂಡು ಬಿಜೆಪಿ ಅಭ್ಯರ್ಥಿಗಳಿಗೆ ಮತ ಕೊಡಿ ಎನ್ನುತ್ತಿದ್ದಾರೆ. ಓಟು ಕೊಟ್ಟ ಮತದಾರರು ಮೋದಿ ಮುಖ ನೋಡಲು ಮತ್ತೊಂದು ಚುನಾವಣೆವರೆಗೆ ಕಾಯಬೇಕಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News