ಮತ್ತೆ ಸಿಎಂ ಆದರೆ ಬಡವರಿಗೆ 10 ಕೆ.ಜಿ ಅಕ್ಕಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2019-04-19 13:24 GMT

ಕೊಪ್ಪಳ, ಎ.19: ನಾನು ಮತ್ತೆ ಮುಖ್ಯಮಂತ್ರಿಯಾದರೆ ಅನ್ನಭಾಗ್ಯ ಯೋಜನೆ ಅಡಿ ಬಡವರಿಗೆ 10 ಕೆಜಿ ಅಕ್ಕಿ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಣೆ ಮಾಡಿದ್ದಾರೆ.

ಶುಕ್ರವಾರ ಸಿರುಗುಪ್ಪದಲ್ಲಿ ಏರ್ಪಡಿಸಿದ್ದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಮೈತ್ರಿ ಸರಕಾರ ರೈತರ ಸಾಲಮನ್ನಾ ಮಾಡಿದೆ. ಆದರೆ, ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಸಾಲಮನ್ನಾ ಮಾಡಿ ಎಂದರೆ ಹಣ ಎಲ್ಲಿಂದ ತರಲಿ ಎಂದು ಪ್ರಶ್ನಿಸಿದ್ದರು. ಆದರೆ ಈಗ ಹಸಿರು ಟವಲ್ ಹಾಕಿಕೊಂಡು ನಾನು ರೈತರ ಪರ ಎನ್ನುತ್ತಿದ್ದಾರೆ. ಆದರೆ, ನಾವು ಬಡವರು ಊಟ ಮಾಡಲು ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದೆವು. ಬಡವರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು, ನಾನು ಮತ್ತೆ ಮುಖ್ಯಮಂತ್ರಿಯಾದರೆ 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.

ಪ್ರಧಾನಿ ಮೋದಿ 5 ವರ್ಷ ಅಧಿಕಾರವನ್ನು ಪೂರೈಸಿದ್ದು, ಈ ಅವಧಿಯಲ್ಲಿ ಯುವಕರಿಗೆ, ಬಡವರಿಗೆ ಏನು ಮಾಡಿದ್ದೇನೆ ಎಂದು ಹೇಳುವುದಿಲ್ಲ. ಆದರೆ ಅವರು ಹೇಳುವುದು ಒಂದೇ ಬಾಲಾಕೋಟ್ ಎಂದು. ಅವರು ಏನು ಗನ್ ತೆಗೆದುಕೊಂಡು ಹೋಗಿದ್ದಾರಾ? ಅವರೇ ಯುದ್ಧ ಮಾಡಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪಾಕಿಸ್ತಾನ, ಬಾಂಗ್ಲಾದೇಶದ ಮೇಲೆ ಯುದ್ಧ ಮಾಡಿದಾಗ ಪ್ರಧಾನಿ ಆಗಿದ್ದವರು ಇಂದಿರಾಗಾಂಧಿ. ವಾಜಪೇಯಿ ಅವರೆ ಲೋಕಸಭೆಯಲ್ಲಿ ಅವರನ್ನು ದುರ್ಗೆಗೆ ಹೋಲಿಸಿದ್ದಾರೆ. ಈ ಇತಿಹಾಸ ಮೋದಿಯವರಿಗೆ ಗೊತ್ತಿರಲಿ. ಅಲ್ಲದೆ ಮೋದಿ ನನಗಿಂತ ಕಿರಿಯವನಾಗಿದ್ದು, ಗೋಡ್ಸೆ ವಂಶಕ್ಕೆ ಸೇರಿದವರು ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News