ರಾಜ್ಯದ ಮೊದಲ ಹಂತದ ಮತದಾನ: ಕಳೆದ ಬಾರಿಗಿಂತ ಶೇ.1.05 ರಷ್ಟು ಅಧಿಕ ಮತ ಚಲಾವಣೆ

Update: 2019-04-19 14:17 GMT

ಬೆಂಗಳೂರು, ಎ.19: ಮೊದಲ ಹಂತದ ಮತದಾನದ ವೇಳೆ ಹಲವು ಅಡೆತಡೆಗಳ ಹಿನ್ನೆಲೆಯಲ್ಲಿ ಗುರುವಾರ ಮಧ್ಯರಾತ್ರಿವರೆಗೂ ಮತದಾನ ಪ್ರಮಾಣದ ಎಣಿಕೆ ನಡೆದಿದ್ದು, ಅಂತಿಮವಾಗಿ ಶೇ.68.81 ರಷ್ಟು ಮತದಾನವಾಗಿದ್ದು, ಕಳೆದ ಲೋಕಸಭಾ ಚುನಾವಣೆ(ಶೇ.67.76)ಗೆ ಹೋಲಿಸಿದರೆ ಶೇ.1.05ರಷ್ಟು ಅಧಿಕ ಮತದಾನ ದಾಖಲಾಗಿದೆ. 

ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ರ ನಡುವೆ ಜಿದ್ದಾಜಿದ್ದಿಯಾಗಿ ಮಾರ್ಪಟ್ಟು, ಪ್ರತಿಷ್ಠಿತ ಕಣವಾಗಿದ್ದ ಮಂಡ್ಯದಲ್ಲಿ ಶೇ.80.24 ರಷ್ಟು ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಶೇ.8.77 ರಷ್ಟು ಪ್ರಮಾಣ ಅಧಿಕ ಮತದಾನವಾಗಿದೆ.

ಬೆಂಗಳೂರು ನಗರದಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಅತ್ಯಂತ ನಿರುತ್ಸಾಹ ತೋರಿದ್ದಾರೆ. ಸಾಲು, ಸಾಲು ರಜೆಗಳು, ಎರಡೆರಡು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಸೇರಿದಂತೆ ಮತ್ತಿತರೆ ಕಾರಣಗಳಿಂದ ಮತದಾನ ಪ್ರಮಾಣ ಕಡಿಮೆಯಾಗಿದ್ದು, ಚುನಾವಣಾ ಆಯೋಗದ ಜಾಗೃತಿಯು ಯಾವುದೇ ಫಲ ನೀಡಿಲ್ಲ ಎಂದು ಸ್ಪಷ್ಟವಾಗಿದೆ. ಮೊದಲ ಹಂತದಲ್ಲಿ ಎಲ್ಲರ ಗಮನ ಸೆಳೆದಿದ್ದ ಬೆಂಗಳೂರು ನಗರದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇ.54.62 ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.1.91 ರಷ್ಟು ಕಡಿಮೆಯಾಗಿದೆ. ಬೆಂಗಳೂರು ಕೇಂದ್ರದಲ್ಲಿ ಶೇ.54.29 ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.1.35 ರಷ್ಟು ಕಡಿಮೆಯಾಗಿದೆ. ಇನ್ನುಳಿದಂತೆ ಬೆಂಗಳೂರು ದಕ್ಷಿಣದಲ್ಲಿ ಶೇ.53.48 ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಶೇ.2.27 ರಷ್ಟು ಕಡಿಮೆ ಮತದಾನವಾಗಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.75.91 ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಶೇ.1.35 ಅಧಿಕ ಮತದಾನವಾಗಿದೆ. ಹಾಸನದಲ್ಲಿ ಶೇ.77.08 ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.3.59 ಅಧಿಕ ಮತದಾನವಾಗಿದೆ. ದಕ್ಷಿಣಕನ್ನಡದಲ್ಲಿ ಶೇ.77.90 ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಶೇ.0.75 ಅಧಿಕ ಮತದಾನವಾಗಿದೆ.

ಚಿತ್ರದುರ್ಗದಲ್ಲಿ ಶೇ.70.73 ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.4.46 ಅಧಿಕಗೊಂಡಿದೆ. ತುಮಕೂರು ಕ್ಷೇತ್ರದಲ್ಲಿ ಶೇ.77.17 ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.4.60 ಅಧಿಕ ಮತದಾನವಾಗಿದೆ. ಮೈಸೂರಿನಲ್ಲಿ 69.30 ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.2 ರಷ್ಟು ಅಧಿಕ ಮತದಾನವಾಗಿದೆ. ಚಾಮರಾಜನಗರದಲ್ಲಿ ಶೇ.75.15 ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.2.30 ರಷ್ಟು ಅಧಿಕ ಮತದಾನವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಶೇ.76.78 ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.0.57 ರಷ್ಟು ಅಧಿಕ ಮತದಾನವಾಗಿದೆ. ಇನ್ನು ಕೋಲಾರದಲ್ಲಿ ಶೇ.77.14 ರಷ್ಟು ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಶೇ.1.63 ರಷ್ಟು ಅಧಿಕ ಮತದಾನವಾಗಿದೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News