ಡೆಡ್‌ಲೈನ್ ನೀಡುವ ಪ್ರಧಾನಿಗೆ ಜನ ಉತ್ತರ ನೀಡಲಿದ್ದಾರೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-04-19 14:28 GMT

ಹುಬ್ಬಳ್ಳಿ, ಎ. 19: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಪ್ರಧಾನಿ ಮೋದಿ ಮೇ 23ರ ಡೆಡ್‌ಲೈನ್ ನೀಡಿದ್ದು, ಇದಕ್ಕೆ ರಾಜ್ಯದ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇಂದು ಬೀಳಲಿದೆ, ನಾಳೆ ಬೀಳಲಿದೆ ಎಂದು ಪ್ರತಿನಿತ್ಯ ಬಿಜೆಪಿ ಮುಖಂಡರು ಹೇಳುತ್ತಿದ್ದರು. ಇದೀಗ ಮೋದಿಯವರು ಸರಕಾರಕ್ಕೆ ಡೆಡ್‌ಲೈನ್ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ 18ರಿಂದ 21 ಸ್ಥಾನಗಳನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದು, ಐದು ವರ್ಷ ಯಾವುದೇ ಸಾಧನೆಯನ್ನು ಮಾಡದ ಬಿಜೆಪಿಗೆ ಮತದಾರರು ಪಾಠ ಕಲಿಸಲಿದ್ದಾರೆ ಎಂದ ಕುಮಾರಸ್ವಾಮಿ, ಶೆಟ್ಟರ್ ನನ್ನ ತಾಯಿ ಚನ್ನಮ್ಮ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅವರನ್ನು ರಾಜ್ಯಸಭೆ ಸದಸ್ಯೆ ಮಾಡುವುದು ಬಾಕಿ ಇದೆ ಎಂದು ಹೇಳುವ ಮೂಲಕ ಮನಸ್ಸಿಗೆ ನೋವುಂಟು ಮಾಡಿದ್ದಾರೆಂದು ಟೀಕಿಸಿದರು.

ನನ್ನ ತಾಯಿ ಚನ್ನಮ್ಮ ರಾಜಕೀಯ ಒತ್ತಡಗಳಿಗೆ ಸಿಲುಕದೆ ಮನೆಗೆ ಬರುವ ಬಡವರು, ಪಕ್ಷದ ಕಾರ್ಯಕರ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಶೆಟ್ಟರ್ ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿ ಮೋದಿ ತಮ್ಮ ಸ್ಥಾನಕ್ಕೆ ಧಕ್ಕೆ ಬರುವಂತೆ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಷ್ಟ್ರೀಯ ಜಲ ನೀತಿ ಜಾರಿಗೆ ತರುವುದಾಗಿ ಬಾಗಲಕೋಟೆಯಲ್ಲಿ ನಿನ್ನೆ ಮೋದಿ ಹೇಳಿದ್ದಾರೆ. ಐದು ವರ್ಷದಲ್ಲಿ ಜಲನೀತಿ ಜಾರಿಗೆ ತಡೆಯಾಗಿದ್ದವರು ಯಾರು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನರೇಗಾ ಯೋಜನೆ ಅಡಿ ರಾಜ್ಯದ ಕೂಲಿ, ಕಾರ್ಮಿಕರಿಗೆ 1,500 ಕೋಟಿ ರೂ.ಬಿಡುಗಡೆ ಮಾಡದ ಮೋದಿ ಸರಕಾರ ದಿವಾಳಿ ಸರಕಾರ ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News