ಗುಜರಾತ್‌ನಲ್ಲಿಯೇ ಪ್ರಧಾನಿ ಮೋದಿ ಮೇಲೆ ನಂಬಿಕೆ ಇಲ್ಲ: ರಾಯಚೂರಿನಲ್ಲಿ ರಾಹುಲ್ ಗಾಂಧಿ

Update: 2019-04-19 16:02 GMT

ರಾಯಚೂರು, ಎ.19: ಪ್ರಧಾನಿ ನರೇಂದ್ರ ಮೋದಿ ಕರ್ಮಭೂಮಿ ಗುಜರಾತ್‌ನಲ್ಲಿಯೇ ಅವರ ಮೇಲೆ ಜನರು ನಂಬಿಕೆ ಬಿಟ್ಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಹೇಳಿದರು.

ಶುಕ್ರವಾರ ರಾಯಚೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿ, ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶ ಅಭಿವೃದ್ಧಿ ಮಾಡುವುದು ಒಂದು ಕಡೆ ಇರಲಿ. ಅವರು ಮುಖ್ಯಮಂತ್ರಿ ಆಗಿದ್ದಾಗ ಗುಜರಾತ್ ಸಹ ಪ್ರಗತಿ ಕಂಡಿಲ್ಲ. ಅಲ್ಲಿನ ಜನರು ಮೋದಿ ಮೇಲೆ ನಂಬಿಕೆ ಇಟ್ಟಿಲ್ಲ ಎಂದು ತಿಳಿಸಿದರು.

ದಿಲ್ಲಿಯಿಂದ ದೂರ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿರುವ ಅಭ್ಯರ್ಥಿಗಳು ಜಯಗೊಳಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಹೊರಗಡೆ ಹೋಗುವುದು ಖಚಿತ ಎಂದು ನುಡಿದರು.

ದೇಶ ಬಿಟ್ಟು ಓಡಿ ಹೋಗಿರುವ ಉದ್ಯಮಿಗಳಾದ ನೀರವ್ ಮೋದಿ, ವಿಜಯ್ ಮಲ್ಯ, ಚೋಕ್ಸಿ ಅವರ ಜೇಬಿನಿಂದ ಹಣ ತೆಗೆದು ಕಾಂಗ್ರೆಸ್ ರೈತರ ಖಾತೆಗೆ ಹಣ ಹಾಕುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಎಲ್ಲ ಕಡೆಯೂ ರಾಷ್ಟ್ರದ ಭದ್ರತೆ ಬಗ್ಗೆ ಉಲ್ಲೇಖ ಮಾಡುತ್ತಾರೆ. ಆದರೆ, ರಫೇಲ್ ಹಗರಣ ಮಾಡಿ ಅನಿಲ್ ಅಂಬಾನಿ ಜೇಬಿಗೆ 30 ಸಾವಿರ ಕೋಟಿ ರೂ. ಹಾಕಿದ್ದು ಏಕೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಇದುವರೆಗೂ ಐದು ವರ್ಷಗಳಲ್ಲಿ ಮಾಡಿರುವ ತಮ್ಮ ಸಾಧನೆಗಳ ಬಗ್ಗೆ ಹೇಳುತ್ತಿಲ್ಲ. ಬದಲಾಗಿ, ರಾಷ್ಟ್ರ ಭದ್ರತೆ ಎಂದು ಹೇಳಿಕೊಂಡು, ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ರಫೇಲ್ ಯುದ್ಧ ವಿಮಾನಗಳ ತಯಾರಿಕೆ ಜವಾಬ್ದಾರಿ ಅನ್ನು ಕರ್ನಾಟಕದ ಎಚ್‌ಎಎಲ್ಗೆ ನೀಡಿದ್ದರೆ, ಇಲ್ಲಿಯ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಗುತ್ತಿತ್ತು ಎಂದು ಅವರು ಹೇಳಿದರು.

ಕರ್ನಾಟಕಕ್ಕೆ ಬಂದಾಗ ಮೈತ್ರಿ ಸರಕಾರ ರೈತರ ಸಾಲಮನ್ನಾ ಮಾಡಿಲ್ಲ ಎಂದು ಪದೇ ಪದೇ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರಕಾರ ರೈತರ ಸಾಲಮನ್ನಾ ಮಾಡಿದೆ. ಅದೇ ರೀತಿ, ರಾಜಸ್ತಾನ, ಮಧ್ಯಪ್ರದೇಶದಲ್ಲಿ ಸಾಲ ಮನ್ನಾ ಮಾಡಿದ್ದೇವೆ. ಯುಪಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ರೈತ ಬಜೆಟ್ ಮಂಡಿಸಲಾಗುವುದು ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಖಾಲಿ ಉಳಿದಿರುವ ಸರಕಾರಿ ಉದ್ಯೋಗ ಸೇರಿದಂತೆ ಪ್ರಣಾಳಿಕೆಯಲ್ಲಿರುವ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದೆಂದ ಅವರು, ಈ ಹಿಂದೆ ಸಿದ್ದರಾಮಯ್ಯ ಸರಕಾರ ಇಂದಿರಾ ಕ್ಯಾಂಟೀನ್ ಮೂಲಕ ಬಡವರ ಹೊಟ್ಟೆಯನ್ನು ತುಂಬಿಸಿದೆ. ಮೋದಿ ಸರಕಾರ ಬಡವರಿಗಾಗಿ ಏನು ಮಾಡಿದೆ ಎಂಬುದನ್ನು ಜನತೆಗೆ ತಿಳಿಸಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು.

ಕಳ್ಳತನ ಮಾಡಿದ ಮೋದಿ

ರಾಷ್ಟ್ರೀಯ ಭದ್ರತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾರೆ .ಆದರೆ, ರಫೇಲ್ ಹಗರಣದಲ್ಲಿ 30 ಸಾವಿರ ಕೋಟಿ ರೂ. ಕಳ್ಳತನ ಮಾಡಿ, ಅನಿಲ್ ಅಂಬಾನಿ ಬ್ಯಾಂಕ್ ಖಾತೆಗೆ ಹಾಕಿದ್ದು, ಏಕೆ?

-ರಾಹುಲ್ ಗಾಂಧಿ, ಅಧ್ಯಕ್ಷ, ಎಐಸಿಸಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News