ಅಭ್ಯರ್ಥಿಗಳ ಪರ-ವಿರುದ್ಧ ಎಲ್ಲೆಡೆ ಬೆಟ್ಟಿಂಗ್ ಕಾವು ಜೋರು

Update: 2019-04-19 16:05 GMT

ಬೆಂಗಳೂರು, ಎ.19: ರಾಜ್ಯದಲ್ಲಿ ಗುರುವಾರ ಮೊದಲನೆ ಹಂತದ ಲೋಕಸಭಾ ಚುನಾವಣೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರಗೊಂಡಿದೆ. ಇದೀಗ ಎಲ್ಲೆಡೆ ಅಭ್ಯರ್ಥಿಗಳ ಪರ ಹಾಗೂ ವಿರುದ್ಧ ಯಾರು ಗೆಲ್ಲಲಿದ್ದಾರೆ ಎಂಬ ಬೆಟ್ಟಿಂಗ್ ಗಾಳಿ ಜೋರಾಗಿ ಬೀಸುತ್ತಿದೆ.

ಮತದಾನ ಮುಕ್ತಾಯಗೊಂಡು 24 ಗಂಟೆಗಳು ಕಳೆಯುವ ಮುನ್ನವೇ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಕಂಡುಬಂದಿದೆ.

ಮೊದಲ ಹಂತದಲ್ಲಿ ರಾಜ್ಯದ ಗಮನ ಸೆಳೆದಿದ್ದ ಹೈವೋಲ್ಟೇಜ್ ಕ್ಷೇತ್ರಗಳಾಗಿ ಬಿಂಬಿತವಾಗಿದ್ದ ಮಂಡ್ಯ ಲೋಕಸಭೆಯಲ್ಲಿ ಯಾರ ಗೆಲುವಿನ ನಗೆ ಬೀರಲಿದ್ದಾರೆ, ಯಾರೂ ಸೋಲಲಿದ್ದಾರೆ ಎಂಬುದು ಇದೀಗ ಮಂಡ್ಯದಿಂದ ಹೊರಕ್ಕೂ ಚರ್ಚೆ ನಡೆಯುತ್ತಿದ್ದು, ಯುವಜನರು ಸೋಲು-ಗೆಲುವಿನ ಕಡೆ ಬೆಟ್ಟಿಂಗ್‌ನಲ್ಲಿ ಮುಳುಗಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿಯ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಈಗ ಇವರಿಬ್ಬರ ನಡುವೆ ಮತದಾರರು ಯಾರ ಕಡೆಗೆ ಹೆಚ್ಚು ಒಲವು ತೋರಿದ್ದಾರೆ ಎಂಬುದರ ನಡುವೆ ಹೆಚ್ಚು ಚರ್ಚೆಯಾಗುತ್ತಿದೆ. ಸಿಎಂ ಕುಮಾರಸ್ವಾಮಿ ಈ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದು, ಹೆಚ್ಚಿನ ಜನರ ಕುತೂಹಲ ಕೆರಳಿಸಿದೆ.

ಇದೇ ರೀತಿಯಾಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಸ್ಪರ್ಧಿಸಿರುವ ಹಾಸನವೂ ಎಲ್ಲರ ಗಮನ ಸೆಳೆದಿದೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಎ.ಮಂಜು ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದು ಕುತೂಹಲ ಮೂಡಿಸಿದೆ. ರೇವಣ್ಣರ ತಂದೆ ದೇವೇಗೌಡರು ತಮ್ಮ ಸ್ವಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ಅವರು ತುಮಕೂರಿಗೆ ಹೋಗಿದ್ದು, ಅಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ಮತದಾನವೂ ನಡೆದಿದೆ. ಈ ಕ್ಷೇತ್ರದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುರಿತು ಸಾಕಷ್ಟು ಬೆಟ್ಟಿಂಗ್ ನಡೆದಿದೆ.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಹಾಲಿ ಸಂಸದ ಮುದ್ದಹನುಮೇಗೌಡರ ತೀವ್ರ ವಿರೋಧ ನಡುವೆಯೂ ಕಾಂಗ್ರೆಸ್ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರನ್ನು ಸೋಲಿಸಲು ಎಲ್ಲರೂ ಪಣ ತೊಟ್ಟಿದ್ದಾರೆ ಎಂಬ ಮಾತುಗಳು ಕೇಳುಬರುತ್ತಿವೆ. ಇದರ ನಡುವೆಯೂ ದೇವೇಗೌಡರೇ ವಿಜಯ ಸಾಧಿಸುತ್ತಾರೆ ಎಂಬ ಪ್ರಬಲ ನಂಬಿಕೆಯಿಟ್ಟು ಬೆಟ್ಟಿಂಗ್ ಕಟ್ಟಲಾಗುತ್ತಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದರೂ ಕಳೆದ ಬಾರಿ ಕೇವಲ 9 ಸಾವಿರ ಮತಗಳ ಅಂತರದಿಂದ ಸೋತಿದ್ದ ಬಚ್ಚೇಗೌಡಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಅಲ್ಲದೆ, ಕಳೆದ ಬಾರಿ ಕುಮಾರಸ್ವಾಮಿ ಸ್ಪರ್ಧೆಯಿಂದ ವೀರಪ್ಪಮೊಯ್ಲಿ ಗೆಲುವು ಸುಲಭವಾಗಿದೆ. ಈ ಬಾರಿ ಮತ ವಿಭಜನೆಯಾಗಲಿದ್ದು, ಬಚ್ಚೇಗೌಡ ಪರವಾಗಿ ಅಧಿಕ ಮತಗಳು ಚಲಾವಣೆಯಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ, ಇಲ್ಲಿಯೂ ಯಾರು ಗೆಲುವಿನ ನಗೆ ಬೀರಲಿದ್ದಾರೆ ಎಂಬುದರ ಕುರಿತು ಸಾಕಷ್ಟು ಚರ್ಚೆ ಹಾಗೂ ಬೆಟ್ಟಿಂಗ್ ನಡೆಯುತ್ತಿದೆ.

ಮೈಸೂರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಯುವಜನರಿಗೆ ಮಣೆ ಹಾಕುವ ಸಲುವಾಗಿ ಯುವಕರಿಗೇ ಟಿಕೆಟ್ ನೀಡಿದೆ. ಅಲ್ಲದೆ, ಮತದಾರರು ಯುವಜನರ ಕಡೆ ಹೆಚ್ಚು ಆಕರ್ಷಿತರಾಗಿದ್ದಾರೆ ಎಂಬ ಮಾತುಗಳಿದ್ದರೂ, ಗೆಲುವಿನ ನಗೆ ಬೀರುವುದು ಕಷ್ಟಕರವಾಗಿದೆ ಎಂಬ ವಾದ ನಡೆಯುತ್ತಿದೆ. ಆದರೆ, ಈ ಎರಡೂ ಕ್ಷೇತ್ರಗಳಲ್ಲಿ ಮತದಾರರು ಯಾರಿಗೆ ಮಣೆ ಹಾಕಿದ್ದಾರೆ ಎಂಬುದರ ಕುರಿತು ಎಲ್ಲರ ಚಿತ್ತ ಹರಡಿದೆ.

ಮೊದಲ ಹಂತದಲ್ಲಿ ಚುನಾವಣೆ ನಡೆದಿರುವ ಎಲ್ಲ 14 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾಗಿ ಹಾಗೂ ಬಿಜೆಪಿ, ಪಕ್ಷೇತರ ಅಭ್ಯರ್ಥಿಗಳ ಪರವಾಗಿಯೂ ಭರ್ಜರಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಮೇ 23 ರಂದು ಫಲಿತಾಂಶ ಪ್ರಕಟವಾಗಲಿದ್ದು, ಯಾರು ಗೆಲ್ಲಲಿದ್ದಾರೆ ಎಂಬುದು ನಿರ್ಣಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News