ಬಿಜೆಪಿ ಚುನಾವಣಾ ಜಾಹೀರಾತಿನಲ್ಲಿ ರಾಷ್ಟ್ರಧ್ವಜ ಬಳಕೆ ಸಂವಿಧಾನ ಬಾಹಿರ: ಎಚ್.ಕೆ.ಪಾಟೀಲ್

Update: 2019-04-19 16:07 GMT

ಗದಗ, ಎ.19: ಬಿಜೆಪಿ ಎ.17ರ ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ನೀಡಿರುವ ಚುನಾವಣಾ ಜಾಹೀರಾತಿನಲ್ಲಿ ರಾಷ್ಟ್ರಧ್ವಜವನ್ನು ಬಳಸಿಕೊಂಡಿದ್ದು, ಇದು ಸಂವಿಧಾನ ಬಾಹಿರ. ಹೀಗಾಗಿ ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜವನ್ನು ಜಾಹೀರಾತಿನಲ್ಲಿ ಉಪಯೋಗಿಸಿಕೊಳ್ಳುವ ಮೂಲಕ ಜನರನ್ನು ಭಾವೋದ್ರೇಕಗೊಳಿಸುವುದು ಸರಿಯಲ್ಲ. ಬಿಜೆಪಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಆಯೋಗ ಕ್ರಮ ಜರುಗಿಸುವ ಮೂಲಕ ಚುನಾವಣಾ ಪಾವಿತ್ರತೆ ಎತ್ತಿಹಿಡಿಯಬೇಕು ಎಂದರು.

ಕಾಂಗ್ರೆಸ್ ಪಕ್ಷ ಬಡವರನ್ನು ಬಡತನ ರೇಖೆಯಿಂದ ಮೇಲೆ ಎತ್ತಲು ಅಗತ್ಯವಿರುವ ಹಾಗೂ ಅನುಷ್ಠಾನಗೊಳಿಸಲು ಸಾಧ್ಯವಿರುವ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಈ ಪ್ರಣಾಳಿಕೆಯನ್ನು ಅರ್ಥಶಾಸ್ತ್ರಜ್ಞರ ಸಲಹೆಯಂತೆ ರಚಿಸಲಾಗಿದೆ. ಇಂತಹ ಪ್ರಣಾಳಿಕೆಯ ಬಗ್ಗೆ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಟೀಕೆಯನ್ನು ಮಾಡಿದ್ದಾರೆ.

ಪ್ರಣಾಳಿಕೆಯ ಬಗ್ಗೆ ಟೀಕೆಯನ್ನು ಮಾಡಬೇಕಾದಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಹೇಳಿಕೆ ನೀಡಲಿ. ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಇಂತಹ ಹೇಳಿಕೆಯನ್ನು ನೀಡುವುದು ಸಮಂಜಸವಲ್ಲ ಎಂದರು.

ಸೇನೆಯ ಸಮವಸ್ತ್ರವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಮೋದಿ ಅವರ ವಿರುದ್ದವೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಚುನಾವಣೆಯ ಸಂದರ್ಭದಲ್ಲಿ ಆಯೋಗಕ್ಕೆ ಎಲ್ಲ ರೀತಿಯ ಅಧಿಕಾರವನ್ನು ನೀಡಲಾಗಿರುತ್ತದೆ. ಈ ಅಧಿಕಾರವನ್ನು ಬಳಸಿಕೊಂಡು ಮೋದಿಯವರನ್ನು ಅನರ್ಹಗೊಳಿಸಬೇಕು ಎಂದು ಪಾಟೀಲ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News