ಮೋದಿ ಏಕಚಕ್ರಾಧಿಪತ್ಯ ಸ್ಥಾಪನೆ ಮಾಡಲು ಹೊರಟಿರುವುದು ಅಪಾಯಕಾರಿ: ದೇವೇಗೌಡ

Update: 2019-04-19 17:08 GMT

ವಿಜಯಪುರ,ಎ.19: ಪ್ರಧಾನಿ ಮೋದಿ ಅವರ ಏಕಚಕ್ರಾಧಿಪತ್ಯ ಅಧಿಕವಾಗಿದೆ. ಮೋದಿ ಅವರ ಈ ಮನೋಧೋರಣೆಯಿಂದಾಗಿ ಅಡ್ವಾಣಿ ಅವರು ನೋವಿನಿಂದ ನಿವೃತ್ತಿಯಾಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ವಿಷಾದಿಸಿದರು. 

ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಜರುಗಿದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಅವರ ಮಾತುಗಳಿಂದ ಯಾರೂ ಮೋಸ ಹೋಗಬೇಡಿ. ಯುವಕರು ಬುದ್ಧಿವಂತರು, ಆದರೆ ಬೇಗನೆ ಮೋಸ ಹೋಗುತ್ತಾರೆ. ಮೋದಿ ಅವರ ಬಣ್ಣದ ಮಾತುಗಳಿಂದ ಮರುಳಾಗಬೇಡಿ. ಮೋದಿ ಅವರು ಏಕಚಕ್ರಾಧಿಪತ್ಯ ಸ್ಥಾಪನೆ ಮಾಡಲು ಹೊರಟಿರುವುದು ಅಪಾಯಕಾರಿ ಎಂದರು.

ಅಡ್ವಾಣಿ ಇಲ್ಲದಿದ್ದರೆ ಮೋದಿ ಅವರು ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ. ಗೋದ್ರಾ ಘಟನೆಗೆ ಸಂಬಂಧಿಸಿದಂತೆ ರಾಜಧರ್ಮ ಪಾಲನೆ ಮಾಡಿಲ್ಲ ಎಂದು ಮೋದಿ ಅವರ ಕಾರ್ಯವೈಖರಿಯನ್ನು ಅಟಲ್‍ಬಿಹಾರಿ ವಾಜಪೇಯಿ ಅವರೇ ಖಂಡಿಸಿದ್ದರು. ಆದರೂ ಸಹ ಮೋದಿ ಅವರ ಬೆನ್ನಿಗೆ ನಿಂತು ಅವರನ್ನು ಮುಂದೆ ಕರೆದುಕೊಂಡು ಹೊಗಿದ್ದು ಅಡ್ವಾಣಿ. ಆದರೆ ಈಗ ಅದೇ ಮೋದಿ ಅಡ್ವಾಣಿ ಅವರನ್ನು ಮೂಲೆಗೆ ಕಳುಹಿಸಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಕಾಂಗ್ರೆಸ್ ವರಿಷ್ಠರು ಪ್ರಸ್ತಾಪ ಮಾಡಿದರು. ಆದರೆ ನಾನು ರಾಜ್ಯದಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ ನಮ್ಮ ಪಕ್ಷದಿಂದ 37 ಜನ ಶಾಸಕರು ಆಯ್ಕೆಯಾಗಿದ್ದೇವೆ, ನೀವು ಹೆಚ್ಚಿನ ಸ್ಥಾನ ಗೆದ್ದೀದ್ದಿರಿ. ಕುಮಾರಸ್ವಾಮಿ ಅವರಿಗೆ ಸಿ.ಎಂ ಸ್ಥಾನ ಬೇಡ ಎಂದೆ. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ದೂರದೃಷ್ಟಿಯಿಂದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಸಿದರು. ಜಾತ್ಯಾತೀತ ಮನೋಭಾವದ ಎಲ್ಲ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸಿದರು. ಒಂದು ರಾಜಕೀಯ ವ್ಯವಸ್ಥೆ ಕರ್ನಾಟಕದಲ್ಲಿಯೇ ಮತ್ತೊಂದು ಬಾರಿ ಆರಂಭಗೊಂಡಿತು. ಸಿದ್ಧರಾಮಯ್ಯನವರು ಮಾಡಿರುವ ಎಲ್ಲ ಕೆಲಸಗಳನ್ನು ಮುಂದುವರೆಸುವ ಜೊತೆಗೆ ರೈತರ ರಾಷ್ಟ್ರೀಕೃತ ಹಾಗೂ ಸಹಕಾರ ವಲಯದ ಸಾಲಮನ್ನಾ ಮಾಡಿದ್ದಾರೆ ಎಂದರು. 

ಮೈತ್ರಿ ಅಭ್ಯರ್ಥಿ ಡಾ.ಸುನೀತಾ ಚೌವ್ಹಾಣ ಧೈರ್ಯವಂತ ಹೆಣ್ಣುಮಗಳು. ಈ ಬಾರಿ ಈ ಧೈರ್ಯವಂತ ಮಹಿಳೆಗೆ ಆಶೀರ್ವದಿಸಿ, ಅವರ ಗೆಲುವಿನ ಜವಾಬ್ದಾರಿ ನಿಮ್ಮದು ಎಂದು ದೇವೆಗೌಡ ಮತಯಾಚಿಸಿದರು. 

ಗೃಹ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಕೇಂದ್ರ ಸಚಿವರಾಗಿ ರಮೇಶ್ ಜಿಗಜಿಣಗಿ ಅವರು ಬಹಳಷ್ಟು ಕೆಲಸ ಮಾಡಬಹುದಾಗಿತ್ತು. ನಾನೇನಾದರೂ ಕೇಂದ್ರ ಸಚಿವನಾಗಿದ್ದರೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ 2 ಸಾವಿರ ಕೋಟಿ ರೂ.ಗಳ ಪೈಲಟ್ ಪ್ರಾಜೆಕ್ಟ್ ಅನ್ನಾದರೂ ವಿಜಯಪುರಕ್ಕೆ ತರುತ್ತಿದ್ದೆ. ಕೈಯಲ್ಲಿ ಅಧಿಕಾರ ಇದ್ದರೂ ಜಿಗಜಿಣಗಿ ಅವರು ಏನೂ ಮಾಡಲಿಲ್ಲ ಎಂದರು. 

ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಆಲಮಟ್ಟಿಗೆ 80 ಟಿಎಂಸಿ ನೀರು ಬರಬೇಕಾದರೆ ಅದರ ಶ್ರೇಯಸ್ಸು ಎಚ್.ಡಿ. ದೇವೆಗೌಡರಿಗೆ ಸಲ್ಲಬೇಕು. ದೇವೆಗೌಡರು ವಿಜಯಪುರ ಜಿಲ್ಲೆಗೆ ನೀಡಿದ ಕೊಡುಗೆಯನ್ನು ಯಾರೂ ಮರೆಯಬಾರದು ಎಂದರು. 

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ, ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ, ಶಿಕ್ಷಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ.ದೇವಾನಂದ ಚವ್ಹಾಣ, ಮಾಜಿ ಸಚಿವ ರೇವುನಾಯಕ ಬೆಳಮಗಿ, ವಿಧಾನ ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಬಿ.ಜಿ.ಪಾಟೀಲ ಹಲಸಂಗಿ, ವಿಠ್ಠಲ ಕಟಕದೊಂಡ, ಕಾಂತಾ ನಾಯಕ, ಮೈತ್ರಿ ಪಕ್ಷದ ಅಭ್ಯರ್ಥಿ ಡಾ.ಸುನೀತಾ ಚೌವ್ಹಾಣ, ಮಹಾದೇವಿ ಗೋಕಾಕ, ಅಬ್ದುಲ್‍ಹಮೀದ್ ಮುಶ್ರೀಪ್, ಮುಹಹ್ಮದ್‍ ರಫೀಕ್ ಟಪಾಲ್, ಸಲೀಂ ಉಸ್ತಾದ್, ಅಶೋಕ ಮನಗೂಳಿ ಮೊದಲಾದವರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News