ಶಾಸಕ ರಾಮದಾಸ್‌ಗೆ 25 ಲಕ್ಷ ರೂ. ಬೇಡಿಕೆ ಇಟ್ಟ ಪತ್ರಕರ್ತ: ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು

Update: 2019-04-19 17:35 GMT

ಮೈಸೂರು,ಎ.19: ಬೆಂಗಳೂರಿನಿಂದ ಪ್ರಕಟಗೊಳ್ಳುವ ‘ಹಾಯ್ ಬೆಂಗಳೂರು’ ಪಾಕ್ಷಿಕ ಪತ್ರಿಕೆಯಲ್ಲಿ ಮಾನಹಾನಿ ಲೇಖನ ಪ್ರಕಟಿಸುತ್ತೇನೆಂದು ಬೆದರಿಸಿ 25 ಲಕ್ಷರೂ.ಗೆ ಬೇಡಿಕೆಯಿಟ್ಟ ಪತ್ರಕರ್ತನ ವಿರುದ್ಧ ದೂರು ನೀಡಿರುವುದಾಗಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರವೀಶ್ ಸಾರಥ್ಯದಲ್ಲಿ ಹಾಯ್ ಬೆಂಗಳೂರು ಪಾಕ್ಷಿಕ ಪತ್ರಿಕೆಯ ವರದಿಗಾರ ಪ್ರದೀಪ್, ಎಂ.ಮಧುಕುಮಾರ್ ಹಾಗೂ ಅವರ ಸಂಪಾದಕ, ಕಾರ್ಯನಿರ್ವಾಹಕ ಸಂಪಾದಕ ಶರತ್‌ಕುಮಾರ್ ಮತ್ತು ಎಂ.ಬಿ.ಅವರ ನಿರ್ದೇಶನದಂತೆ ಪತ್ರಿಕೆಯಲ್ಲಿ ತಮ್ಮ ಹಾಗೂ ಅವರ ಸಹೋದರ ಶ್ರೀಕಾಂತ್ ದಾಸ್ ವಿರುದ್ಧ ಮಾನಹಾನಿ ಲೇಖನವನ್ನು ಬರೆದಿದ್ದು, ಅದನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಿ ಮಾನಹಾನಿ ಮಾಡುತ್ತೇವೆ ಎಂದು ಬೆದರಿಸುವ ಮೂಲಕ 25 ಲಕ್ಷ ರೂ.ಗಳಿಗೆ ಬೇಡಿಕೆಯಿಟ್ಟಿದ್ದರು. ಹಣ ನೀಡದಿದ್ದರೆ ಅದನ್ನು ಪ್ರಕಟಿಸುತ್ತೇವೆಂದು ಹೇಳಿ ಎ.15ರ ಬೆಳಗ್ಗೆ ಕಚೇರಿಗೆ ಒಂದು ಪತ್ರಿಕೆ ತಲುಪಿಸಿದ್ದರು. ಈ ಮೂಲಕ ನಮ್ಮನ್ನು ಹೆದರಿಸಿ ಹಣ ವಸೂಲು ಮಾಡಲು ಪ್ರಯತ್ನಿಸಿದ್ದರು. ಈ ಕುರಿತು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

ಈ ಪತ್ರಕರ್ತರು ನಮ್ಮನ್ನು ವೈಯುಕ್ತಿಕವಾಗಿ ಭೇಟಿಯಾಗ ಬಯಸಿದ್ದರು. ಆದರೆ, ನಾನು ಅವಕಾಶ ನೀಡಿರಲಿಲ್ಲ. ನನ್ನ ಸಹೋದರನನ್ನೂ ಭೇಟಿಯಾಗ ಬಯಸಿದ್ದರು. ಆದರೆ, ನಾವಿಬ್ಬರೂ ಭೇಟಿಗೆ ನಿರಾಕರಿಸಿದ್ದೆವು. ಜಯದೇವ ಆಸ್ಪತ್ರೆಯ ವೈದ್ಯ ಡಾ.ಮಧು ಈ ಕುರಿತು ನನಗೆ ಸಾಕಷ್ಟು ಸಂದೇಶ ಕಳುಹಿಸಿದ್ದರು. ವೈದ್ಯರ ಭೇಟಿಗೆ ಒಪ್ಪಿ ಅವರ ಫಾರ್ಮ್ ಹೌಸ್‌ಗೆ ತೆರಳಿದ್ದೆ. ನನ್ನ ಸಹಾಯಕರಿಗೆ ಅಲ್ಲಿ ಏನೆಲ್ಲ ನಡೆಯಲಿದೆ ಎನ್ನುವ ಬಗ್ಗೆ ಮಾಹಿತಿ ದಾಖಲಿಸುವಂತೆ ಸೂಚಿಸಿದ್ದೆ. ಪ್ರದೀಪ್ ಮಧುಕುಮಾರ್ ಎಂಬ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಸೂಚನೆ ನೀಡಿದ್ದ. ನಿಮ್ಮ ಬಗ್ಗೆ ಅವಹೇಳನಕಾರಿ ವರದಿಯನ್ನು ಪ್ರಿಂಟ್ ಮಾಡಲಾಗಿದೆ ಎಂದು ಮಾರ್ಕೆಟ್ ಗೆ ಬರೆದ ಪ್ರತಿ ತೋರಿಸಿದ್ದ. ಪ್ರಿಂಟ್ ಆದ್ರೂ ಪರ್ವಾಗಿಲ್ಲ. ನಮ್ಮನ್ನು ನೋಡಿಕೊಳ್ಳಿ ಎಂದಿದ್ದ. ಡಾಕ್ಟರ್ ಮಧು ಡೀಲ್‌ನ ಮುಂದಾಳತ್ವ ವಹಿಸಿದ್ದ. ಪ್ರಿಂಟ್ ಆಗಿರುವ ಪ್ರತಿ ಸುಟ್ಟುಹಾಕಲು 25ಲಕ್ಷರೂ.ಬೇಡಿಕೆ ಇಟ್ಟಿದ್ದರು ಎಂದು ಹೇಳಿದರು.

ಈ ಡೀಲ್‌ನಲ್ಲಿ ರೈತ ಸಂಘದ ಮುಖಂಡರೋರ್ವರು, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿಬೆಳೆಗೆರೆ ಹಾಗೂ ಹಿರಿಯ ವರದಿಗಾರರು ಶಾಮೀಲಾಗಿದ್ದಾರೆ ಎಂದು ಡಾಕ್ಟರ್ ಮಧು ಬಾಯ್ಬಿಟ್ಟಿದ್ದು, ಈ ವಿಚಾರವನ್ನು ಕೂಡಾ ದಾಖಲಿಸಲಾಗಿದೆ ಎಂದು ತಿಳಿಸಿದರು.

ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಪ್ರದೀಪನನ್ನು 200ಪ್ರತಿಗಳ ಜೊತೆ 50 ಸಾವಿರ ರೂ. ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಲಿದ್ದು, ವೈದ್ಯ ಮಧು ಹಾಗೂ ಪತ್ರಿಕೆಯ ಸಂಪಾದಕ ಬಳಗವನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಪಾಲುದಾರಿಕೆಯಲ್ಲಿ ಸಾಕಷ್ಟು ಮಂದಿಯ ಹೆಸರಿದ್ದು, ಎಲ್ಲರ ಮೇಲೂ ದೂರು ನೀಡಲಾಗಿದೆ ಎಂದು ಹೇಳಿದದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News