ಮೆಗಾಸಿಟಿ ಅವ್ಯವಹಾರ ತನಿಖೆ ವಿರೋಧಿಸಿ ಸಿ.ಪಿ ಯೋಗೇಶ್ವರ್ ಸಲ್ಲಿಸಿದ್ದ ಅರ್ಜಿ ವಜಾ

Update: 2019-04-19 18:06 GMT

ಬೆಂಗಳೂರು, ಎ.19: ಮೆಗಾಸಿಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವಿರೋಧಿಸಿ ತಮ್ಮ ವಿರುದ್ಧ ಆರೋಪವನ್ನು ಕೈ ಬಿಡುವಂತೆ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ಕೋರ್ಟ್ ವಜಾಗೊಳಿಸಿದೆ.

ಜನರಿಗೆ ನಿವೇಶನ ಕೊಡುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದ್ದ ಆರೋಪದ ಮೇಲೆ ಗಂಭೀರ ವಂಚನೆ ತನಿಖಾ ಕಚೇರಿ ಯೋಗೇಶ್ವರ್ ಸೇರಿದಂತೆ ಹಲವರ ವಿರುದ್ಧ ಕೇಸ್ ದಾಖಲಿಸಿತ್ತು. ಈ ಕೇಸ್ ಅನ್ನು ವಜಾಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಕ್ರಿಮಿನಲ್ ಪ್ರಕರಣಗಳಲ್ಲಿ ಕಾನೂನಿನ ಕಾರ್ಯ ವಿಧಾನಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಾಕ್ಷಿಗಳ ವಿಚಾರಣೆ ಹಂತದಲ್ಲಿ ಆರೋಪಿಗಳು ತನಿಖೆ ವಿರೋಧಿಸಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲಾಗದು ಎಂದು ವಿಶೇಷ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ತಿಳಿಸಿದ್ದಾರೆ.

ಸದ್ಯ ತನಿಖೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಕೋರ್ಟ್ ವಿಚಾರಣೆ ಹಂತದಲ್ಲಿ ಸಾಕ್ಷಿಗಳ ಹೇಳಿಕೆ ದಾಖಲಾದ ನಂತರ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ. ಫೆಬ್ರವರಿ 27ರ 2012ರಂದು ಗಂಭೀರ ವಂಚನೆ ತನಿಖಾ ಕಚೇರಿ ಅಧಿಕಾರಿ ಕೇಸ್ ದಾಖಲಿಸಿದ್ದರು. ಈ ಸಂಬಂಧ ನ್ಯಾಯಾಲಯ ಆರೋಪಿಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಈ ಹಂತದಲ್ಲಿ ಆರೋಪಿಗಳು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲಾಗದು ಎಂದು ಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News