ಸ್ಟ್ರಾಂಗ್ ರೂಮ್ ಸೇರಿದ ಅಭ್ಯರ್ಥಿಗಳ ಭವಿಷ್ಯ: ಜಿಲ್ಲಾದ್ಯಂತ ಸೋಲು ಗೆಲುವಿನ ಲೆಕ್ಕಾಚಾರ

Update: 2019-04-19 18:38 GMT

ಚಿಕ್ಕಮಗಳೂರು, ಎ.19: ರಾಜ್ಯದಲ್ಲಿ ಲೋಕಸಭೆ ಚುನಾವಣೆ-2019ರ ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸೇರಿದಂತೆ ಕಣದಲ್ಲಿರುವ ಒಟ್ಟು 12 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಗಿದೆ. 

ಚುನಾವಣೆಯಲ್ಲಿ ಯಾವ ಪಕ್ಷದ ಯಾವ ಅಭ್ಯರ್ಥಿಗೆ ಮತದಾರ ಸಂಸದನ ಸ್ಥಾನಮಾನ ನೀಡಲಿದ್ದಾನೆಂಬ ಗುಟ್ಟು ಸದ್ಯ ಸ್ಟ್ರಾಂಗ್‍ರೂಮ್‍ಗಳಲ್ಲಿ ಭದ್ರಗೊಂಡಿರುವ ಮತಯಂತ್ರಗಳಲ್ಲಿ ನಮೂದಾಗಿದ್ದು, ಈ ಗುಟ್ಟು ರಟ್ಟಾಗಲು ಮೇ 13ರ ವರೆಗೆ ಕಾಯಬೇಕಾಗಿರುವುದು ಅನಿವಾರ್ಯವಾಗಿದ್ದು, ಕ್ಷೇತ್ರದಲ್ಲಿ ಮತದಾನ ಮುಗಿದ ಮೇಲೆ ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಚರ್ಚೆಗೆ ಗ್ರಾಸವಾಗುತ್ತಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ಕಣದಲ್ಲಿದದ 12 ಅಭ್ಯರ್ಥಿಗಳ ಪೈಕಿ ಬಿಜೆಪಿಯ ಶೋಭಾ ಕರಂದ್ಲಾಜೆ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೆಸರುಗಳು ಮಾತ್ರ ಚರ್ಚೆಯಲ್ಲಿದ್ದು, ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಬಿಜೆಪಿ ಪರವಾಗಿ ಏಕಪಕ್ಷೀಯ ಮತದಾನವಾಗಿದ್ದು, ಶೋಭಾ ಹಿಂದಿಗಿಂತಲೂ ಭಾರೀ ಅಂತರದ ಗೆಲುವಿನ ದಾಖಲೆ ಬರೆಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದರೇ, ಇತ್ತ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷಗಳ ಮುಖಂಡರು ಪ್ರಮೋದ್ ಮಧ್ವರಾಜ್ ಅವರೇ ಭಾರೀ ಅಂತರದಿಂದ ಗೆಲ್ಲಲಿದ್ದಾರೆಂದು ಭವಿಷ್ಯ ನುಡಿಯುತ್ತಿದ್ದಾರೆ.

'ಈ ಬಾರಿ ಜಿಲ್ಲೆಯ ಮತದಾರರು ಮೋದಿ ಅವರ ಐದು ವರ್ಷಗಳ ಆಡಳಿತಕ್ಕೆ ಮನಸೋತಿದ್ದಾರೆ. ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ಅವರಿಗೆ ಕಾಲಾವಾಕಾಶ ಸಾಕಾಗಿಲ್ಲ. ಇನ್ನೂ ಐದು ವರ್ಷಗಳ ಅವಧಿಗೆ ಮೋದಿಗೆ ಅಧಿಕಾರ ನೀಡಿದಲ್ಲಿ ದೇಶದ ಆರ್ಥಿಕತೆ ಎಲ್ಲ ದೇಶಗಳನ್ನೂ ಮೀರಿಸಲಿದೆ ಎಂಬ ಭಾವನೆಯಿಂದಾಗಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ತವಕದಿಂದಾಗಿ ವಿಶೇಷವಾಗಿ ಯುವ ಮತದಾರರು ಹಾಗೂ ಮಹಿಳೆಯರು ಜಿಲ್ಲಾದ್ಯಂತ ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಸಾರಸಗಟಾಗಿ ಮತ ನೀಡಿದ್ದಾರೆಂಬ ವಾದ ಬಿಜೆಪಿ ಪಕ್ಷದ ವಲಯದಿಂದ ಕೇಳಿ ಬರುತ್ತಿದೆ.

ಇತ್ತ ಮೈತ್ರಿ ಪಕ್ಷಗಳ ಮುಖಂಡರು, ಐದು ವರ್ಷಗಳ ಅಧಿಕಾರವಧಿಯಲ್ಲಿ ಪ್ರಧಾನಿ ಮೋದಿ ಕೇವಲ ಮಾತು ಹಾಗೂ ವಿದೇಶ ಸುತ್ತಲೂ ತಮ್ಮನ್ನು ಸೀಮಿತ ಮಾಡಿಕೊಂಡಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ನೀಡಿದ ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಕ್ಷೇತ್ರದ ಹಿಂದಿನ ಸಂಸದೆ ಶೋಭಾ ಅವರು ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಕೊಳ್ಳುವ ಸಲುವಾಗಿ ಕ್ಷೇತ್ರ ಮರೆತಿದ್ದರು. ಈ ಕಾರಣಕ್ಕೆ ಮತದಾರರು ಈ ಬಾರಿ ಕೇಂದ್ರ ಹಾಗೂ ಕ್ಷೇತ್ರದಲ್ಲಿ ಬಿಜೆಪಿಗೆ ಅಧಿಕಾರ ನೀಡುವುದಕ್ಕೆ ವಿರೋಧವಿದ್ದಾರೆ. ಈ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಮತದಾನ ಮಾಡಿದ್ದಾರೆಂಬ ಅಭಿಪ್ರಾಯ ಮುಂದಿಡುತ್ತಿದ್ದಾರೆ.

ಎರಡೂ ಜಿಲ್ಲೆಗಳಲ್ಲಿ ಕಾಂಗ್ರೆಸ್ ತನ್ನದೇಯಾದ ಮತದಾರರನ್ನು ಹೊಂದಿದ್ದು, 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದು, ಒಂದೂವರೆ ಲಕ್ಷ ಮತಗಳ ಅಂತರದಿಂದ. ಸಿಪಿಐ ಪಕ್ಷದ ಮತದಾರರು ಎರಡೂ ಜಿಲ್ಲೆಗಳಲ್ಲಿದ್ದು, ಕಮ್ಯೂನಿಷ್ಟರ ಮತಗಳು ಹಾಗೂ ಜೆಡಿಎಸ್ ಮತಗಳು ಈ ಅಂತರವನ್ನು ಸರಿದೂಗಿಸುವುದರಿಂದ ಎರಡೂ ಜಿಲ್ಲೆಗಳಲ್ಲಿ ಪ್ರಮೋದ್ ಮಧ್ವರಾಜ್ ಲೀಡ್ ಕಾಯ್ದುಕೊಳ್ಳಲಿದ್ದಾರೆ ಎಂಬ ಅಂಕಿ ಅಂಶಗಳ ಸಮೀಕರಣವನ್ನು ಕಾಂಗ್ರೆಸ್ ಮುಖಂಡರು ತಮ್ಮ ವಾದದ ಸಮರ್ಥನೆಗೆ ಮುಂದಿಡುತ್ತಿದ್ದಾರೆ.

ಒಟ್ಟಾರೆ ಮತದಾನ ಮುಗಿದ ಬಳಿಕ ಜಿಲ್ಲಾದ್ಯಂತ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದು, ಅವರ ಕುತೂಹಕ್ಕೆ ಮೇ 23ರಂದು ತೆರೆಬೀಳಲಿದೆ. ಅಲ್ಲಿಯವರೆಗೂ ಗೆಲುವಿನ ಲೆಕ್ಕಾಚಾರ ಸಾಮಾನ್ಯವಾಗಿರಲಿದೆ.

ಮೈತ್ರಿ ಮುಖಂಡರು ಪ್ರಚಾರದಲ್ಲಿ ಎಡವಿದ್ದಾರೆಯೇ?
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ತಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತ ಎನ್ನುತ್ತಿದ್ದಾರಾರೂ ಈ ಪಕ್ಷಗಳ ಮತದಾರರು ಮೈತ್ರಿ ಪಕ್ಷಗಳ ಮುಖಂಡರ ಕಾರ್ಯವೈಖರಿಗೆ ಕೆಲವೆಡೆ ಅಸಮಾದಾನ ವ್ಯಕ್ತಪಡಿಸಿದ್ದಾರೆಂದು ಆರೋಪಿಸುತ್ತಿರುವುದು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರವನ್ನು ವರಿಷ್ಠರು ಜೆಡಿಎಸ್‍ಗೆ ಬಿಟ್ಟು ಕೊಟ್ಟಿರುವುದೇ ದೊಡ್ಡ ತಪ್ಪು, ಮೈತ್ರಿ ಮಡಿಕೊಂಡು ಜಂಟಿಯಾಗಿ ಚುನಾವಣೆ ಎದುರಿಸಲು ಮುಂದಾದ ಸಂದರ್ಭದಲ್ಲಿ ಬಿರುಸಿನ ಪ್ರಚಾರಕ್ಕಿಳಿಯಬೇಕಿತ್ತು. ಆದರೆ ಈ ಪಕ್ಷಗಳ ಜಿಲ್ಲಾ ಮುಖಂಡರು ಕಡೆ ಗಳಿಗೆಯಲ್ಲಿ ಪ್ರಚಾರಕ್ಕಿಳಿದು ಬೀಕಾಬಿಟ್ಟಿ ಪ್ರಚಾರ ಮಾಡಿದರು. ಗ್ರಾಮೀಣ ಭಾಗಗಲ್ಲಿ ಕಾಂಗ್ರೆಸ್, ಜೆಡಿಎಸ್ ಮತದಾರರಿರುವ ಮನೆಗಳಿಗೆ ಮೈತ್ರಿ ಪಕ್ಷಗಳ ಕರಪತ್ರವೂ ಸೇರಿಲ್ಲ ಎಂಬ ಅಭಿಪ್ರಾಯವೂ ಜಿಲ್ಲೆಯಲ್ಲಿ ಕೇಳಿ ಬರುತ್ತಿದ್ದು, ಮುಖಂಡರು ಮಾಡಿದ ತಪ್ಪಿಗೆ ಸರಿಯಾಗಿಯೇ ಪ್ರಾಯಶ್ಚಿತ್ತವಾಗಲಿದೆ ಎಂಬ ಅಸಮಾದಾನ ಹೊಗೆ ಎದ್ದಿದೆ. ಆದರೆ ಇದನ್ನು ಕಾಂಗ್ರೆಸ್ ಜೆಡಿಎಸ್ ಮುಖಂಡರು ಸ್ಪಷ್ಟನೆ ನೀಡಿದ್ದು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರೊಂದಿಗೆ ಸಿಪಿಐ ಮುಖಂಡರು ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದೇವೆ. ಬಿಜೆಪಿಗಿಂತಲೂ ನಾವು ಪ್ರಚಾರದಲ್ಲಿ ಮುಂದಿದ್ದೇವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News