ಮತದಾನದಲ್ಲೂ ಮಾದರಿಯಾದ ಕೊಡಗಿನ ಮತದಾರರು

Update: 2019-04-20 18:26 GMT

ಮಡಿಕೇರಿ, ಎ.20 : ಶಿಸ್ತು, ಸಂಯಮ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿಯಾದ ಕೊಡಗು ಮತದಾನದಲ್ಲೂ ಇತರ ಜಿಲ್ಲೆಗಳಿಗೆ ಮಾದರಿ ಜಿಲ್ಲೆ ಎನಿಸಿಕೊಂಡಿದೆ. ಹೆಚ್ಚಿನ ಮತಗಟ್ಟೆಗಳಲ್ಲಿ ಶೇ.100 ರಷ್ಟು ಮತದಾನವಾಗಿದ್ದರೆ, ಕಳೆದ ಮಳೆಗಾಲದಲ್ಲಿ ಸಂಕಷ್ಟವನ್ನು ಎದುರಿಸಿದ ಸಂತ್ರಸ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿರುವುದು ಗಮನಾರ್ಹವಾಗಿದೆ.

ಜಿಲ್ಲೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಗಣಗೂರು ಅರಣ್ಯ ಇಲಾಖಾ ಕಚೇರಿ ಮತ ಕೇಂದ್ರದಲ್ಲಿ ಶೇ100 ರಷ್ಟು ಮತದಾನವಾಗುವ ಮೂಲಕ ಜಿಲ್ಲೆಯಲ್ಲಿ ಶೇ.100 ಮತದಾನವಾದ ಕೇಂದ್ರ ಎಂದೆನಿಸಿದೆ. ಅಂತೆಯೇ, ಅತ್ಯಂತ ಕಡಿಮೆ ಮತದಾರರನ್ನು ಹೊಂದಿರುವ ಕೇಂದ್ರವಾಗಿಯೂ ಬಿಂಬಿತವಾಗಿದೆ. ಈ ಮತಗಟ್ಟೆಯಲ್ಲಿ 5 ಪುರುಷ ಮತ್ತು 3 ಮಹಿಳಾ ಮತದಾರರು ಸೇರಿದಂತೆ ಒಟ್ಟು 8 ಮತದಾರರಿದ್ದು ಮತದಾನದಂದು ಬೆಳಗ್ಗೆ 11 ಗಂಟೆಗೆ ಈ ಎಲ್ಲಾ 8 ಮತದಾರರು ಮತ ಚಲಾಯಿಸಿದ್ದರಿಂದಾಗಿ ಈ ಮತಗಟ್ಟೆಯಲ್ಲಿ 11 ಗಂಟೆಗೇ ಮತದಾನ ಪೂರ್ಣಗೊಂಡಿದೆ. ಇದರಿಂದಾಗಿ ಶೇ.100 ಮತದಾನವಾದ ಹಿರಿಮೆ ಈ ಮತಗಟ್ಟೆಗೆ ದೊರಕಿದೆ. ಮತದಾನ ಪೂರ್ಣವಾಗಿದ್ದರೂ ಕೂಡ ಮತಗಟ್ಟೆ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಸಂಜೆ 6 ಗಂಟೆಯವರೆಗೂ ಮತ ಕೇಂದ್ರದಲ್ಲಿದ್ದುದು ಕಂಡು ಬಂತು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಅತ್ಯಧಿಕ ಪ್ರಮಾಣದ ಮತದಾನ ಕೆ.ಪೆರಾಜೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಾಗಿದೆ. ಇಲ್ಲಿನ 843 ಮತದಾರರ ಪೈಕಿ 394 ಪುರುಷ, 385 ಮಹಿಳಾ ಮತದಾರರೂ ಸೇರಿದಂತೆ ಒಟ್ಟು 779 ಮತದಾರರು ಹಕ್ಕು ಚಲಾಯಿಸಿದ್ದು ಶೇ.92 ಮತದಾನವಾಗಿದೆ. ವಿರಾಜಪೇಟೆ ಕ್ಷೇತ್ರದಲ್ಲಿನ ಬೆಟ್ಟತ್ತೂರು ಮತಗಟ್ಟೆಯಲ್ಲಿ ಶೇ.88.14 ಮತದಾನವಾಗಿ ಈ ಕ್ಷೇತ್ರದಲ್ಲಿ ಮೂರನೇ ಅತ್ಯಧಿಕ ಮತದಾನವಾದ ಕೇಂದ್ರ ಎನಿಸಿಕೊಂಡಿದೆ. ಇಲ್ಲಿದ್ದ 381 ಮತದಾರರ ಪೈಕಿ, 170 ಪುರುಷ, 166 ಮಹಿಳಾ ಮತದಾರರು ಸೇರಿ 336 ಮತದಾರರು ಹಕ್ಕು ಚಲಾಯಿಸಿದ್ದಾರೆ. 

ಮಡಿಕೇರಿ ಕ್ಷೇತ್ರ
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತ್ತೂರು ಗ್ರಾಮದ ಸರ್ಕಾರಿ ಶಾಲಾ ಮತಗಟ್ಟೆಯಲ್ಲಿ ಶೇ.96.20 ಮತದಾನವಾಗಿದೆ. ಇದು ಈ ಕ್ಷೇತ್ರದಲ್ಲಿ ಅತ್ಯಧಿಕ ಪ್ರಮಾಣದ ಮತದಾನವಾಗಿದೆ. ಇಲ್ಲಿನ 421 ಮತದಾರರ ಪೈಕಿ 203 ಪುರುಷ, 202 ಮಹಿಳಾ ಮತದಾರರೂ ಸೇರಿದಂತೆ ಒಟ್ಟು 405 ಮತದಾರರು ಹಕ್ಕು ಚಲಾಯಿಸಿದ್ದಾರೆ. ಶೇ.90.91ರಷ್ಟು ಮತದಾನವಾಗುವ ಮೂಲಕ ಕಿರುದಾಳೆ ಗ್ರಾಮದ ಸರ್ಕಾರಿ ಶಾಲಾ ಮತಗಟ್ಟೆ ಕ್ಷೇತ್ರದಲ್ಲಿ ಎರಡನೇ ಅತ್ಯಧಿಕ ಮತದಾನವಾದ ಕೇಂದ್ರ ಎನಿಸಿದೆ. ಇಲ್ಲಿನ ಒಟ್ಟು 231 ಮತದಾರರ ಪೈಕಿ 110 ಪುರುಷ, 100 ಮಹಿಳಾ ಮತದಾರರು ಒಳಗೊಂಡಂತೆ ಒಟ್ಟು 210 ಮಂದಿ ಮತ ಹಾಕಿದ್ದಾರೆ. 

ತಾಕೇರಿ ಗ್ರಾಮದ ಸರ್ಕಾರಿ ಶಾಲೆಯ ಬಲಪಾರ್ಶ್ವದ ಮತಗಟ್ಟೆಯಲ್ಲಿ ಶೇ.89.44 ಮತದಾನವಾಗಿದ್ದು ಮಡಿಕೇರಿ ಕ್ಷೇತ್ರದಲ್ಲಿ ಮೂರನೇ ಅತಿ ಹೆಚ್ಚಿನ ಮತದಾನವಾದ ಮತಗಟ್ಟೆಯಾಗಿದೆ. ಇಲ್ಲಿನ ಒಟ್ಟು 644 ಮತದಾರರ ಪೈಕಿ 298 ಪುರುಷ, 278 ಮಹಿಳಾ ಮತದಾರರೂ ಸೇರಿದಂತೆ ಒಟ್ಟು 576 ಮತದಾರರು ಹಕ್ಕು ಚಲಾಯಿಸಿದ್ದಾರೆ. 

ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.100ರಷ್ಟು ಮತದಾನವಾದ ಗಣಗೂರು ಅತೀ ಹೆಚ್ಚು ಮತದಾನವಾದ ಮತ ಕೇಂದ್ರವಾಗಿದ್ದು, ಮಡಿಕೇರಿ ಕ್ಷೇತ್ರದ ಅತ್ತೂರು ಗ್ರಾಮದ ಮತಗಟ್ಟೆ ಶೇ.96.20 ಮತದಾನದ ಮೂಲಕ ಎರಡನೇ ಅತೀ ಹೆಚ್ಚು ಮತ ಚಲಾವಣೆಯಾದ ಮತಗಟ್ಟೆಯಾಗಿದೆ. ಕೆ.ಪೆರಾಜೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮತಗಟ್ಟೆಯು ಶೇ. 92ರಷ್ಟು ಮತದಾನ ಮಾಡಿದ ಕೇಂದ್ರವಾಗಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮತಚಲಾವಣೆಯಾದ ಮೂರನೇ ಮತಗಟ್ಟೆ ಎನಿಸಿದೆ. 

ಕಡಿಮೆ ಮತದಾನ
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನ ಶೇ.55.59 ಮಹದೇವಪೇಟೆಯ ನಗರಸಭೆ ಶಾಲೆಯ ಬಲಪಾರ್ಶ್ವದ ಮತಗಟ್ಟೆಯಲ್ಲಾಗಿದೆ. ಇಲ್ಲಿನ ಒಟ್ಟು 970 ಮತದಾರರ ಪೈಕಿ 264 ಪುರುಷ, 248 ಮಹಿಳಾ ಮತದಾರರೂ ಸೇರಿದಂತೆ ಒಟ್ಟು 512 ಮತದಾರರು ಹಕ್ಕು ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ ಎರಡನೇ ಅತೀ ಕಡಿಮೆ ಮತದಾನ ಮಡಿಕೇರಿಯ ಬಸಪ್ಪ ಶಿಶುವಿಹಾರ ಕೇಂದ್ರದ ಮತಗಟ್ಟೆಯಲ್ಲಾಗಿದ್ದು, ಇಲ್ಲಿನ 1108 ಮತದಾರರ ಪೈಕಿ 327 ಪುರುಷ, 312 ಮಹಿಳಾ ಮತದಾರರೂ ಸೇರಿ 639 ಮತದಾರರು ಮಾತ್ರ ಹಕ್ಕು ಚಲಾಯಿಸಿ ಶೇ.57.67 ರಷ್ಟು ಮತಚಲಾವಣೆಯಾಗಿದೆ.
ಮಡಿಕೇರಿ ನಗರಸಭೆಯ ಕಚೇರಿ ಕಟ್ಟಡದಲ್ಲಿದ್ದ ಮಾದರಿ ಮತಗಟ್ಟೆಯಲ್ಲಿಯೂ ಕಡಿಮೆ ಮತದಾನವಾಗಿದೆ. ಇಲ್ಲಿನ 1045 ಮತದಾರರ ಪೈಕಿ 306 ಪುರುಷ, 310 ಮಹಿಳಾ ಮತದಾರರೂ ಸೇರಿ 616 ಮತದಾರರು ಹಕ್ಕು ಚಲಾಯಿಸಿದ್ದು ಶೇ.58.95 ಮತದಾನವಾಗಿದೆ. ಇದು ಕ್ಷೇತ್ರದಲ್ಲಿನ ಮೂರನೇ ಅತೀ ಕಡಿಮೆ ಮತದಾನವಾದ ಕೇಂದ್ರವಾಗಿದೆ. 

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ. 47.82 ಮತದಾನದ  ಮೂಲಕ ಬಾಡಗ ಚೂರಿಕಾಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಎಡಪಾರ್ಶ್ವದ ಮತಗಟ್ಟೆ ಅತ್ಯಂತ ಕಡಮೆ ಮತದಾನವಾದ ಕೇಂದ್ರ ಎನಿಸಿಕೊಂಡಿದೆ. ಇಲ್ಲಿನ 1194 ಮತದಾರರ ಪೈಕಿ 288 ಪುರುಷ, 283 ಮಹಿಳಾ ಮತದಾರರೂ ಸೇರಿದಂತೆ 571 ಮತದಾರರು ಮತಹಾಕಿದ್ದಾರೆ. ಸುಳಗೋಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ 1087 ಮತದಾರರ ಪೈಕಿ 305 ಪುರುಷ, 306 ಮಹಿಳಾ ಮತದಾರರೂ ಸೇರಿದಂತೆ ಒಟ್ಟು 611 ಮತದಾರರು ಹಕ್ಕು ಚಲಾಯಿಸಿದ್ದು ಶೇ.56.21 ಮತದಾನವಾಗಿದ್ದು  ವಿರಾಜಪೇಟೆ ಕ್ಷೇತ್ರದಲ್ಲಿ  ಮೂರನೇ ಅತೀ ಕಡಿಮೆ ಮತದಾನವಾದ ಮತಗಟ್ಟೆ ಎನಿಸಿದೆ.  

ಅರವತ್ತೊಕ್ಲು ಗ್ರಾಮದಲ್ಲಿನ ಸರ್ವದೈವತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಎಡಪಾರ್ಶ್ವದ ಮತಗಟ್ಟೆಯಲ್ಲಿ ಶೇ.57.01 ಮತದಾನವಾಗಿದ್ದು ಕ್ಷೇತ್ರದಲ್ಲಿ ಮೂರನೇ ಅತೀ ಕಡಿಮೆ ಮತದಾನವಾದ ಕೇಂದ್ರವಾಗಿದೆ. ಇಲ್ಲಿನ ಒಟ್ಟು 1142 ಮತದಾರರ ಪೈಕಿ 316 ಪುರುಷ, 335 ಮಹಿಳಾ ಮತದಾರರೂ ಸೇರಿದಂತೆ ಒಟ್ಟು 651 ಮತದಾರರು ಹಕ್ಕು ಚಲಾಯಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಶೇ. 47.82 ಮತದಾನದ ಮೂಲಕ ಬಾಡಗ ಚೂರಿಕಾಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಎಡಪಾರ್ಶ್ವದ ಮತಗಟ್ಟೆ ಅತೀ ಕಡಿಮೆ ಮತದಾನವಾದ ಕೇಂದ್ರ ಎನಿಸಿಕೊಂಡಿದೆ. ನಂತರದ ಸ್ಥಾನ ಶೇ.55.59  ಮತ ಚಲಾವಣೆಯಾದ ಮಹದೇವಪೇಟೆಯ ನಗರಸಭೆ ಶಾಲೆಯ ಬಲಪಾರ್ಶ್ವದ ಮತಗಟ್ಟೆ ಹಾಗೂ ಶೇ.56.21 ಮತಚಲಾವಣೆಯಾದ ಸುಳಗೋಡು ಮತಗಟ್ಟೆಗೆ ಸೇರುತ್ತದೆ. 

ಸಂತ್ರಸ್ತರಾದರೂ ಮಾದರಿ ಮತದಾರರಾದರು

ಕಳೆದ ವರ್ಷದ ಆಗಸ್ಟ್ ನಲ್ಲಿ ಜಲಪ್ರಳಯಕ್ಕೊಳಗಾಗಿ ಜನರು ಸಂಕಷ್ಟಕ್ಕೀಡಾಗಿದ್ದ ಗ್ರಾಮಗಳಲ್ಲಿ ಉತ್ತಮ ಮತದಾನವಾಗಿದೆ. ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾದ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ಶೇ.87ರಷ್ಟು ಮತದಾನವಾಗಿದ್ದು, ಗಾಳಿಬೀಡಿನಲ್ಲಿ ಶೇ.82 ಮತಪ್ರಮಾಣ ಲಭಿಸಿದೆ. ಮಕ್ಕಂದೂರು ಗ್ರಾಮದ ಮತಗಟ್ಟೆಗಳಲ್ಲಿ ಸರಾಸರಿ ಶೇ.75 ರಿಂದ 80ರಷ್ಟು ಮತದಾನವಾಗಿದೆ. ಕಾಂಡನಕೊಲ್ಲಿ ಗ್ರಾಮದ ಮತಗಟ್ಟೆಯಲ್ಲಿ ಶೇ.79 ಮತದಾನವಾಗಿದೆ. ಕಾಲೂರು ಗ್ರಾಮದ ಮತಗಟ್ಟೆಗಳಲ್ಲಿ ಶೇ.77ರಿಂದ ಶೇ.83 ರಷ್ಟು ಮತದಾನವಾಗಿದೆ. ಎಲ್ಲಾ ಆಧುನಿಕ ಸೌಕರ್ಯಗಳನ್ನು ಪಡೆದು ಹಾಯಾಗಿರುವ ಬೆಂಗಳೂರಿನ ಮತದಾರರಿಗಿಂತ ಜಲಪ್ರಳಯದಲ್ಲಿ ಎಲ್ಲವನ್ನೂ ಕಳೆದುಕೊಂಡು ಸಂಕಷ್ಟದ ಜೀವನ ಸಾಗಿಸುತ್ತಿರುವ ಕೊಡಗಿನ ಸಂತ್ರಸ್ತರೇ ಮಾದರಿ ಮತದಾರರಾಗಿ ರಾಜ್ಯದ ಗಮನ ಸೆಳೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News