ಕಾಂಗ್ರೆಸ್ ನವರಿಂದಲೇ ಎಚ್ಡಿಕೆ ಸರಕಾರ ಪತನ: ಸಿ.ಎಚ್.ಲೋಕೇಶ್

Update: 2019-04-22 17:24 GMT

ಚಿಕ್ಕಮಗಳೂರು, ಎ.22: ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ರ ಹೇಳಿಕೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಪ್ರತಿಕ್ರಿಯಿಸಿರುವ ರೀತಿ ಆಶ್ಚರ್ಯವಾಗಿದೆ. ಬಿ.ಎಲ್.ಸಂತೋಷ್ ಈ ಚುನಾವಣೆಯಲ್ಲಿ ಕೊಡುವ ಮತ ಎರಡು ಸರಕಾರಗಳಿಗೆ ಕೊಡುವ ಮತ ಎಂದು ಹೇಳಿರುವುದು ಸರಿಯಾಗಿಯೇ ಇದೆ. ಸಮ್ಮಿಶ್ರ ಸರಕಾರವನ್ನು ಕಾಂಗ್ರೆಸ್ ಮುಖಂಡರೇ ಉರುಳಿಸಲಿದ್ದಾರೆ ಎಂದು ಬಿಜೆಪಿ ವಕ್ತಾರ ಸಿ.ಎಚ್.ಲೋಕೇಶ್ ಟೀಕಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಬೆಂಬಲಿತ ಮುಖ್ಯಮಂತ್ರಿ ಇರುವಾಗಲೇ ನಾವೇ ಮುಂದಿನ ಸಿಎಂ ಎಂದು ಬಹಿರಂಗ ಸಭೆಯಲ್ಲಿ ಹೇಳುತ್ತಿರುವುದು. ಮೂರ್ತಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿರುವ ಅವರು, ಕಾಂಗ್ರೆಸ್ ಮುಖಂಡರು ಹೀಗೆ ಹೇಳುತ್ತಿರುವುದು ಸಮ್ಮಿಶ್ರ ಸರಕಾರದ ಪತನವಾಗುವುದರ ಸೂಚನೆ ಎಂದಿದ್ದಾರೆ.

ಸಂತೋಷ್‌ರ ಮಾತುಗಳು ಅವರ ಮನೆತನವನ್ನು ಹಾಳು ಮಾಡುತ್ತದೆ ಎಂದಿರುವ ಮೂರ್ತಿಗೆ, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಎಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ಮೋದಿ ಮತ್ತು ಯಡಿಯೂರಪ್ಪರವರ ಬಗ್ಗೆ ಏಕವಚನದಲ್ಲಿ ಮಾತನ್ನಾಡುತ್ತಿರುವುದು ಗೊತ್ತಿಲ್ಲವೇ? ಅವರೆಲ್ಲರ ನಾಲಿಗೆ ಅವರ ಮನೆತನಕ್ಕೆ ಕೆಟ್ಟ ಹೆಸರು ತರುವುದಿಲ್ಲವೇ? ಇದು ಅವರ ವೈಚಾರಿಕತೆಯ ದಿವಾಳಿತನವಲ್ಲವೇ? ಎಂದು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಚುನಾವಣಾ ಸಮಯದಲ್ಲಿ ಹಣೆಗೆ ಕುಂಕುಮ ಇಡುವುದು, ಪಂಚೆ ಉಡುವುದು, ಟೆಂಪಲ್ ರನ್ ಮಾಡುವುದು, ಜನರನ್ನು ಮೂರ್ಖರನ್ನಾಗಿಸುವುದಕ್ಕೇ ಹೊರತು ಜನಪರ ಕಾಳಜಿಯಿಂದಲ್ಲ. ಮತದಾರರು ಪ್ರಜ್ಞಾವಂತರಾಗಿದ್ದು, ಇದಕ್ಕೆ ಮರುಳಾಗುವವರು ಅಲ್ಲ, ಅಷ್ಟಕ್ಕೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಯಾವ ದೇಶದ ಪ್ರಜೆ ಎಂಬುದು ಇನ್ನೂ ನಿರ್ಧಾರವಾಗಬೇಕಾಗಿದೆ. ಇದು ಕಾಂಗ್ರೆಸ್ ಪಕ್ಷದ ಅವನತಿಯ ದ್ಯೋತಕವಾಗಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News