ನೆರೆ, ಪ್ರವಾಹದಲ್ಲಿ ಸೇತುವೆ ಹಾಳಾಗದಂತೆ ತಡೆಯಲು ಹೊಸ ಉಪಾಯ

Update: 2019-04-22 17:40 GMT

ತುಮಕೂರು, ಎ.22: ಪ್ರವಾಹ, ನೆರೆಯಂತಹ ಸಂದರ್ಭಗಳಲ್ಲಿ ಹರಿಯುವ ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ರಸ್ತೆ, ಸೇತುವೆಗಳು ತಮ್ಮ ಅಸ್ಥಿತ್ವ ಕಳೆದುಕೊಳ್ಳುವುದು ಸಹಜ ಪ್ರಕ್ರಿಯೆಯಾಗಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದಾಗಿದೆ.

ಹವಾಮಾನ ವೈಫರಿತ್ಯದ ಫಲವಾಗಿ ಕಳೆದ ವರ್ಷ ರಾಜ್ಯದ ಕೊಡಗು ಮತ್ತು ನೆರೆಯ ಕೇರಳ ರಾಜ್ಯಗಳಲ್ಲಿ ಸಂಭವಿಸಿದ ಪ್ರವಾಹದಿಂದ ನಿರ್ಮಿಸಿದ್ದ ಹಲವಾರು ಸೇತುವೆಗಳು ಕೊಚ್ಚಿ ಹೋದ ಪರಿಣಾಮ ನೂರಾರು ದಿನಗಳ ಕಾಲ ಸಾವಿರಾರು ಹಳ್ಳಿಗಳು ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳ ಸಂಪರ್ಕ ಕಡಿದುಕೊಂಡ ನಿದರ್ಶನಗಳು ಕಣ್ಣ ಮುಂದಿವೆ. ನೆರೆ, ಪ್ರವಾಹ ಮತ್ತಿತರರ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿಯೂ ಸೇತುವೆಗಳು ಕುಸಿಯದಂತೆ ವೈಜ್ಞಾನಿಕವಾಗಿ ತಡೆಯುವ ವಿಧಾನವೊಂದನ್ನು ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅದ್ವಿತ್ ಗಣೇಶ್, ಶುಭಂ ವತ್ಸ್,ಅನೂಪ್ ಕುಮಾರ್,ಸುಮಂತ್ ಇವರು ತಮ್ಮ ಗುರುಗಳಾದ ಡಾ.ಟಿ.ಗಂಗಾಧರಯ್ಯ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದಾರೆ.

ವಿದ್ಯಾರ್ಥಿಗಳ ವಿವರಣೆಯ ಪ್ರಕಾರ, ಮಳೆಗಾಲದಲ್ಲಿ ಸೇತುವೆಗಳು ಕುಸಿದು ಹೋಗಲು ಕಳಪೆ ಕಾಮಗಾರಿ ಅಥವಾ ನೀರಿ ವೇಗವನ್ನು ಅಂದಾಜು ಮಾಡದೇ ನಿರ್ಮಿಸಿದ್ದೇ ಕಾರಣ ಎನ್ನುವ ತಿಳುವಳಿಕೆ ಬಹಳಷ್ಟು ಜನರದ್ದಾಗಿದೆ. ಆದರೆ, ವಾಸ್ತವದಲ್ಲಿ ಅದು ಕಾರಣವಲ್ಲ. ನಿಖರವಾದ ಕಾರಣವೆನೆಂದರೆ ವರ್ಷದಿಂದ ವರ್ಷಕ್ಕೆ ಸೇತುವೆ ನಿರ್ಮಿಸಿದ ಜಾಗದಲ್ಲಿ ಮಣ್ಣಿನ ಸವಕಳಿ ಹೆಚ್ಚಾಗುವುದರಿಂದ ಸೇತುವೆಯ ಬೇಸ್‌ಮೆಂಟ್(ತಳಪಾಳ)ಗೆ ಹಾಕಲಾಗಿದ್ದ ಕಾಂಕ್ರಿಟ್ ಸವೋರ್ಟ್ ಶಿಥಲವಾಗುವುದರಿಂದ ಸೇತುವೆಗಳು ಮಳೆಗಾಲದಲ್ಲಿ ಹೆಚ್ಚು ಅಪಾಯಕ್ಕೆ ಒಳಗಾಗುತ್ತವೆ. ಇದನ್ನು ತಡೆಯುವ ನಿಟ್ಟಿನಲ್ಲಿ ‘ಸೆಕ್ಯೂರ್ ಅರೌಂಡ್ ಬ್ರಿಡ್ಜ್ ಅಬೆಂಟಮೆಂಟ್ ಇನ್ ಕ್ಲೇ ಬೆಡ್’(ಮಣ್ಣಿನ ಪದರ ಹಾಳಾಗದಂತೆ ತಡೆಯುವುದು) ಎಂಬ ವಿನೂತನ ಕ್ರಮದ ಮೂಲಕ ಸೇತುವೆಯ ಕಲಂನ ಪಾಯದ ಸುತ್ತಲು ನಿಗದಿತ ಆಳಕ್ಕಿಂತಲೂ ಹೆಚ್ಚು ರಿವಿಟ್‌ಮೆಂಟ್ ನಿರ್ಮಾಣ ಮಾಡುವ ಮೂಲಕ ಮಣ್ಣಿನ ಸವಕಳಿ ತಡೆಯಲು ಸಾಧ್ಯ ಎಂದರು.

ಒಂದು ಹಳ್ಳ, ತೊರೆ ಅಥವಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿದ ಸಂದರ್ಭದಲ್ಲಿ ಮಳೆಗಾಲದಲ್ಲಿ ಅದರಲ್ಲಿಯೂ ಪ್ರವಾಹದಂತಹ ಸಂದರ್ಭದಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಅಂದಾಜಿಸಿ, ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಿವಿಟ್‌ಮೆಂಟ್ ನಿರ್ಮಾಣ ಮಾಡಿದರೆ ಮಣ್ಣಿನ ಸವಕಳಿ ತಡೆಯುಬಹುದಾಗಿದೆ. ಈ ಮಾದರಿಯನ್ನು ನಮ್ಮ ಕಾಲೇಜಿನಲ್ಲಿ ನಿರ್ಮಾಣ ಮಾಡಿ ಪ್ರದರ್ಶಿಸಿದ್ದು, ಸೆಲ್ಟರ್ ಪೀಸ್ಟ್‌ನಲ್ಲಿ ಪ್ರಥಮ ಬಹುಮಾನ ಪಡೆದಿದೆ. ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉತ್ತಮ ಪ್ರಾಜೆಕ್ಟ್ ಆಗಿ ಅಯ್ಕೆಯಾಗಿದೆ ಎಂದು ವಿದ್ಯಾರ್ಥಿಗಳು ವಿವರಿಸಿದರು.
ಈ ವೇಳೆ ಮಾರ್ಗದರ್ಶಕ ಡಾ.ಟಿ. ಗಂಗಾಧರಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News